- ದಾವಣಗೆರೆ ಸೇರಿ 15 ಜಿಲ್ಲೆಗಳಲ್ಲಿ ಕಾಲೇಜುಗಳ ಸ್ಥಾಪನೆ ವಿಚಾರ ನನೆಗುದಿಗೆ: ಜಿಲ್ಲಾಧ್ಯಕ್ಷ ಶಹಬಾಜ್ ಖಾನ್ - - -
ರಾಜ್ಯದಲ್ಲಿ 14 ಮುಸ್ಲಿಂ ಮಹಿಳಾ ಕಾಲೇಜುಗಳನ್ನು ಆರಂಭಿಸುವಂತೆ ಆದೇಶ ಹೊರಡಿಸಿ 9 ತಿಂಗಳಾದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣವೇ ಮುಸ್ಲಿಂ ಮಹಿಳಾ ಕಾಲೇಜುಗಳ ಸ್ಥಾನೆಗೆ ರಾಜ್ಯ ಸರ್ಕಾರ ಮುಂದಾಗಲಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಶಹಬಾಜ್ ಖಾನ್ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 14 ಮುಸ್ಲಿಂ ಮಹಿಳಾ ಕಾಲೇಜುಗಳನ್ನು ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 4.9.2024ರಂದು ಆರ್ಥಿಕ ಇಲಾಖೆ, 24.9.2023ರಂದು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿ, 26.9.2024ರಂದು ರಾಜ್ಯಪಾಲರ ಅಂಕಿತದೊಂದಿಗೆ ಆದೇಶ ಹೊರಡಿಸಲಾಗಿತ್ತು ಎಂದರು.ಕಾಲೇಜುಗಳ ನಿರ್ಮಾಣಕ್ಕೆ ಜಾಗ ಹಾಗೂ ಕಾಮಗಾರಿಗೆ ಅನುದಾನ ಸಹ ಮಂಜೂರಾಗಿದೆ. ಆದರೆ, ಇಂದಿಗೂ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪಿಸುವ ಕಾಮಗಾರಿ ಮಾತ್ರ ಸರ್ಕಾರ ಆರಂಭಿಸಿಲ್ಲ. ತಕ್ಷಣವೇ ಮುಸ್ಲಿಂ ವಕ್ಫ್ ಬೋರ್ಡ್ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗಳಿಗೆ ಈ ಬಗ್ಗೆ ಸೂಚನೆ ನೀಡಿ, ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ಜಾರಿ ಮಾಡುತ್ತಿರುವ ವಕ್ಫ್ ಆಸ್ತಿಗಳ ಸಂರಕ್ಷಣೆ, ಅಭಿವೃದ್ಧಿ, ದುರಸ್ತಿ, ಜೀರ್ಣೋದ್ಧಾರ ಸೇರಿದಂತೆ ₹4776.46 ಲಕ್ಷ ಹಣವಿದೆ. ಆದರೆ, ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳಿಗಾಗಿ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪಿಸಲು ಮಾತ್ರ ಸರ್ಕಾರ ಹಿಂದೆಜ್ಜೆ ಇಡುತ್ತಿರುವುದು ಸರಿಯಲ್ಲ. ತಕ್ಷಣವೇ ಸಂಬಂಧಿಸಿದ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಿ ಎಂದರು.
- - -
- - -