೧೦೦ ಹೊಸ ಮಲ್ಟಿ ಸ್ಕಿಲ್ ಡೆವೆಲಪ್‌ಮೆಂಟ್ ಕೇಂದ್ರ ಸ್ಥಾಪನೆ

KannadaprabhaNewsNetwork |  
Published : Aug 31, 2024, 01:37 AM IST

ಸಾರಾಂಶ

೧೦೦ ಹೊಸ ಮಲ್ಟಿ ಸ್ಕಿಲ್ ಡೆವೆಲಪ್‌ಮೆಂಟ್ ಕೇಂದ್ರ ಸ್ಥಾಪನೆ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಯುವಕರಿಗೆ ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಕಲ್ಪಿಸಲು ಸುಮಾರು ೨೪೦ ಕಂಪನಿಗಳು ಇಲ್ಲಿಗೆ ಆಗಮಿಸಿವೆ. 8 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದು, ಇದು ಅತಂತ್ಯ ಯಶಸ್ವಿಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ತಿಳಿಸಿದರು.

ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ವಿಶೇಷ ಆಸಕ್ತಿ ವಹಿಸಿ ಚನ್ನಪಟ್ಟಣದಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದಾರೆ. ಇದರಿಂದ ಜಿಲ್ಲೆಯ ಉದ್ಯೋಗಾಕಾಂಶಿಗಳಿಗೆ ಲಾಭವಾಗಿದೆ ಎಂದರು.

ಯುವಕರಿಗಾಗಿ ನಮ್ಮ ಪಕ್ಷ ತನ್ನ ಪ್ರಣಾಳಿಕೆಯಲ್ಲಿಯೇ ೫ನೇ ಗ್ಯಾರೆಂಟಿಯಾಗಿ ಯುವನಿಧಿ ಯೋಜನೆಯನ್ನು ಘೋಷಿಸಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದನ್ನು ಯುವಕರಿಗಾಗಿ ಜಾರಿಗೆ ತಂದಿದೆ. ೧.೬೦ ಲಕ್ಷ ಮಂದಿ ಇದರ ಅನುಕೂಲ ಪಡೆದಿದ್ದಾರೆ. ಇದು ಯುವಕರಿಗೆ ನಮ್ಮ ಸರ್ಕಾರದ ಕಾಣಿಕೆಯಾಗಿದೆ ಎಂದರು. ಪದವಿ ಪಡೆದ ಯುವಕರು ಉದ್ಯೋಗ ಹುಡುಕುವ ವೇಳೆಯಲ್ಲಿ ತಮ್ಮ ಪೋಷಕರ ಬಳಿ ಹಣ ಕೇಳಬಾರದು ಎಂದು ಯೋಜನೆ ಜಾರಿಗೆ ತಂದಿದ್ದೇವೆ. ಸಂದರ್ಶನಕ್ಕೆ ಅವರು ತಮ್ಮ ಕಾಲಮೇಲೆ ನಿಂತು ಹೋಗಬೇಕು ಎಂಬ ನಿಟ್ಟಿನಲ್ಲಿ ಯುವನಿಧಿ ಯೋಜನೆ ರೂಪಿಸಿಲಾಗಿದೆ. ಇದರ ಜತೆಗೆ ಅವರಿಗೆ ಉದ್ಯೋಗ ದೊರಕಿಸಲು ಸರ್ಕಾರ ಆದ್ಯತೆ ನೀಡಿದೆ ಎಂದರು. ಉದ್ಯೋಗ ಮೇಳದಲ್ಲಿ ನೋಂದಣಿ ಮಾಡಿಸಿಕೊಳ್ಳುವ ಎಲ್ಲರಿಗೂ ಕೌಶಲ್ಯ ತರಬೇತಿ ನೀಡಿ ಅವರಿಗೆ ನೌಕರಿ ದೊರಕಿಸುವ ಉದ್ದೇಶವಿದೆ. ನಮ್ಮ ಸರ್ಕಾರದ ಬಜೆಟ್‌ನಲ್ಲಿ ೨೫ ಸಾವಿರಕ್ಕಿಂತ ಹೆಚ್ಚು ಯುವಕರಿಗೆ ಹೆಚ್ಚುವರಿ ಕೌಶಲ್ಯ ತರಬೇತಿ ನೀಡಿ ಉದ್ಯೋಗ ದೊರಕಿಸಲು ಯೋಜನೆ ರೂಪಿಸಿದೆ. ಸರ್ಕಾರಕ್ಕೆ ಯುವಕರ ಬಗ್ಗೆ ಕಾಳಜಿ ಇದೆ. ಅವರು ತಮ್ಮ ಕಾಲ ಮೇಲೆ ನಿಂತು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕೆಂದ ಉದ್ದೇಶದಿಂದ ಸಾಕಷ್ಟು ಯೋಜನೆ ರೂಪಿಸಿದೆ ಎಂದರು.ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಸುಮಾರು ೧೦೦ ಹೊಸ ಮಲ್ಟಿ ಸ್ಕಿಲ್ ಡೆವೆಲಪ್‌ಮೆಂಟ್ ಕೇಂದ್ರ ಸ್ಥಾಪಿಸಲಾಗುವುದು. ಯಾರಿಗೆ ಕೌಶಲ್ಯ ಅಭಿವೃದ್ಧಿಗೆ ತರಬೇತಿ ಅಗತ್ಯವಿದೆಯೋ ಅವರಿಗೆ ನೀಡಲಾಗುವುದು. ಉದ್ಯೋಗದಾತರು ಹಾಗೂ ಉದ್ಯೋಗಾಕಾಂಶಿಗಳನ್ನು ಒಂದೇ ವೇದಿಕೆಯಲ್ಲಿ ತರಲು ಉದ್ಯೋಗ ಮೇಳೆ ಸಹಕಾರಿಯಾಗಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಜಿಲ್ಲಾಮಟ್ಟದಲ್ಲಿ ಹಾಗೂ ತಾಲೂಕುಮಟ್ಟ ಮತ್ತು ಹೋಬಳಿಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಿದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಕ್ಕಾಗಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಜನರಿಗೆ ಉದ್ಯೋಗ ಎಷ್ಟು ಅವಶ್ಯಕತೆ ಇದೆ ಎಂಬುದನ್ನು ಅರಿತು ಈ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಗಡಿ ಶಾಸಕರಾದ ಬಾಲಕೃಷ್ಣ, ವಿಧಾನ ಪರಿಷತ್ ಶಾಸಕರಾದ ಎಸ್. ರವಿ, ಸುಧಾಮ್ ದಾಸ್, ರಾಮೋಜಿಗೌಡ, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ