ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಖಚಿತ: ಡಿಸಿಎಂ ಡಿ.ಕೆ. ಶಿವಕುಮಾರ

KannadaprabhaNewsNetwork | Published : Jan 22, 2025 12:33 AM

ಸಾರಾಂಶ

ಆಚಾರ್ಯ ಗುಣಧರ ನಂದಿ ಮಹಾರಾಜರು ಮತ್ತು ಸಮಾಜದ ಹಿರಿಯರು ಸರ್ಕಾರದ ಎದುರಿಗೆ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆ ಇಟ್ಟಿದ್ದು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ಬಜೆಟ್‌ನಲ್ಲಿ ನಿಗಮ ಸ್ಥಾಪನೆ ಘೋಷಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿದರು.

ಹುಬ್ಬಳ್ಳಿ:

ಧರ್ಮ, ಸತ್ಯ ಮತ್ತು ಅಹಿಂಸೆಯನ್ನೇ ತನ್ನ ಪರಮ ಧ್ಯೇಯವನ್ನಾಗಿ ಮಾಡಿಕೊಂಡಿರುವ ಜೈನ ಸಮಾಜದ ಅಭಿವೃದ್ಧಿಗಾಗಿ ನಿಗಮವೊಂದನ್ನು ಸರ್ಕಾರ ಸ್ಥಾಪಿಸುವುದು ಖಚಿತ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭರವಸೆ ನೀಡಿದರು.

ತಾಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಂಗಳವಾರ ಸಂಜೆ ತೀರ್ಥಂಕರರ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಚಾರ್ಯ ಗುಣಧರ ನಂದಿ ಮಹಾರಾಜರು ಮತ್ತು ಸಮಾಜದ ಹಿರಿಯರು ಸರ್ಕಾರದ ಎದುರಿಗೆ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆ ಇಟ್ಟಿದ್ದು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ಬಜೆಟ್‌ನಲ್ಲಿ ನಿಗಮ ಸ್ಥಾಪನೆ ಘೋಷಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ದಿ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದ್ದು ಈಗ ಇತಿಹಾಸ. ಅದನ್ನು ಯಾರೂ ಅಲ್ಲಗಳೆಯಲಾರರು. ರಾಜ್ಯ ಸರ್ಕಾರ, ಕಾಂಗ್ರೆಸ್ ಹಾಗೂ ವೈಯಕ್ತಿಕವಾಗಿ ತಾವು ಎಂದಿಗೂ ಜೈನ ಸಮಾಜದ ಜತೆ ಇರುವುದಾಗಿ ತಿಳಿಸಿದರು.

ತಾವು ಮುಖ್ಯಮಂತ್ರಿ ಆಗಲೆಂದು ಆಚಾರ್ಯ ಗುಣಧರನಂದಿ ಮಹಾರಾಜರು ಆಶೀರ್ವಾದ ಮಾಡಿದ್ದಾರೆ. ನೀವು ಆಶೀರ್ವಾದ ಮಾಡಿದಾಗಲೆಲ್ಲ ನನಗೆ ಏಟು ಹೊಡೆಯುತ್ತಾ ಇರುತ್ತಾರೆ. ಹಿಂದೆ ಈ ಮಾತನ್ನು ಅವಧೂತ ವಿನಯ ಗುರೂಜಿ ಹೇಳಿದ್ದರು. ಈಗ ಗುಣಧರ ನಂದಿ ಮಹಾರಾಜರು ಆಶೀರ್ವದಿಸಿದ್ದಾರೆ. ಅದಕ್ಕೆ ತಾವು ಕೃತಜ್ಞರಾಗಿರುವುದಾಗಿ ಹೇಳಿದರು.

ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವರೂರು ನವಗ್ರಹ ತೀರ್ಥಕ್ಷೇತ್ರವು ಶಿಕ್ಷಣ ರಂಗದಲ್ಲಿ ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸ ಮಾಡಿದೆ. ಬಡಜನರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇಡೀ ಭಾರತಾದ್ಯಂತ ಹೆಸರು ಮಾಡಿದೆ. ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ತಾವು ಕೂಡ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಹೇಳಿದರು.

ಗುರುದೇವ ಕುಂತುಸಾಗರ ಮಹಾರಾಜರು ಆಶೀರ್ವದಿಸಿದರು. ಅವಧೂತ ವಿನಯ ಗುರೂಜಿ, ವನಿತಾ ಸುರೇಂದ್ರಕುಮಾರ ಮಾತನಾಡಿದರು. ಸಚಿವ ಡಿ. ಸುಧಾಕರ, ಶಾಸಕ ಎನ್.ಎಚ್. ಕೋನರೆಡ್ಡಿ, ಸುರೇಂದ್ರಕುಮಾರ ಹೆಗ್ಗಡೆ, ಎಸ್‌ಡಿಎಂ ವಿವಿ ಉಪಕುಲಪತಿ ನಿರಂಜನ ಕುಮಾರ, ತವನಪ್ಪ ಅಷ್ಟಗಿ, ಮಹೇಂದ್ರ ಸಿಂಘಿ ಸೇರಿದಂತೆ ಹಲವರಿದ್ದರು. ಮಹಾಮಸ್ತಕಾಭಿಷೇಕಕ್ಕೆ ಚಾಲನೆ

ಭಗವಾನ್ ಪಾರ್ಶ್ವನಾಥ ಹಾಗೂ ನವಗ್ರಹ ತೀರ್ಥಂಕರರ ಮಹಾಮಸ್ತಕಾಭಿಷೇಕ ಕಾರ್ಯಕ್ರಮವು ಮಂಗಳವಾರ ಜಲಾಭಿಷೇಕದಿಂದ ಆರಂಭಗೊಂಡಿತು. ಕಾರ್ಯಕ್ರಮಕ್ಕೆ ನಿತ್ಯವೂ ಆಗಮಿಸುತ್ತಿರುವ ಬೇರೆ ಬೇರೆ ಊರುಗಳ ಮಹಿಳಾ ಮಂಡಳಿಗಳ ಅಧ್ಯಕ್ಷರಿಗೆ ವೇದಿಕೆ ಮೇಲೆ ಲೋಕಾರ್ಪಣೆಗೊಂಡ ಭಗವಾನ್ ಪಾರ್ಶ್ವನಾಥ ಶಿಲಾಪ್ರತಿಮೆಗೆ ಜಲಾಭಿಷೇಕ, ಪುಷ್ಪಾಂಜಲಿ ಅರ್ಪಿಸಲು ಅವಕಾಶ ಮಾಡಿಕೊಡಲಾಯಿತು.

ಕ್ಷೇತ್ರದಲ್ಲಿರುವ ಬೃಹತ್ ಪಾರ್ಶ್ವನಾಥ ಪ್ರತಿಮೆಗೆ ಹಾಲು, ಅರಿಷಿಣ, ಕುಂಕುಮ ಮಿಶ್ರಿತ ಜಲ ಮತ್ತು ಪುಷ್ಪಗಳಿಂದ ಅಭಿಷೇಕ ನೆರವೇರಿತು. ಮಹಾಮಸ್ತಕಾಭಿಷೇಕ ಪೂರ್ವ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ವಿವಿಧ ಕ್ಷೇತ್ರಗಳಲ್ಲಿರುವ ತೀರ್ಥಂಕರರು, ಗಣಧರರು, ಶ್ರುತ ಕೇವಲಿಗಳು, ಮುನಿಗಳಿಗೆ ಅರ್ಘ್ಯ ಅರ್ಪಿಸಲಾಯಿತು.

Share this article