ಪ್ರತಿ ತಿಂಗಳು ಜನತಾ ದರ್ಶನ, ಸಹಾಯವಾಣಿ ಸ್ಥಾಪನೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಘೋಷಣೆ

KannadaprabhaNewsNetwork | Published : Jul 7, 2024 1:16 AM

ಸಾರಾಂಶ

ದಾವಣಗೆರೆ ಎಸ್ಸೆಸ್ ಮಲ್ಲಿಕಾರ್ಜುನ ಸಭಾಂಗಣದಲ್ಲಿ ಡಿ.ಟಿ.ಶ್ರೀನಿವಾಸ ಅಭಿಮಾನಿ ಬಳಗದಿಂದ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಸೇವೆಗಾಗಿ, ಸಮಸ್ಯೆ ಆಲಿಸಲು ಪ್ರತಿ ತಿಂಗಳು ಜನತಾ ದರ್ಶನ ಆಯೋಜಿಸುವ ಜೊತೆಗೆ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಸಹಾಯವಾಣಿ ಆರಂಭಿಸುವುದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಘೋಷಿಸಿದ್ದಾರೆ.

ನಗರದ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಭಾಂಗಣದಲ್ಲಿ ಶನಿವಾರ ಡಿ.ಟಿ.ಶ್ರೀನಿವಾಸ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ನೂತನ ಸಂಸದರು, ವಿಪ ಸದಸ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಚುನಾವಣೆ ವೇಳೆ ಇಡೀ ಕ್ಷೇತ್ರಾದ್ಯಂತ ಸುತ್ತಾಡಿದ್ದು, ಜನರು, ಕ್ಷೇತ್ರದ ಸಮಸ್ಯೆ ಬಗ್ಗೆ ಹತ್ತಿರದಿಂದ ಅರಿತಿದ್ದು, ಈ ಹಿನ್ನೆಲೆ ಜನತಾ ದರ್ಶನ, ಸಹಾಯವಾಣಿ ಆರಂಭಿಸಲುದ್ದೇಶಿಸಿದ್ದೇವೆ ಎಂದರು.

ದಿನದ 24 ಗಂಟೆ ಜನರ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ ಸ್ಥಾಪಿಸುವ ಉದ್ದೇಶವಿದೆ. ಸಣ್ಣಪುಟ್ಟ ಸಮಸ್ಯೆಗೂ ಜನರು ದಾವಣಗೆರೆ ಬರುವುದನ್ನು ತಪ್ಪಿಸುವುದು ಸಹಾಯವಾಣಿ ಉದ್ದೇಶವಾಗಿದೆ. ನಮ್ಮ ತಂಡ ಸದಾ ಚಟುವಟಿಕೆಯಿಂದ ಇದ್ದು, ಜನರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆಯಾ ಅಥವಾ ಇಲ್ಲವೇ ಎಂಬ ಬಗ್ಗೆ ಸಂಬಂಧಿಸಿದವರೊಂದಿಗೆ ಮಾತನಾಡಿ, ಅದಕ್ಕೊಂದು ಪರಿಹಾರ ಕಂಡು ಹಿಡಿಯಲು ಸಹಾಯವಾಣಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸಚಿವರು, ಶಾಸಕರು, ಪಕ್ಷದ ಮುಖಂಡರ ನೇತೃತ್ವದಲ್ಲಿ ಪ್ರತಿ ತಿಂಗಳು ಜನತಾ ದರ್ಶನ ಆಯೋಜಿಸಿ, ಎಲ್ಲರ ಸಲಹೆ, ಸೂಚನೆಯಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಿಸೋಣ. ಮೊದಲ ಸಲ ಸಂಸದೆಯಾಗಿದ್ದು, ಎಲ್ಲವನ್ನೂ ಈಗಷ್ಟೇ ಕಲಿಯುತ್ತಿದ್ದೇವೆ. ನಾನು ಹಿಂದೆಯೂ ಕಲಿಯುತ್ತಿದ್ದೆ. ಈಗಲೂ ಕಲಿಯುತ್ತಿದ್ದೇನೆ. ಮುಂದೆಯೂ ಕಲಿಯುತ್ತೇನೆ. ಅಭಿವೃದ್ಧಿಯಲ್ಲಿ ಪಾರದರ್ಶಕತೆ ತರುತ್ತೇನೆ ಎಂದು ತಿಳಿಸಿದರು.

ಸರ್ಕಾರಿ ಕೆಲಸ, ಕಾರ್ಯಗಳಲ್ಲಿ ಪಾರದರ್ಶಕತೆ ಅಗತ್ಯವಿದೆ. ಭ್ರಷ್ಟಾಚಾರ ಕಡಿಮೆಯಾಗಬೇಕಾಗಿದ್ದು, ಅದನ್ನು ಕಡಿಮೆ ಮಾಡಲು ಪ್ರಯತ್ನಿಸೋಣ. ನಂತರ ಸಂಪೂರ್ಣವಾಗಿ ಭ್ರಷ್ಟಾಚಾರ ತೆಗೆದು ಹಾಕೋಣ. ಉತ್ತಮ ಆಡಳಿತಕ್ಕೆ, ಜನರ ಸೇವೆಗಾಗಿ, ಅಭಿವೃದ್ಧಿದಾಗಿ ಸದಾ ನಿಮ್ಮೆಲ್ಲರ ಸಹಕಾರ ಅಗತ್ಯ. ಸಾರ್ವಜನಿಕರ ಸೇವೆಗಾಗಿ, ಅಭಿವೃದ್ಧಿಗಾಗಿ ತಾವು ಸಹ ಸಚಿವರು, ಶಾಸಕರು, ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದಾಗಿ ಹೇಳಿದರು.

ದಾವಣಗೆರೆ ಜಿಲ್ಲಾಸ್ಪತ್ರೆಗೆ ಮೂಲ ಸೌಕರ್ಯ ಹೆಚ್ಚಿಸಬೇಕಿದೆ. ತಜ್ಞ ವೈದ್ಯರು, ಸಿಬ್ಬಂದಿ ನೇಮಿಸಲಾಗಿದೆ. ಅಗತ್ಯ ಔಷಧಿ, ಮಾತ್ರೆ ಇತರೆ ಒದಗಿಸಬೇಕಿದೆ. ಡಯಾಲಿಸಿಸ್ ಸೇವೆ ಜನ ಕೇಳುತ್ತಿದ್ದಾರೆ. ಆದಷ್ಟು ಬೇಗ ಅದನ್ನೂ ಕಲ್ಪಿಸಲಾಗುವುದು. ಕ್ಷೇತ್ರದ ಯುವಕ-ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಬಾಪೂಜಿ ವಿದ್ಯಾಸಂಸ್ಥೆಯಿಂದ ಶೀಘ್ರವೇ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ಈ ಬಗ್ಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಜೊತೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಮಾತನಾಡಿದ್ದಾರೆ ಎಂದು ವಿವರಿಸಿದರು.

ವಿದ್ಯಾರ್ಥಿ ಜೀವನದಲ್ಲೇ ಭದ್ರ ಬುನಾದಿ ಹಾಕಲು ಶಾಲೆಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಮಕ್ಕಳಲ್ಲಿನ ಸುಪ್ತ ಪ್ರತಿಭೆ ಶಿಕ್ಷಕರು, ಪಾಲಕರಿಗೆ ಗೊತ್ತಿರುತ್ತದೆ. ಹಾಗಾಗಿ ಶಿಕ್ಷಕರು ಸಹ ಮಕ್ಕಳಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಬೇಕು. ಮಕ್ಕಳು ಗುರಿ ತಲುಪಲು ಸಹಾಯ ಮಾಡಿದರೆ, ದೇಶದ ಅಭಿವೃದ್ಧಿಗೂ ಸಹಾಯವಾಗುತ್ತದೆ. ಈ ಹಿನ್ನೆಲೆ ಶಿಕ್ಷಕರು ಸಹ ತಮ್ಮ ಅಮೂಲ್ಯ ಸಮಯವನ್ನು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಧಾರೆ ಎರೆಯಲು ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯಾಗಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ತರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಜೊತೆಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ಒತ್ತಾಯಿಸುತ್ತೇವೆ. ನೌಕರರ ಹಿತ ಕಾಯಲು ತಮ್ಮ ಸರ್ಕಾರ ಬದ್ಧವಿದೆ ಎಂದರು.

ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯ ಡಿ.ಟಿ.ಶ್ರೀನಿವಾಸ, ಮಾಜಿ ಶಾಸಕ ಪೂರ್ಣಿಮಾ ಶ್ರೀನಿವಾಸ, ಬಿಐಇಟಿ ಕಾಲೇಜು ಪ್ರಾಚಾರ್ಯ ಡಾ.ಎಚ್.ಬಿ.ಅರವಿಂದ್, ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಸಾಶಿಇ ಉಪ ನಿರ್ದೇಶಕ ಕೊಟ್ರೇಶ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಬಿಇಓ ಪುಷ್ಪಲತಾ, ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಪ್ರದೀಪಕುಮಾರ ಇತರರು ಇದ್ದರು. ಜನ ಪ್ರತಿನಿಧಿಗಳಿಗೆ ಸನ್ಮಾನ, ಅಭಿನಂದನೆ ನಿರಂತರ ನಡೆಯುತ್ತಿರಬೇಕು. ಇಂತಹ ಕಾರ್ಯಕ್ರಮಗಳು ಜನ ಪ್ರತಿನಿಧಿಗಳಿಗೆ ಅವರ ಜವಾಬ್ದಾರಿ ನೆನಪು ತರುತ್ತವೆ. ನಾವು ನಿಮ್ಮನ್ನು ಆಯ್ಕೆ ಮಾಡಿದ್ದೇವೆ. ನೀವು ನಿಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸಿ, ಕ್ಷೇತ್ರದ ಅಭಿವೃದ್ಧಿ ಚಿಂತನೆ ದಾರಿಯಲ್ಲಿ ಸದಾ ಇರಿ ಎನ್ನುವಂತೆ ಬೆಳಕಿನ ಮನೆಯ ರೀತಿ ಸನ್ಮಾನಗಳು, ಅಭಿನಂದನೆಗಳು ನಡೆಯುತ್ತಿರಬೇಕು.

- ಡಾ.ಪ್ರಭಾ ಮಲ್ಲಿಕಾರ್ಜುನ. ದಾವಣಗೆರೆ ಸಂಸದೆ

ಶೈಕ್ಷಣಿಕ ಸಮಸ್ಯಗಳಿಗೆ ಪರಿಹಾರರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಪದ್ಧತಿ ಮರು ಜಾರಿ, ಅತಿಥಿ ಉಪನ್ಯಾಸಕರ ಸಮಸ್ಯೆಗಳು ಹಾಗೂ ದಾವಣಗೆರೆ ವಿಶ್ವ ವಿದ್ಯಾಲಯದ ಪ್ರವೇಶಾತಿ ದಿನಾಂಕ ರಾಜ್ಯದ ಇತರೆ ವಿವಿಗಳೊಂದಿಗೆ ಹೊಂದಾಣಿಕೆಯಾಗುತ್ತಿಲ್ಲವೆಂಬ ಬೇಡಿಕೆಗಳ ಕುರಿತಂತೆ ನಿಮ್ಮೊಂದಿಗೆ ನಾನು ಸದಾ ಇರುತ್ತೇವೆ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

Share this article