ಪುರುಷರ ಹಿತರಕ್ಷಣಾ ಟ್ರಸ್ಟ್ ಸ್ಥಾಪನೆ: ಕಾರ್ಯಾಧ್ಯಕ್ಷೆ ರಜನಿರಾಜ್

KannadaprabhaNewsNetwork |  
Published : Jun 13, 2026, 01:30 AM IST
೧೨ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಟರಸ್ಟ್ ಅಧ್ಯಕ್ಷೆ ರಜನಿರಾಜ್ ಮಾತನಾಡಿದರು. | Kannada Prabha

ಸಾರಾಂಶ

ಆಧುನಿಕ ಯುಗದಲ್ಲಿ ಪುರುಷರ ವಿರುದ್ಧ ಮಹಿಳೆಯರಿಂದ ಸುಳ್ಳು ದೂರುಗಳು ದಾಖಲಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರ ಪರವಾದ ಕಾನೂನುಗಳು ಕಠಿಣವಾಗಿರುವುದರಿಂದ ತಪ್ಪು ಮಾಡದಿರುವ ಪುರುಷ ಸುಳ್ಳು ದೂರುಗಳಿಂದ ಕಾನೂನು ಸಂಕಷ್ಟಕ್ಕೆ ಸಿಲುಕಿ ಅವಮಾನ ಅನುಭವಿಸುತ್ತಿದ್ದಾನೆ. ಖಿನ್ನತೆಗೊಳಗಾಗಿ ದುಶ್ಚಟಗಳಿಗೆ ದಾಸನಾಗಿ, ಆತ್ಮಹತ್ಯೆಗೂ ಶರಣಾಗುತ್ತಿದ್ದಾನೆ. ಇದರಿಂದ ಪುರುಷರಿಗೂ ನೆಮ್ಮದಿ ದೊರಕಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳೆಯರ ಕಿರುಕುಳ ತಾಳಲಾರದೆ ಬೇಸತ್ತಿರುವ ಮತ್ತು ಅವರಿಂದ ದೌರ್ಜನ್ಯಕ್ಕೊಳಗಾಗುತ್ತಿರುವ ಪುರುಷರನ್ನು ರಕ್ಷಣೆ ಮಾಡುವ ಸಲುವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಟ್ರಸ್ಟ್ ಸ್ಥಾಪಿಸಲಾಗಿದೆ ಎಂದು ಕಾರ್ಯಾಧ್ಯಕ್ಷೆ ರಜನಿರಾಜ್ ಅವರು ಹೇಳಿದರು.

ಟ್ರಸ್ಟ್ ಆ್ಯಕ್ಟ್ ಕಾಯಿದೆಯಡಿ ಕರ್ನಾಟಕ ಸರ್ಕಾರದ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಟ್ರಸ್ಟ್‌ನ ೩೨ ಮಂದಿ ಪದಾಧಿಕಾರಿಗಳ ಸಮಿತಿಯೊಂದಿಗೆ ನೋಂದಾಯಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗೌರವಾಧ್ಯಕ್ಷರು, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪುರುಷರ ಮೇಲೆ ಕೆಲವು ಮಹಿಳೆಯರಿಂದ ನಡೆಯುವ ದೌರ್ಜನ್ಯ, ಒತ್ತಡ, ಮಾನಸಿಕ ಮತ್ತು ದೈಹಿಕ ಹಲ್ಲೆ, ವರದಕ್ಷಿಣೆ ಸಂಬಂಧ ಸುಳ್ಳು ದೂರು, ಕೊಲೆಯತ್ನ, ಅಪಹರಣ ಮಾಡುವುದು ಹಾಗೂ ಇತರೆಲ್ಲಾ ದೌರ್ಜನ್ಯಗಳ ವಿರುದ್ಧ ಸಮಿತಿಯು ಕಾನೂನು ಸಲಹೆ, ಸಹಾಯ, ಸಹಕಾರ, ಮಾರ್ಗದರ್ಶನ, ಆಪ್ತ ಸಮಾಲೋಚನೆ, ಪರಸ್ಪರ ಚರ್ಚೆ, ಮಹಿಳೆ ಮತ್ತು ಪುರುಷನ ನಡುವಿನ ಭಿನ್ನಾಭಿಪ್ರಾಯ, ಕೋಪ- ತಾಪಗಳನ್ನು, ಪರಸ್ಪರ ಮನಸ್ತಾಪಗಳನ್ನು ಹೋಗಲಾಡಿಸಿ ಸಂಸಾರ ಉತ್ತಮ ರೀತಿಯಲ್ಲಿ ನಡೆಯುವಂತೆ ಪ್ರೇರಣೆ- ಪ್ರೋತ್ಸಾಹ ನೀಡುವುದು ಟ್ರಸ್ಟ್‌ನ ಮೂಲ ಉದ್ದೇಶವಾಗಿದೆ.

ರಾಷ್ಟ್ರೀಯ ಮಹಿಳಾ ಆಯೋಗ ಇರುವ ಮಾದರಿಯಲ್ಲೇ ರಾಷ್ಟ್ರೀಯ ಪುರುಷ ಆಯೋಗವನ್ನೂ ರಚನೆ ಮಾಡಿ ನೊಂದ ಪುರುಷರೂ ನ್ಯಾಯ ಪಡೆಯುವುದಕ್ಕೆ ಕಾನೂನಾತ್ಮಕವಾಗಿ ಅವಕಾಶ ಕಲ್ಪಿಸಬೇಕು. ಆಯೋಗ ರಚನೆಯಲ್ಲೂ ಸಮಾನತೆ ಕಾಪಾಡುವ ಅಗತ್ಯವಿದೆ. ಆದರೆ, ಮಹಿಳೆಯರ ಮೇಲೆ ದೌರ್ಜನ್ಯವೆಸಗುವ ಪುರುಷರ ಪರವಾಗಿ ಟ್ರಸ್ಟ್ ಎಂದಿಗೂ ನಿಲ್ಲುವುದಿಲ್ಲ. ಸತ್ಯಾಸತ್ಯತೆಯನ್ನು ವಿಚಾರಿಸಿ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಹೊಂದಾಣಿಕೆಯಿಂದ ಜೀವನ ನಡೆಸುವುದಕ್ಕೆ ಸಾಧ್ಯವಾದಷ್ಟು ಪ್ರಯತ್ನಿಸಲಾಗುವುದು ಎಂದರು.

ಆಧುನಿಕ ಯುಗದಲ್ಲಿ ಪುರುಷರ ವಿರುದ್ಧ ಮಹಿಳೆಯರಿಂದ ಸುಳ್ಳು ದೂರುಗಳು ದಾಖಲಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರ ಪರವಾದ ಕಾನೂನುಗಳು ಕಠಿಣವಾಗಿರುವುದರಿಂದ ತಪ್ಪು ಮಾಡದಿರುವ ಪುರುಷ ಸುಳ್ಳು ದೂರುಗಳಿಂದ ಕಾನೂನು ಸಂಕಷ್ಟಕ್ಕೆ ಸಿಲುಕಿ ಅವಮಾನ ಅನುಭವಿಸುತ್ತಿದ್ದಾನೆ. ಖಿನ್ನತೆಗೊಳಗಾಗಿ ದುಶ್ಚಟಗಳಿಗೆ ದಾಸನಾಗಿ, ಆತ್ಮಹತ್ಯೆಗೂ ಶರಣಾಗುತ್ತಿದ್ದಾನೆ. ಇದರಿಂದ ಪುರುಷರಿಗೂ ನೆಮ್ಮದಿ ದೊರಕಬೇಕು. ರಾಷ್ಟ್ರದ ಮಹಿಳೆಯರಿಗೆ ಸ್ಪಂದಿಸಲು ಮಹಿಳಾ ಆಯೋಗಗ ಇರುವಂತೆ ಪುರುಷರಿಗೂ ಸಹ ಅವರ ಹಿತರಕ್ಷಣೆ ಕಾಪಾಡಲು ರಾಷ್ಟ್ರದಲ್ಲಿ ಪ್ರಥಮ ನೋಂದಾಯಿತ ಅಧಿಕೃತ ಸಂಸ್ಥೆಯಾಗಿದೆ. ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷ ಆಯೋಗವನ್ನು ಕಾನೂನುಬದ್ಧಗೊಳಿಸುವಂತೆ ಸದನದಲ್ಲಿ ಗೌರವಾಧ್ಯಕ್ಷ ಎಚ್.ವಿಶ್ವನಾಥ್‌ ಧ್ವನಿ ಎತ್ತಲಿದ್ದಾರೆ ಎಂದು ಹೇಳಿದರು.

ಯಾರ ವಿರುದ್ಧವೇ ಆಗಲಿ, ದೂರು ದಾಖಲಾದ ತಕ್ಷಣವೇ ಎಫ್‌ಐಆರ್, ಬಂಧನಕ್ಕೊಳಪಡಿಸದೆ ಸತ್ಯಾಸತ್ಯತೆ ಪರಿಶೀಲಿಸಿ, ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಅದರಂತೆ ಪೊಲೀಸ್ ಅಧಿಕಾರಿಗಳು ನಡೆಯುತ್ತಿಲ್ಲ. ದೂರು ಬಂದ ಕೂಡಲೇ ಹಿಂದೆ- ಮುಂದೆ ವಿಚಾರಿಸದೆ, ಪರಿಶೀಲನೆಯನ್ನೂ ನಡೆಸುವ ಗೋಜಿಗೆ ಹೋಗದೆ ಅಮಾಯಕರನ್ನು ಬಂಧಿಸಲಾಗುತ್ತಿದೆ. ಹೆಣ್ಣಿನ ರಕ್ಷಣೆ ಹೆಸರಿನಲ್ಲಿ ಪುರುಷರು ಕಿರುಕುಳ, ನೋವನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಪುರುಷರ ಹಿತರಕ್ಷಣಾ ಟ್ರಸ್ಟ್ ಪುರುಷರು ಮತ್ತು ಮಹಿಳೆಯರ ಮಧ್ಯೆ ಕೊಂಡಿಯಾಗಿ, ಸೇತುವೆಯಾಗಿ ಇಬ್ಬರ ನಡುವಿನ ಮನಸ್ತಾಪಗಳನ್ನು ತಡೆಗಟ್ಟಿ ರಾಜಿ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದು. ನೆಮ್ಮದಿಯ ಜೀವನಕ್ಕೆ ಅವಕಾಶ ಕಲ್ಪಿಸುವುದು ಮುಖ್ಯ ಗುರಿಯಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಜಿ.ಟಿ.ವೀರಪ್ಪ, ಎಂ.ಆರ್.ಸತೀಶ್, ಎಂ.ಗುರುಪ್ರಸಾದ್,ಕೃಷ್ಣಯ್ಯ ಅರಸು, ವೇದವಲ್ಲಿ, ಚೇತನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೂರಿಯಾ ಅಭಾವ ಖಂಡಿಸಿ ರೈತ ಸಂಘ ಪ್ರತಿಭಟನೆ
ನೀಟ್‌ ಅಕ್ರಮ: ಸಂಸದರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ