ಕನ್ನಡಪ್ರಭ ವಾರ್ತೆ ಸೊರಬ
ಅಧರ್ಮದಿಂದ ನಡೆಯುತ್ತಿದ್ದ ಯಜ್ಞವನ್ನು ನಾಶಪಡಿಸಿ ಸುಧರ್ಮದ ಯಜ್ಞವನ್ನು ನಡೆಸಿ ಧರ್ಮ ರಕ್ಷಣೆಯನ್ನು ಮಾಡಿದವರು ಶ್ರೀ ವೀರಭದ್ರಮಹಾಸ್ವಾಮಿಗಳು ಎಂದು ಸಮಾಧಾನ ಹಿರೇಮಠ ಜಡೆ ಬಂಕಸಾಣ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.ಮಂಗಳವಾರ ತಾಲ್ಲೂಕಿನ ಉದ್ರಿ ಗ್ರಾಮದಲ್ಲಿ ವೀರಶೈವ ಸಮಾಜ ಮತ್ತು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಆಯೋಜಿಸಿದ್ದ ಶ್ರೀ ವೀರಭದ್ರಸ್ವಾಮಿಯ ಜಯಂತಿಯ ಕಾರ್ಯಕ್ರಮದಲ್ಲಿ ಧರ್ಮೋದೇಶ ನೀಡಿ ಮಾತನಾಡಿದರು.
ವೀರಭದ್ರ ದೇವರು ಗುಣವಾಚಕ ದೇವರು. ಸನಾತನ ಧರ್ಮದಲ್ಲಿ ಯಜ್ಞ ಕಾರ್ಯ ಪುಣ್ಯದಾಯಕವಾದದು. ಪ್ರಜಾಪತಿ ದಕ್ಷ ಬ್ರಹ್ಮನ ಯಜ್ಞದಿಂದ ತನ್ನ ತಾಯಿಗೆ ಅನ್ಯಾಯ ಎಂದರಿತ ವೀರಭದ್ರಸ್ವಾಮಿ ಆ ಯಜ್ಞವನ್ನೇ ನಾಶಮಾಡುತ್ತಾನೆ. ತಂದೆಯ ಚಿಂತೆಯನ್ನು ಪೂರೈಸುತ್ತಾನೆ. ಇಂತಹ ಆದರ್ಶಗಳನ್ನು ಪರಿಪಾಲನೆ ಮಾಡಿದವರು ವೀರಭದ್ರಸ್ವಾಮಿ ಎಂದ ಹೇಳಿದ ಅವರು, ಲಿಂಗಧಾರಿಗಳು ಇಷ್ಟಲಿಂಗದಲ್ಲಿ ನಿಷ್ಠೆ ಇಟ್ಟು ಅರಿತು ಆಚರಿಸಿದಾಗ ವೀರ ಗುಣ ಪ್ರಾಪ್ತಿಯಾಗುತ್ತದೆ ಎಂದೂ ಹೇಳಿದರು.ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಕರ್ನಾಟಕದ ಅಧ್ಯಕ್ಷ ಸಿ.ಪಿ.ಈರೇಶ್‌ಗೌಡ ಮಾತನಾಡಿ, ಆಧುನಿಕ ಯುಗದಲ್ಲಿ ಸಂಸ್ಕಾರ ಮತ್ತು ಸಂಘಟನೆ ಕಡಿಮೆಯಾಗುತ್ತಿದೆ. ಇಂತಹ ಆಚರಣೆಗಳಿಂದ ಮತ್ತೆ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಉದ್ರಿ ಗ್ರಾಮದ ವೀರಶೈವ ಸಮಾಜದ ಅಧ್ಯಕ್ಷರಾದ ಪುಟ್ಟಸ್ವಾಮಿ ಮಾತನಾಡಿ, ವೀರಭದ್ರಸ್ವಾಮಿಯ ಜಯಂತಿಯ ಆಚರಣೆಯಿಂದ ಸಮಾಜದಲ್ಲಿ ಸಂಚಲನ ಮೂಡುತ್ತದೆ. ಸರ್ವರಿಗೂ ವೀರಭದ್ರಸ್ವಾಮಿಯ ಆಶೀರ್ವಾದವಿರಲಿ ಎಂದರು.ಉದ್ಯಮಿ ನಾಗರಾಜ ಗುತ್ತಿ, ನಿಜಗುಣ ಚಂದ್ರಶೇಖರ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮದ ಹಿರಿಯರಾದ ಬಸವಲಿಂಗಪ್ಪ ಗೌಡ್ರು, ಷಣ್ಮುಖಪ್ಪ, ಕಡಸೂರು ಸದಾನಂದ ಗೌಡ್ರು, ಹರಳಿಗೆ ಷಣ್ಮುಖಪ್ಪ ಗೌಡ್ರು, ಡಾ.ಮಹೇಶ್, ಉಮೇಶ್ ಉಪಸ್ಥಿತರಿದ್ದರು.
ಬಳಿಕ ಪ್ರಾತಃಕಾಲದಲ್ಲಿ ಸ್ವಾಮಿಗೆ ಅಭಿಷೇಕಾದಿ ಪೂಜೆ ಹಾಗೂ ಗ್ರಾಮದಲ್ಲಿ ಸ್ವಾಮಿಯ ಉತ್ಸವ ವಿಜೃಂಭಣೆಯಿಂದ ನಡೆಯಿತು. ದೇಸಾಯಿ ಗೌಡ, ತಾರಾಕೇಶ್, ಪ್ರಕಾಶ, ಚಾಲುಕ್ಯ ಗೌಡ, ಸದಾಶಿವ ಪಾಟೀಲ, ಶಿವು, ಗಿರೀಶ್ ಗೌಡ, ವಿಜಯ ಮೊದಲಾದವರು ಹಾಜರಿದ್ದರು.