ಬಳ್ಳಾರಿ: ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ವತಿಯಿಂದ ವಿಶೇಷ ಆಂದೋಲನದಡಿ ಆಹಾರ ಸುರಕ್ಷತೆ ಅಧಿಕಾರಿಗಳು ನಗರದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಬೀದಿ ಬದಿ ತಿಂಡಿ-ದಿನಸಿ ವ್ಯಾಪಾರಿಗಳ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಆಹಾರ ಮತ್ತು ಗುಣಮಟ್ಟದ ತಪಾಸಣೆ ನಡೆಸಿದರು.
ಹತ್ತು ಆಹಾರ ಪದಾರ್ಥಗಳ ಮಾದರಿಗಳ ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ವಿಶ್ಲೇಷಣೆಗಾಗಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ವಿಶ್ಲೇಷಣಾ ವರದಿ ಬಂದ ಆನಂತರ ಆಹಾರ ಸುರಕ್ಷತೆ ಮತ್ತುಗುಣಮಟ್ಟ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತೆ ಅಧಿಕಾರಿ ನಂದಾಕಡಿ ಅವರು ತಿಳಿಸಿದರು.
ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತಾ ಅಧಿಕಾರಿ ಪ್ರಕಾಶ್ ಎಸ್. ಪುಣ್ಯಶೆಟ್ಟಿ ಅವರ ಆದೇಶದ ಮೇರೆಗೆ ತಪಾಸಣೆ ಸಮಯದಲ್ಲಿ ಕಂಡುಬಂದ ಲೋಪಗಳಿಗೆ ನಿಯಮಾನುಸಾರ ತಿಳಿವಳಿಕೆಯ ಪತ್ರವನ್ನು ಆಹಾರ ಉದ್ದಿಮೆದಾರರಿಗೆ ನೀಡಲಾಗಿದ್ದು, ದಂಡ ಸಹ ವಿಧಿಸಲಾಗಿದೆ. ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂದ ಲೋಪ-ದೋಷಗಳನ್ನು ಒಂದು ವಾರದೊಳಗೆ ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.ಈ ವೇಳೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಅಧಿಕಾರಿಗಳು ಇದ್ದರು.