ಅತಿವೃಷ್ಟಿಗೆ ಕಡೂರಲ್ಲಿ ಅಂದಾಜು ₹30 ಕೋಟಿ ಹಾನಿ: ಶಾಸಕ ಕೆ.ಎಸ್‌. ಆನಂದ

KannadaprabhaNewsNetwork | Published : Jul 31, 2024 1:05 AM

ಸಾರಾಂಶ

ಬುಕ್ಕಸಾಗರಕ್ಕೆ ಹರಿಯುವ ಮಡಬಾಯಿ ಸಮೀಪದಲ್ಲಿ ಕೆರೆಗೆ ತೆರಳುವ ರಸ್ತೆ ಕುಸಿದು ನೀರು ತೋಟಗಳಿಗೆ ನುಗ್ಗಿರುವುದನ್ನು ಶಾಸಕ ಕೆ.ಎಸ್. ಆನಂದ್ ಅಧಿಕಾರಿಗಳು, ಮುಖಂಡರೊಂದಿಗೆ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಕಡೂರು

ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿರುವ ಕಡೂರು ತಾಲೂಕಿನ ಎಮ್ಮೆದೊಡ್ಡಿ ಪ್ರದೇಶದ ಮದಗದ ಕೆರೆಗೆ ಮತ್ತು ಕೆರೆ ಪಾತ್ರದ ಸುತ್ತಮುತ್ತಲ ಪ್ರದೇಶಗಳಿಗೆ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ ಅತಿವೃಷ್ಟಿ ಪರಿಶೀಲನೆ ನಡೆಸಿದರು.

ಮಂಗಳವಾರ ಬೆಳಗ್ಗೆ ಕ್ಷೇತ್ರದ ಚಿಕ್ಕಂಗಳ, ಎಮ್ಮೇದೊಡ್ಡಿ ಭಾಗದ ರಾಂಪುರ ತಾಂಡ್ಯ, ಗಾಂಧೀನಗರ, ವೈ.ರಂಗೇನಹಳ್ಳಿ, ಮುಸ್ಲಾಪುರದ ಹಟ್ಟಿ, ಲಕ್ಕೇನಹಳ್ಳಿ, ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಅಬ್ಬರದ ಗಾಳಿ ಮಳೆಗೆ ಕುಸಿದಿರುವ ಮನೆಗಳನ್ನು ಪರಿಶೀಲಿಸಿ ಸಂತ್ರಸ್ತರಿಗೆ ಸಮಾಧಾನ ಹೇಳಿದರು. ಆನಂತರ ಮುಂದಿನ ಕ್ರಮದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆ ಸೂಚನೆ ನೀಡಿದರು.

ಅಲ್ಲದೇ ಮುಸ್ಲಾಪುರದ ಹಟ್ಟಿಯಿಂದ ಮದಗದ ಕೆರೆಗೆ ಹೋಗುವ ದಾರಿಯಲ್ಲಿ ಸಾಗುವ ಮೂಲಕ ಲಕ್ಕೇನಹಳ್ಳಿ ತಾಂಡಕ್ಕೆ ಭೇಟಿ ನೀಡಿ, ಕೆರೆಯಿಂದ ಬರುವ ಕಾಲುವೆ ಸೇತುವೆಗಳು ಶಿಥಿಲವಾಗಿರುವ ಕುರಿತು ವೀಕ್ಷಿಸಿ, ಗ್ರಾಮಗಳ ಜನರು ನೀರು ನುಗ್ಗುವುದರ ಅಪಾಯದ ಕುರಿತ ಆತಂಕದ ಮಾತನ್ನು ಆಲಿಸಿದರು.

ಕೆರೆಗೆ ತೆರಳುವಾಗ ಅಧಿಕಾರಿಗಳೊಂದಿಗೆ ಮಳೆಯಲ್ಲಿಯೇ ಸಾಗಿದ ಶಾಸಕರು ಬುಕ್ಕಸಾಗರಕ್ಕೆ ಹರಿಯುವ ಮಡಬಾಯಿ ಸಮೀಪದಲ್ಲಿ ಕಾಲುವೆ ನೀರು ರಸ್ತೆಗೆ ರಭಸವಾಗಿ ಹರಿಯುತ್ತಿರುವ ಕಾರಣ ಕೆರೆಗೆ ತೆರಳುವ ಟಾರಿನ ರಸ್ತೆ ಕುಸಿದಿದ್ದು, ನೀರು ತೋಟಗಳಿಗೆ ನುಗ್ಗಿ ವಿದ್ಯುತ್ ಕಂಬಗಳು ಉರುಳಿ ಲೈನುಗಳು ಬಿದ್ದಿರುವುದನ್ನು ವೀಕ್ಷಿಸಿ ಕೆರೆ ಬಳಿ ಕೆಸರಿನಿಂದ ಹೋಗಲು ಸಾದ್ಯವಾಗದಿದ್ದರೂ ನಿಧಾನವಾಗಿ ನಡೆದುಕೊಂಡೇ ಕೆರೆ ಪ್ರದೇಶಕ್ಕೆ ತೆರಳಿದರು.

ಬ್ರಹ್ಮದೇವರ ಕಟ್ಟೆ ಬಳಿ ಸಂಪೂರ್ಣ ಹಾನಿಯಾಗಿರುವ ಸೇತುವೆ ವೀಕ್ಷಿಸಿ ಅಲ್ಲಿಂದ ಮುಂದಕ್ಕೆ ತೆರಳಿ ಕೆರೆ ಕೋಡಿ ಬಳಿಯ ಕಾಮಗಾರಿ ವೀಕ್ಷಿಸಿದರು.

ಬಳಿಕ ಮುಸ್ಲಾಪುರದ ಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಮಳೆ ಸಮೃದ್ಧವಾಗಿ ಸುರಿದಿರುವುದು ಸಮಾಧಾನ ತಂದರೆ ಹೆಚ್ಚಿನ ಮಳೆಯಿಂದ ಅನೇಕ ತೋಟಗಳು, ಏಳೆಂಟು ಸೇತುವೆಗಳು, ವಿದ್ಯುತ್ ಸಂಪರ್ಕ, ಸಂಪರ್ಕ ರಸ್ತೆಗಳೂ ಸೇರಿದಂತೆ ಸುಮಾರು ₹30 ಕೋಟಿಯಷ್ಟು ಹಾನಿ ಸಂಭವಿಸಿದೆ. ಸಣ್ಣ ನೀರಾವರಿ ಇಲಾಖೆಗಳ ರಾಯಗಾಲುವೆ ಮತ್ತು ಇತರೆ ಕಾಲುವೆಗಳು ಬಹಳಷ್ಟು ಕಡೆ ಹಾನಿಗೊಂಡಿವೆ. ಇಂದು ಎಲ್ಲ ಇಲಾಖೆಗಳ ಅಧಿಕಾರಿ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಎರಡು ದಿನಗಳೊಳಗೆ ಹಾನಿ ಸಮಗ್ರ ವರದಿ ಸರ್ಕಾರಕ್ಕೆ ನಷ್ಟ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ತಹಸೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದರು.

ಈಗಾಗಲೇ ಹಾನಿಗೆ ಒಳಗಾಗಿರುವ 23 ಮನೆಗಳಿಗೆ ತಲಾ 1.20 ಲಕ್ಷ ರುಪಾಯಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಪರಿಹಾರ ನೀಡಲಾಗುತ್ತಿದೆ. ಕಳೆದೆರಡು ದಿನಗಳಲ್ಲಿ ಮಳೆ ಹೆಚ್ಚಾಗಿ ಮತ್ತಷ್ಟು ಮನೆಗಳಿಗೆ ಹಾನಿಯಾಗಿದ್ದು, ಗ್ರಾಪಂ ಪಿಡಿಒಗಳಿಗೆ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪರಿಹಾರಕ್ಕೆ ಕ್ರಮ ವಹಿಸಲು ಸೂಚಿಸಿದ್ದೇನೆ. ಇದು ತಕ್ಷಣಕ್ಕೆ ಸಿಗುವ ಪರಿಹಾರವಾಗಿದ್ದು, ಹೆಚ್ಚಿನ ಪರಿಹಾರ ದೊರಕಿಸಿಕೊಡಲಾಗುವುದು. ಮಳೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ರಾಯಗಾಲುವೆ ಮತ್ತು ಕೆರೆ ಏರಿ ಮೇಲೆ ವಾಹನಗಳಲ್ಲಿ ಓಡಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ತಾಪಂ ಇಒ ಸಿ.ಆರ್.ಪ್ರವೀಣ್ ಮಾತನಾಡಿ, ಮಳೆ ಹಾನಿಗೆ ಸಂಬಂಧಿಸಿದಂತೆ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಮತ್ತಿತರ ಇಲಾಖೆಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಪ್ರಸ್ತುತ ಹಾನಿಗೊಳಗಾದ ಮನೆಗಳಿಗೆ ₹1.20 ಲಕ್ಷ ಪರಿಹಾರ ನೀಡುವ ಅವಕಾಶವಿದ್ದು, ಮತ್ತೆ ಹಾನಿಗೊಳಗಾದರೆ ಪರಿಹಾರ ದೊರೆಯುವುದಿಲ್ಲ ಎಂದರು.

ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಮನೆ ಹಾನಿಯಾದವರಿಗೆ 48 ಗಂಟೆಗಳಲ್ಲಿ ಸರ್ಕಾರದ ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದರು.

ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳಾದ ದಯಾಶಂಕರ್, ಎಇ ಮಂಜುನಾಥ್, ಲೋಕೋಪಯೋಗಿ ಇಲಾಖೆ ಎಇಇ ಬಸವರಾಜ ನಾಯ್ಕ, ಇನ್ಸ್ ಪೆಕ್ಟರ್ ದುರುಗಪ್ಪ, ವಲಯ ಅರಣ್ಯಾಧಿಕಾರಿ ರಜಾಕ್ ಸಾಬ್ ನಧಾಫ್ , ಚಿಕ್ಕಂಗಳ ಗ್ರಾಪಂ ಅಧ್ಯಕ್ಷ ಪ್ರಕಾಶನಾಯ್ಕ, ಮುಖಂಡರಾದ ಹೊಗರೇಹಳ್ಳಿ ಶಶಿ, ವಸಂತ್ ಕುಮಾರ್, ಸೋಮೇಶ್, ದೇವರಾಜ್, ಹರೀಶ್, ಮತ್ತಿತರರು ಇದ್ದರು. ಮಳೆ ಹಾನಿಗೆ ಸಂಭಂದಿಸಿದಂತೆ ಎಮ್ಮೇದೊಡ್ಡಿ ಮುಸ್ಲಾಪುರದಹಟ್ಟಿಯಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗುವುದು. ವಿಪತ್ತಿನ ಮಾಹಿತಿ, ಕೈಗೊಳ್ಳಬೇಕಾದ ಕ್ರಮ ಹಾಗೂ ಮತ್ತಿತಿರ ವಿವರಗಳ ಮಾಹಿತಿಯನ್ನು ಇಲ್ಲಿ ತಿಳಿಸಿಲಾಗಿರುತ್ತದೆ.

ಪ್ರವೀಣ್. ತಾಪಂ ಇಒ

Share this article