ಸ್ವಾತಂತ್ರ್ಯ ಬಂದು 75 ವರ್ಷವಾದರೂ ಮಹಿಳಾ ಸಮಾನತೆ ಕಗ್ಗಂಟಾಗಿದೆ: ನಂದಿನಿ ಜಯರಾಂ ಬೇಸರ

KannadaprabhaNewsNetwork | Published : Dec 3, 2024 12:33 AM

ಸಾರಾಂಶ

ನಾಡಿನ ಖ್ಯಾತ ಸಾಹಿತಿ ನಿರಂಜನ ಅವರ ಪ್ರೋತ್ಸಾಹ ಹಾಗೂ ಪ್ರಭಾವ ದಿಂದ ಅನುವಾದಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಿಂದಿ ಮತ್ತು ಕನ್ನಡ ಭಾಷೆ ಮೇಲೆ ಪ್ರಭುತ್ವ ಸಾಧಿಸಿ ಕತೆ, ಕಾದಂಬರಿ, ವಿಚಾರ ಸಾಹಿತ್ಯ ಗಳನ್ನು ಅನುವಾದ ಮಾಡುವ ಜೊತೆಗೆ ಪತ್ರಿಕೆಗಳಲ್ಲಿ ಸ್ತ್ರೀ ಪರವಾದ ಲೇಖನಗಳನ್ನು ಬರೆದು ಸಮಾಜವನ್ನು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆಯುತ್ತಿದ್ದರೂ ಮಹಿಳಾ ಸಮಾನತೆ ಎಂಬುದು ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದಬ್ಬಾಳಿಕೆ ದೌರ್ಜನ್ಯ ನಿರಂತರವಾಗಿದೆ ಎಂದು ರಾಜ್ಯ ರೈತ ಸಂಘದ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ನಂದಿನಿ ಜಯರಾಂ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಲೋಕಾಯಾನ ಕಲ್ಚರಲ್ ಫೌಂಡೇಶನ್, ಹೇಮಾವತಿ ಹೊನ್ನಾರು ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಉದಯರವಿ ಟ್ರಸ್ಟ್ ಆಯದಲ್ಲಿ ಲೇಖಕಿ ಎಚ್.ಎಸ್.ಪಾರ್ವತಿ ಅವರ ನೆನಪಿನ ಉಪನ್ಯಾಸ, ಪುಸ್ತಕ ಬಿಡುಗಡೆ ಹಾಗೂ ತಾಲೂಕು ಲೇಖಕಿಯರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ತಾಯಿ, ಮಡದಿ, ಸಹೋದರಿ, ಮಗಳಾಗಿ ಸಮಾಜದ ಎಲ್ಲಾ ಸ್ತರಗಳಲ್ಲಿ ಕೆಲಸ ಮಾಡಿ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ತನ್ನ ಪಾಲನ್ನು ನೀಡುತ್ತಿರುವ ಹೆಣ್ಣು ಮಕ್ಕಳ ಮೇಲೆ ಶೋಷಣೆಯು ನಿರಂತರವಾಗಿ ನಡೆಯುತ್ತಿದೆ ಎಂದು ವಿಷಾದಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗು ಇಂದಿಗೂ ಜೀವಂತವಾಗಿದೆ. ಹೆಣ್ಣು ಮಕ್ಕಳನ್ನು ಪೂಜಿಸಿ ಗೌರವಿಸುವ ಸಂಸ್ಕೃತಿಯನ್ನು ಹೊಂದಿರುವ ಭಾರತ ದೇಶದಲ್ಲಿಯೂ ನಾರಿಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕು ಎಂದು ಎಂದು ಕರೆ ನೀಡಿದರು.

ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೆಚ್.ಎಲ್.ಪುಷ್ಪ ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ಲೇಖಕಿ ಎಚ್.ಎಸ್.ಪಾರ್ವತಿ ಅವರ ಹೆಸರು ಚಿರಸ್ಥಾಯಿಯಾಗಿದೆ. ಅನುವಾದಕರಾಗಿ, ನಾಟಕಕಾರರಾಗಿ, ಸಣ್ಣಕತೆ, ಕಾದಂಬರಿ ರಚನೆಕಾರರಾಗಿ ಹೆಸರು ಗಳಿಸಿರುವ ಪಾರ್ವತಿ ಅವರ ತಾಯಿ ಅಕ್ಕಿಹೆಬ್ಬಾಳು ಗ್ರಾಮದವರು ಎಂಬುದು ಹೆಮ್ಮೆಯ ವಿಷಯ ಎಂದರು.

ನಾಡಿನ ಖ್ಯಾತ ಸಾಹಿತಿ ನಿರಂಜನ ಅವರ ಪ್ರೋತ್ಸಾಹ ಹಾಗೂ ಪ್ರಭಾವ ದಿಂದ ಅನುವಾದಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಿಂದಿ ಮತ್ತು ಕನ್ನಡ ಭಾಷೆ ಮೇಲೆ ಪ್ರಭುತ್ವ ಸಾಧಿಸಿ ಕತೆ, ಕಾದಂಬರಿ, ವಿಚಾರ ಸಾಹಿತ್ಯ ಗಳನ್ನು ಅನುವಾದ ಮಾಡುವ ಜೊತೆಗೆ ಪತ್ರಿಕೆಗಳಲ್ಲಿ ಸ್ತ್ರೀ ಪರವಾದ ಲೇಖನಗಳನ್ನು ಬರೆದು ಸಮಾಜವನ್ನು ಎಚ್ಚರಿಸಿದರು.

15 ಕೃತಿಗಳನ್ನು ರಚಿಸಿ, 10ಕ್ಕೂ ಹೆಚ್ಚಿನ ಕಾದಂಬರಿಗಳು, 7 ಕಥಾ ಸಂಕಲನಗಳು ಪ್ರಬಂಧ ಸಾಹಿತ್ಯ ಸೇರಿದಂತೆ 14 ಭಾಷಾಂತರ ಕೃತಿಗಳು, ತಿರುಮಲೆ ರಾಜಮ್ಮ, ಆರ್.ಕಲ್ಯಾಣಮ್ಮ ಅವರ ಜೀವನ ಚರಿತ್ರೆ ಸೇರಿದಂತೆ ರೇಡಿಯೋ ನಾಟಕಗಳ ಮೂಲಕ ನಾಡಿನಾಧ್ಯಂತ ಪಾರ್ವತಿ ಚಿರಪರಿಚಿತ ರಾಗಿದ್ದರು ಎಂದರು.

ಅನುಪಮಾ ಪ್ರಶಸ್ತಿ, ಉತ್ತರ ಪ್ರದೇಶ ಸರ್ಕಾರದ ಸೌಹಾರ್ಧ ಸಮ್ಮಾನ್ ಸಾಹಿತ್ಯ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್, ಕರ್ನಾಟಕ ಅನುವಾದ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿರುವ ಪಾರ್ವತಿ ಅವರ ಜೀವನದ ಆದರ್ಶಗಳು ದಾರಿ ದೀಪವಾಗಿವೆ ಎಂದರು.

ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಕವಿಯತ್ರಿ ಸವಿತಾರಮೇಶ್ ರಚಿಸಿರುವ ಕೃಷ್ಣರಾಜಪೇಟೆ ಲೇಖಕಿಯರ ಸಾಹಿತ್ಯ ಅವ ಲೋಕನ ಕೃತಿಯನ್ನು ಪಟ್ಟಣದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲೆ ಡಾ.ಕೆ.ಪಿ.ಪ್ರತಿಮಾ ಲೋಕಾರ್ಪಣೆ ಮಾಡಿದರು.

ಬೆಂಗಳೂರಿನ ಅಬ್ಬಾಸ್‌ಖಾನ್ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಎಸ್.ವಿದ್ಯಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡ ಎ.ಆರ್.ರಘು, ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಲೇಖಕಿ ಸವಿತಾ ರಮೇಶ್, ರಂಗಕರ್ಮಿ ಶಶಿಧರ ಭಾರೀಘಾಟ್, ಲೇಖಕ ಶಿ.ಕುಮಾರಸ್ವಾಮಿ, ಉದಯರವಿ ಟ್ರಸ್ಟ್ ಕಾರ್ಯದರ್ಶಿ ಕತ್ತರಘಟ್ಟ ವಾಸು ಮಾತನಾಡಿದರು.

ಸಮಾವೇಶದಲ್ಲಿ ತಾಲೂಕಿನ 50ಕ್ಕೂ ಹೆಚ್ಚು ಲೇಖಕಿಯರು ಭಾಗವಹಿಸಿದ್ದರು. ಲೋಕಾಯನ ಕಲ್ಚರಲ್ ಫೌಂಡೇಶನ್ ಸಂಚಾಲಕರಾದ ಅಜರುದ್ಧೀನ್, ದೀಪಿಕಾ, ಸ್ಪೂರ್ತಿ ಅಭಿನಂದನ್ ಹಾಗೂ ಗಗನ್ ಕಾರ್ಯಕ್ರಮ ನಡೆಸಿಕೊಟ್ಟರು.

Share this article