ದಾವಣಗೆರೆ : ಭದ್ರಾ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲವೆಂದು ಆಕ್ರೋಶಗೊಂಡ ರೈತರು ಮಾಜಿ ಸಚಿವ ಎಸ್.ಎ. ರವೀಂದ್ರನಾಥ ನೇತೃತ್ವದಲ್ಲಿ ಭಾರತೀಯ ರೈತ ಒಕ್ಕೂಟದಿಂದ ನಗರದ ನೀರಾವರಿ ಇಲಾಖೆ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.
ನಗರದ ಹದಡಿ ರಸ್ತೆಯ ನೀರಾವರಿ ಇಲಾಖೆ ಕಚೇರಿ ಎದುರು ಭಾರತೀಯ ರೈತ ಒಕ್ಕೂಟದ ಹಿರಿಯ ನಾಯಕರೂ ಆದ ಎಸ್.ಎ. ರವೀಂದ್ರನಾಥ ನೇತೃತ್ವದಲ್ಲಿ ಭದ್ರಾ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ಒದಗಿಸುವಂತೆ ಒತ್ತಾಯಿಸಿ ಅಚ್ಚುಕಟ್ಟು ರೈತರು ಘೋಷಣೆ ಕೂಗಿದರು.
ಎಸ್.ಎ.ರವೀಂದ್ರನಾಥ ಮಾತನಾಡಿ, ಭದ್ರಾ ಡ್ಯಾಂನಿಂದ ನೀರು ಹರಿಸಿ, 80 ದಿನಗಳಾದರೂ ನೀರು ಇನ್ನೂ ಕೊನೆ ಭಾಗಕ್ಕೆ ತಲುಪಿಲ್ಲ. ಪರಿಸ್ಥಿತಿ ಅವಲೋಕನ ನೋಡಿ, ಮಾಡಿ, ಮುಂದಿನ ದಿನಗಳಲ್ಲಿ ನೀರು ಬಿಡಿಸುವ ಕೆಲಸವನ್ನು ಮಾಡುತ್ತೇವೆ. ಕೊನೆಯ ಭಾಗವೆಂದರೆ ಅದೇ ಅರ್ಥ. ಗುದ್ದಾಡಿಕೊಂಡೇ ನೀರು ಬಿಟ್ಟುಕೊಂಡು ಬಂದಿದ್ದಾರೆ. 3-4 ದಿನಗಳಲ್ಲಿ ಪರಿಶೀಲಿಸಿ, ನೀರು ಬಿಡುವಂತೆ ಒತ್ತಡ ಹೇರುತ್ತೇವೆ ಎಂದರು.
ಅಚ್ಚುಕಟ್ಟು ಕೊನೆಯ ಭಾಗದ ಸ್ಥಿತಿಗತಿ ನೋಡಿಕೊಂಡು, ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀರೊದಗಿಸುವಂತೆ ಹೇಳುತ್ತೇವೆ. ಹರಿಹರ, ದಾವಣಗೆರೆ ಅಂತಾ ಅಲ್ಲ, ಭದ್ರಾ ಅಚ್ಚುಕಟ್ಟು ಅಂದರೆ ಎಲ್ಲಾ ಒಂದೇ. 9 ಕಿಮೀನಿಂದ 145ನೇ ಕಿಮೀವರೆಗೂ ಅಚ್ಚುಕಟ್ಟು ಪ್ರದೇಶ. ಸ್ಥಿತಿಗತಿ ನೋಡಿ, ಇ.ಇ. ಮಂಜುನಾಥ ಅವರಿಗೆ ಅಕ್ರಮ ಪಂಪ್‌ಸೆಟ್ ತೆರವು ಮಾಡಿಸಿ, ಕೇಸ್ ಮಾಡುವಂತೆ ಹೇಳಿದ್ದರೂ ಮಾಡಿಲ್ಲವೆಂಬ ಮಾತಿದೆ. ಮತ್ತೆ ಸಂಪರ್ಕ ಮಾಡಿಕೊಳ್ಳುತ್ತಾರೆ. ಪೊಲೀಸರಿಂದಲೇ ಕೇಸ್ ಮಾಡಿಸುವಂತೆ ಹರಿಹರದಲ್ಲಿ ಗಲಾಟೆ ಮಾಡಿ, ಮಾಡಿದ್ದಾರೆ. ಅದೇ ರೀತಿ ಇಲ್ಲೂ ಮಾಡಿಸೋಣ ಎಂದು ತಿಳಿಸಿದರು.
ಬಿಜೆಪಿ ರೈತ ಮೋರ್ಚಾ ಮುಖಂಡ ಬಿ.ಎಂ. ಸತೀಶ ಕೊಳೇನಹಳ್ಳಿ ಮಾತನಾಡಿ, ಭದ್ರಾ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸಲಾಗುತ್ತಿದೆ. ಗಿಡಗಳು ಬೆಳೆದು, ಹೂಳು ತುಂಬಿರುವ ನಾಲೆಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ನಾಲೆ ಮೇಲ್ಭಾಗದಲ್ಲಿ ಅಕ್ರಮ ಪಂಪ್‌ಸೆಟ್ ಹಾಕಿಕೊಂಡು, ಅಚ್ಚುಕಟ್ಟು ರೈತರ ಹಕ್ಕಿನ ನೀರನ್ನು ಕದಿಯಲಾಗುತ್ತಿದೆ. ಹಾಗಾಗಿ, ಕಳ್ಳತನವನ್ನು ಕಳ್ಳತನವೆಂದೇ ಪರಿಗಣಿಸಲಿ. ನೀರು ಕಳ್ಳರು, ವಿದ್ಯುತ್ ಕಳ್ಳರನ್ನು ಇಬ್ಬರನ್ನೂ ಒಂದೇ ರೀತಿ, ಒಂದೇ ಕಾನೂನಿನಡಿ ಬಂಧಿಸುವ ಕೆಲಸ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನೀರಾವರಿ ಇಲಾಖೆಗಳು ಮಾಡಬೇಕು ಎಂದು ಒತ್ತಾಯಿಸಿದರು.
2 ದಿನದೊಳಗೆ ನೀರು- ಭರವಸೆ:
ಪ್ರತಿಭಟನಾ ನಿರತರ ರೈತರ ಅಹವಾಲು ಆಲಿಸಿದ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ, ಸಹಾಯಕ ಕಾರ್ಯಪಾಲಕ ಅಭಿಯಂತರ ಚನ್ನಬಸಪ್ಪ ಮಾತನಾಡಿ, ಇನ್ನು 2 ದಿನಗಳಲ್ಲೇ ಭದ್ರಾ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪಿಸುವುದಾಗಿ ಭರವಸೆ ನೀಡಿದರು.
ಭಾರತೀಯ ರೈತ ಒಕ್ಕೂಟದ ಹಿರಿಯ ಮುಖಂಡ ಕೊಂಡಜ್ಜಿ ಶಾನುಬೋಗರ ನಾಗರಾಜ ರಾವ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬಾಳು, ಅನಿಲ ಕುಮಾರ ನಾಯ್ಕ, ಶಿವಕುಮಾರ, ತಾರೇಶ ನಾಯ್ಕ, ಎಚ್.ಪಿ. ವಿಶ್ವಾಸ್, ನಿಟುವಳ್ಳಿ ಕೊಟ್ರೇಶ ಗೌಡ, ಎಂಜಿನಿಯರ್ ಕುರುಡಿ ಶಿವಕುಮಾರ, ಅಚ್ಚುಕಟ್ಟು ರೈತರು ಇದ್ದರು.
ನೀರು ಕೊಡಿ ಅಥವಾ ವಿಷ ಕೊಡಿ ಭಾರತೀಯ ರೈತ ಒಕ್ಕೂಟದ ಭದ್ರಾ ಶಾಖೆ ಅಧ್ಯಕ್ಷ ಶಾಬನೂರು ಎಚ್.ಆರ್. ಲಿಂಗರಾಜ ಮಾತನಾಡಿ, ಕುಡಿಯುವ ನೀರು, ಬೆಳೆ ರಕ್ಷಣೆಗೆ ಅಂತಾ ಅಧಿಕಾರಿಗಳು ಹೇಳುತ್ತಾರೆ. ನಾವು ನೀರು ಕೇಳುತ್ತಿರುವುದೂ ರೈತರಿಗೇ. ಜಿಲ್ಲಾಧಿಕಾರಿ ಅವರು ನೀರಾವರಿ ಇಲಾಖೆ ಕಚೇರಿಗೆ ಬಂದು, ಮನವಿ ಆಲಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಜಿಲ್ಲಾಡಳಿತವೇ ನೇರ ಹೊಣೆ. ರೈತರಿಗೆ ನೀರು ಕೊಡಿ ಅಥವಾ ವಿಷ ಕೊಡಿ ಅಂತಾ ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದೇವೆ ಎಂದು ಎಚ್ಚರಿಸಿದರು. ಭದ್ರಾ ನಾಲೆಯಲ್ಲಿ ವರ್ಷಗಳಿಂದಲೂ ಸಾಕಷ್ಟು ಹೂಳು ತುಂಬಿದೆ. ಜಲಸಸ್ಯಗಳು, ಮುಳ್ಳುಗಿಡಗಳು ನಾಲೆಯುದ್ದಕ್ಕೂ ವ್ಯಾಪಿಸಿವೆ. ನಾಲೆಯ ಮೇಲ್ಭಾಗದಲ್ಲಿ ಅಕ್ರಮ ಪಂಪ್‌ಸೆಟ್ ಅಳವಡಿಸಿಕೊಂಡು, ಕೊನೆಯ ಭಾಗಕ್ಕೆ ನೀರು ಬಾರದಂತೆ ಮೇಲ್ಭಾಗದಲ್ಲೇ ನೀರನ್ನು ಅಕ್ರಮವಾಗಿ ತೋಟಗಳಿಗೆ, ಹೊಲ- ಗದ್ದೆಗಳಿಗೆ ಹರಿಸಿಕೊಳ್ಳಲಾಗುತ್ತಿದೆ. ಇದೆಲ್ಲಾ ಗೊತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಸರಿಯಲ್ಲ. ತಕ್ಷಣವೇ ಅಕ್ರಮ ಪಂಪ್‌ಸೆಟ್ ತೆರವು ಮಾಡಿ, ಕೊನೆಯ ಭಾಗಕ್ಕೆ ನೀರು ತಲುಪಿಸಬೇಕು ಎಂದು ತಾಕೀತು ಮಾಡಿದರು.