ನಾಲ್ಕು ವರ್ಷ ಕಳೆದರೂ ಜಲಜೀವನ್‌ ಮಿಷನ್‌ ಕಾಮಗಾರಿ ಅಪೂರ್ಣ!

KannadaprabhaNewsNetwork |  
Published : May 18, 2024, 12:34 AM IST
ಚಿತ್ರ.1: ನಾಕೂರು ಶಿರಂಗಾಲ ಭಾಗ-2ರಲ್ಲಿ ಕುಡಿಯುವ  ನೀರಿಗಾಗಿ 2021 ರಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಓವರ್ ಹೆಡ್‌ಟ್ಯಾಂಕ್. | Kannada Prabha

ಸಾರಾಂಶ

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಕೂರು ಶಿರಂಗಾಲ ಭಾಗ-2ರಲ್ಲಿ ಕುಡಿಯುವ ನೀರಿಗಾಗಿ 2021ರಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಆರಂಭಿಸಲಾಯಿತು. ಇದೀಗ ಈ ಕಾಮಗಾರಿ ಪೂರ್ಣಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸಾರ್ವಜನಿಕರ ತೆರಿಗೆ ಹಣ ಬಳಸಿ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲಾದ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ತೆರಿಗೆ ಹಣ ಯಾವ ರೀತಿಯಲ್ಲಿ ಪೋಲಾಗುತ್ತದೆ ಎನ್ನುವುದಕ್ಕೆ ಉದಾಹರಣೆ ಇಲ್ಲಿದೆ.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಕೂರು ಶಿರಂಗಾಲ ಭಾಗ-2ರಲ್ಲಿ ಕುಡಿಯುವ ನೀರಿಗಾಗಿ 2021ರಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಆರಂಭಿಸಲಾಯಿತು.

ಇದೀಗ ಈ ಕಾಮಗಾರಿ ಪೂರ್ಣಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಮಗಾರಿ ಇತಿಹಾಸ:

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ನಿವಾಸಿ ದಿ. ಜಯಂತ್ ಬಂಗೇರ ಅವರು ಗ್ರಾಮಸ್ಥರಿಗಾಗಿ ನೀರಿನ ವ್ಯವಸ್ಥೆ ಕಲ್ಪಿಸಲು ತಮ್ಮ ಜಾಗ ದಾನ ನೀಡಿ ಟ್ಯಾಂಕ್ ನಿರ್ಮಿಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದರು. ಅದರಂತೆ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಸುಮಾರು 55 ಲಕ್ಷ ರು. ವೆಚ್ಚದಲ್ಲಿ ಕಾಮಗಾರಿಯನ್ನು ಗುತ್ತಿಗೆದಾರ ಸಂತೋಷ್ ವಹಿಸಿಕೊಂಡಿದ್ದರು. 2021 ರಿಂದ ಪ್ರಾರಂಭವಾದ ಈ ಓವರ್ ಹೆಡ್ ಟ್ಯಾಂಕ್ 2024ರಲ್ಲೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರ ಸಂತೋಷ ಅವರು ಉಪಗುತ್ತಿಗೆದಾರ ಅದ್ರಾಂ ಎಂಬವರಿಗೆ ಗುತ್ತಿಗೆ ವಹಿಸಿಕೊಟ್ಟಿದ್ದರು. ಆದರೆ ಅದ್ರಂ ಅವರಿಗೆ ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ಆರೋಗ್ಯದ ಸಮಸ್ಯೆ ಉಂಟಾಗಿ ಐದು ತಿಂಗಳ ಹಿಂದೆ ಮೃತಪಟ್ಟಿದ್ದರಿಂದ ಈ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ನಂತರದ ದಿನಗಳಲ್ಲಿ ಮುಖ್ಯ ಗುತ್ತಿಗೆದಾರ ಸಂತೋಷ್ ಅವರು ಈ ಬಗ್ಗೆ ಯಾವುದೇ ಕ್ರಮ ಕಂಡುಕೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ತಕ್ಷಣದಲ್ಲಿಯೇ ಈ ಕಾಮಗಾರಿ ಮುಗಿಸಿಕೊಡುವುದರ ಮೂಲಕ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ನೀಡುವಂತೆ ಇಂಜಿನಿಯರ್, ಗುತ್ತಿಗೆದಾರ, ಎಡಬ್ಲ್ಯೂ ಗ್ರಾಮ ಪಂಚಾಯಿತಿ ಪಿಡಿಒ ಅವರಲ್ಲಿ ಒತ್ತಡ ಹಾಕಿದ್ದಾರೆ.

2021ರಿಂದ ಪ್ರಾರಂಭವಾದ ಕಾಮಗಾರಿ ನಾಲ್ಕು ವರ್ಷವಾದರೂ ಪೂರ್ಣಗೊಳ್ಳದೇ ಇರುವುದಕ್ಕೆ ಗ್ರಾಮ ಪಂಚಾಯತಿಯ ಈ ಭಾಗದ ಸದಸ್ಯರೇ ಕಾರಣರು. ಒಂದು ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಹಾಗೂ ಈ ಭಾಗದ ಸದಸ್ಯರು ಗುತ್ತಿಗೆದಾರರಿಗೆ ಒತ್ತಾಯ ಹಾಕಿದ್ದಲ್ಲಿ ಈ ಕಾಮಗಾರಿ ಮುಕ್ತಾಯಗೊಳ್ಳುತ್ತಿತ್ತು ಎಂದು ಈ ಭಾಗದ ಮುಖಂಡರಾದ ಶಂಕರ್ ನಾರಾಯಣ, ಅನಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

..........................

ಈಗಾಗಲೇ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು ಉಪಗುತ್ತಿಗೆದಾರರು ಮೃತಪಟ್ಟ ಹಿನ್ನೆಲೆಯಲ್ಲಿ ಈ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಶೀಘ್ರದಲ್ಲಿಯೇ ಈ ಕಾಮಗಾರಿ ಮುಗಿಸಿಕೊಡಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.

-ಫಯಾಜ್‌ ಅಹಮ್ಮದ್, ಜಿ.ಪಂ. ಎಂಜಿನಿಯರ್.

..............

ಈಗಾಗಲೇ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಈ ಓವರ್ ಹೆಡ್‌ಟ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದರೆ ನೀರಿನ ಸಮಸ್ಯೆ ಅಲ್ಪ ಪ್ರಮಾಣದಲ್ಲಾದರೂ ನೀಗುತ್ತಿತ್ತು. ಕಳೆದ ನಾಲ್ಕು ವರ್ಷಗಳ ಹಿಂದೆ ಕಾಮಗಾರಿ ಪ್ರಾರಂಭಗೊಂಡು ಪೂರ್ಣಗೊಳ್ಳದೆ ಅತಂತ್ರಗೊಂಡಿದೆ.ಈ ಭಾಗದ ಗ್ರಾಮ ಪಂಚಾಯತಿ ಸದಸ್ಯರ ನಿರ್ಲಕ್ಷ್ಯಕ್ಕೆ ಈ ಟ್ಯಾಂಕ್ ಬಲಿಯಾಗಿದೆ. ಕೂಡಲೇ ಜಿಲ್ಲಾ ಪಂಚಾಯಿತಿ ಎಂಜಿನಿಯರ್‌, ಎಡಬ್ಲ್ಯೂ ಎಚ್ಚೆತ್ತುಕೊಂಡು ಕಾಮಗಾರಿ ತಕ್ಷಣದಲ್ಲಿ ಪೂರ್ಣಗೊಳಿಸಬೇಕು ಇಲ್ಲದಿದ್ದಲ್ಲಿ ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಲಾಗುವುದು.

-ಅನಿಲ್‌ ಕುಮಾರ್‌, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ನಿವಾಸಿ.

..............

ಈ ಕಾಮಗಾರಿಯ ಬಗ್ಗೆ ಗುತ್ತಿಗೆದಾರರಿಗೆ ಮನವಿ ಮಾಡಲಾಗಿದೆ. ಶೀಘ್ರದಲ್ಲಿ ಮುಗಿಸಿಕೊಡುವುದಾಗಿ ತಿಳಿಸಿದ್ದಾರೆ.

-ಗೂಳಪ್ಪ, ಗ್ರಾಮ ಪಂಚಾಯಿತಿ ಪಿಡಿಒ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಟಲ್ ಬಿಹಾರಿ ವಾಜಪೇಯಿ ಮೌಲ್ಯಾಧಾರಿತ ರಾಜಕಾರಣಿ
ಮಾಗಡಿಯಲ್ಲಿ ಪತ್ರಕರ್ತರ ಭವನಕ್ಕೆ ಭೂಮಿಪೂಜೆ