ಸಂಸದರು ಗೆದ್ದು ನೂರು ದಿನವಾದರೂ ಮೂರು ಸಭೆಯಿಲ್ಲ: ಮೂಡ್ನಾಕೂಡು ಪ್ರಕಾಶ್

KannadaprabhaNewsNetwork | Published : Sep 22, 2024 1:50 AM

ಸಾರಾಂಶ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಸುನೀಲ್‌ ಬೋಸ್ ಕಾಂಗ್ರೆಸ್ ಪಕ್ಷದಿಂದ ಗೆದ್ದು ನೂರು ದಿನವಾದರೂ ಕೇಂದ್ರ ಸ್ಥಾನ ಚಾಮರಾಜನಗರದಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಒಂದು ಸಭೆಯನ್ನು ನಡೆಸಿಲ್ಲ ಎಂದು ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮೂಡ್ನಾಕೂಡು ಪ್ರಕಾಶ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಸುನೀಲ್‌ ಬೋಸ್ ಕಾಂಗ್ರೆಸ್ ಪಕ್ಷದಿಂದ ಗೆದ್ದು ನೂರು ದಿನವಾದರೂ ಕೇಂದ್ರ ಸ್ಥಾನ ಚಾಮರಾಜನಗರದಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಒಂದು ಸಭೆಯನ್ನು ನಡೆಸಿಲ್ಲ, ಜನರು ಅಹವಾಲು ಸಲ್ಲಿಸಲು ಕಚೇರಿಯನ್ನು ತೆರೆದಿಲ್ಲ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಆರೋಪಿಸಿದರು.ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರಿ ಬಹುಮತದಿಂದ ಆಯ್ಕೆಯಾದರೂ ಕ್ಷೇತ್ರದ ಜನಕ್ಕೆ ಭಾರಿ ನಿರಾಸೆಯನ್ನುಂಟು ಮಾಡಿದ್ದಾರೆ ಎಂದರು. ಸಂಸದರು ಚುನಾಯಿತರಾಗಿ ನೂರು ದಿನಗಳಾಗಿದೆ. ಆದರೂ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿಲ್ಲ. ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲಕ್ಕೆ ನಗರಸಭಾ ಪುರಸಭಾ ಚುನಾವಣೆ ಮತದಾನ ಮಾಡಲು ಬಂದಿದ್ದು ಬಿಟ್ಟರೆ ಜನರ ನಿರೀಕ್ಷಿತ ರೀತಿಯಲ್ಲಿ ಸಮಸ್ಯೆಗಳನ್ನು ಆಲಿಸಲು ಬರುವ ಪ್ರಯತ್ನ ಮಾಡಿಲ್ಲ ಎಂದರು.

ಕನಿಷ್ಠ ಸಂಸದರ ಕಚೇರಿಗೆ ಕರೆದು ಕ್ಷೇತ್ರದ ಜನರಿಗೆ ಒಂದು ಅರ್ಜಿ ಕೊಡುವ ಅವಕಾಶವನ್ನೂ ಮಾಡಿಕೊಟ್ಟಿಲ್ಲ. ಸಂಸದರು ಚುನಾವಣಾ ಅಫಿಡವಿಟ್‌ನಲ್ಲಿ ನಾನು ಯಾರನ್ನು ಅವಲಂಬಿತನಾಗಿಲ್ಲ. ಜೊತೆಗೆ ನಾನು ಮದುವೆ ಆಗಿರುವುದಿಲ್ಲ ಎಂದು ದೃಢೀಕರಿಸಿದ್ದಾರೆ. ಇವರಿಗೆ ಯಾವುದೇ ರೀತಿಯ ಸಾಂಸಾರಿಕ ಜಂಜಾಟ ಇಲ್ಲ, ಕೇಂದ್ರ ಸ್ಥಾನಕ್ಕೆ ಭೇಟಿ ನೀಡಿ ಜನರ ಅಹವಾಲು ಕೇಳಿ ಅಭಿವೃದ್ಧಿಗೆ ಪೂರಕ ವಾತಾವರಣವನ್ನ ಸೃಷ್ಟಿಮಾಡಬಹುದಿತ್ತು ಎಂದರು.ಹಿಂದೆ ಸಂಸದರಾಗಿದ್ದ ದಿ. ಶ್ರೀನಿವಾಸ್‌ಪ್ರಸಾದ್‌ ಆವರು ಅನಾರೋಗ್ಯದ ಮಧ್ಯೆಯೂ ಬಂದು ಪ್ರಗತಿ ಪರಿಶೀಲನ ಸಭೆಗಳನ್ನು ನಡೆಸುತ್ತಿದ್ದರು. ಯುವಕರಾದ ತಾವು ಕ್ಷೇತ್ರದ ಅಭಿವೃದ್ಧಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು. ರಾಷ್ಟ್ರೀಯ ಹೆದ್ದಾರಿ ಅಪಘಾತದಲ್ಲಿ ೧೮೦ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಒಬ್ಬ ಸಂಸದರಾಗಿ ಹೆದ್ದಾರಿಯ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸುವ ಕನಿಷ್ಠ ಕಾಳಜಿ ಸಹ ತೋರಿಲ್ಲ ಎಂದು ಆರೋಪಿಸಿದರು.

ಮೊನ್ನೆ ಯಳಂದೂರು ತಾಲೂಕಿನ ಎಳೆಪಿಳ್ಳಾರಿ ದೇವಸ್ಥಾನದ ಬಳಿ ಚಿರತೆ ಓಡಿಸಲು ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ನಾಲ್ವರು ಗಾಯಗೊಂಡಿದ್ದಾರೆ ಸೌಜನ್ಯಕ್ಕಾದರೂ ಭೇಟಿ ನೀಡಿ ಧೈರ್ಯ ಹೇಳುವ ಪ್ರಯತ್ನ ಮಾಡಿಲ್ಲ. ಹಾಗೇ ಬೈಲೂರು ಅರಣ್ಯ ಪ್ರದೇಶದಲ್ಲಿ ಎರಡು ಆನೆಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ. ಇದರ ಬಗ್ಗೆ ಯಾವುದೇ ತನಿಖೆಗೆ ಆದೇಶಿಸಿಲ್ಲ ಎಂದರು. ದಿ.ಶ್ರೀನಿವಾಸ್ ಪ್ರಸಾದ್ ಅವರ ಮುತುವರ್ಜಿ ಫಲವಾಗಿ ರೈಲ್ವೆ ನಿಲ್ದಾಣ ಮೇಲ್ದರ್ಜೆ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, ಅದನ್ನಾದರೂ ಪರಿಶೀಲಿಸಿ ಎಂದರು

ಸಂಸದರ ತಂದೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಗ ಗೆಲ್ಲುವವರೆಗೂ ದಿನ ಬಿಟ್ಟು ದಿನ ಬರುತ್ತಿದ್ದರು, ಉಸ್ತುವಾರಿ ಸಭೆಯಲ್ಲಿ ಭಾಗವಹಿಸುತ್ತಿದ್ದರು. ಈಗ ಇತ್ತ ಸುಳಿವೇ ಇಲ್ಲ, ಸಂಸದರು ಗೆದ್ದ ನಂತರ ಇಲ್ಲಿಯೇ ಮನೆ ಮಾಡುತ್ತೇನೆ. ಇಲ್ಲೇ ಇರುತ್ತೇನೆ ಎಂದು ಹೇಳಿದ್ದರು, ಮನೇ ಮಾಡುವುದು ಬೇಡ ಪ್ರಗತಿಪರಿಶೀಲನೆ ಸಭೆ ನಡೆಸಿ ಕ್ಷೇತ್ರದ ಅಭಿವೃದ್ದಿಗೆ ಗಮನಹರಿಸಿ ಎಂದರು. ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್ ಮಾತನಾಡಿ ಒಂದು ರಾಷ್ಟ್ರ, ಒಂದು ಚುನಾವಾಣೆ ನೀತಿ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವನ್ನು ಅಭಿನಂದಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡಹಳ್ಳಿ ಮೂರ್ತಿ, ಮಾಧ್ಯಮ ಪ್ರಮುಖ್ ರಾಮಸಮುದ್ರ ಶಿವಣ್ಣ ಇದ್ದರು.

Share this article