ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ವಾರಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿವೇಶನಕ್ಕಾಗಿ ಹಣ ಕಟ್ಟಿ 7 ವರ್ಷಗಳಾದರೂ ನಿವೇಶನ ಯೋಜನೆಗೆ ಅನುಮತಿ ನೀಡದ ಬಗ್ಗೆ ಗ್ರಾ.ಪಂ. ಮೇಲೆ ದೂರು ದಾಖಲಿಸಿಕೊಳ್ಳುವಂತೆ ಉಪಲೋಕಾಯುಕ್ತ ಜಸ್ಟಿಸ್ ಕೆ.ಎನ್.ಫಣೀಂದ್ರ ಆದೇಶಿಸಿದ್ದಾರೆ.ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 15ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು.
2015ರಲ್ಲಿ ಕರ್ನಾಟಕ ಗೃಹ ಮಂಡಳಿ ವಾರಂಬಳ್ಳಿ ವಸತಿ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಅದಕ್ಕಾಗಿ ಖಾಸಗಿಯಿಂದ 6 ಎಕ್ರೆ ಭೂಮಿಯನ್ನು 1.80 ಕೋಟಿ ರು. ನೀಡಿ ಖರೀದಿಸಿತ್ತು. ಈ ಯೋಜನೆಯಡಿ 88 ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು.ಉಪಲೋಕಾಯುಕ್ತರಿಗೆ ದೂರು ನೀಡಿದ ಮಹಿಳೆ ತಾನು ಗೃಹಮಂಡಳಿಗೆ 75,000 ರು. ಕಟ್ಟಿದ್ದೇನೆ. ಆದರೆ ನಿವೇಶನವನ್ನೂ ನೀಡುತ್ತಿಲ್ಲ, ಹಣವನ್ನೂ ಹಿಂದಕ್ಕೆ ನೀಡುತ್ತಿಲ್ಲ, ನ್ಯಾಯ ಒದಗಿಸಿ ಎಂದು ಕೋರಿದರು.
ಉಪಲೋಕಾಯುಕ್ತರು ಗೃಹಮಂಡಳಿಯ ಅಧಿಕಾರಿಗೆ, ಈ ಹಣವನ್ನು 7 ವರ್ಷ ಬ್ಯಾಂಕಿನಲ್ಲಿಟ್ಟಿದ್ದರೆ ಬಡ್ಡಿ ಸೇರಿ ಎಷ್ಟು ಆಗುತಿತ್ತು ಗೊತ್ತಾ, ಆಕೆಯ ಸ್ಥಾನದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.ಗೃಹಮಂಡಳಿಯ ಅಧಿಕಾರಿ ಉತ್ತರಿಸಿ, ಮಂಡಳಿಯಿಂದ ಮನೆ ನಿವೇಶನಗಳನ್ನು ವಿಂಗಡಿಸಿದ್ದು, ಪರವಾನಗಿಗಾಗಿ ವಾರಂಬಳ್ಳಿ ಪಂಚಾಯಿತಿಗೆ ಸಲ್ಲಿಸಲಾಗಿದೆ. ಆದರೆ ಪಂಚಾಯಿತಿ ಇಷ್ಟು ದೊಡ್ಡ ಬಡಾವಣೆಯ ತ್ಯಾಜ್ಯ ನಿರ್ವಹಣೆ ತನ್ನಿಂದ ಸಾಧ್ಯವಿಲ್ಲ ಎಂದು ಯೋಜನೆಗೆ ಪರವಾನಗಿ ನೀಡುತ್ತಿಲ್ಲ. ಅದಕ್ಕಾಗಿ ಮಂಡಳಿಯೇ ತ್ಯಾಜ್ಯ ಸಂಸ್ಕರಣಾ ಘಟಕವನ್ನೂ ಸ್ಥಾಪಿಸುವ ಯೋಜನೆಯನ್ನು ಸಲ್ಲಿಸಿದೆ. ಆದರೂ ಪಂಚಾಯಿತಿ ಅನುಮತಿ ನೀಡುತ್ತಿಲ್ಲ. ಆದ್ದರಿಂದ ಫಲಾನುಭವಿಗಳಿಗೆ ಮನೆ ನಿವೇಶನ ವಿತರಣೆಯಾಗಿಲ್ಲ ಎಂದರು.
ಇದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಖಾಸಗಿ ಲಾಬಿಗೆ ಮಣಿದು ಗೃಹಮಂಡಳಿಯ ಯೋಜನೆಗೆ ಅನುಮತಿ ನಿರಾಕರಿಸುತಿದ್ದೀರಾ ಎಂದು ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರು.ಇದಕ್ಕೆ ಪಂಚಾಯಿತಿ ಅಧಿಕಾರಿ ಭೂಮಿಯನ್ನು ಸರ್ಕಾರಿ ಕಚೇರಿ ಸ್ಥಾಪನೆಗೆ ಮೀಸಲಿಟಿದ್ದೇವೆ, ಆದ್ದರಿಂದ ನಿವೇಶನ ವಿತರಣೆಗೆ ಅನುಮತಿ ನೀಡಿಲ್ಲ ಎಂದು ಸಬೂಬು ಹೇಳಿದರು.
ಇದರಿಂದ ಇನ್ನಷ್ಟು ಗರಂ ಆದ ಡಿಸಿ, ಗೃಹಮಂಡಳಿ ಖರೀದಿಸಿದ ಭೂಮಿಯನ್ನು ಪಂಚಾಯಿತಿ ಹೇಗೆ ಮೀಸಲಿಡುತ್ತದೆ, ಯಾರು ಅಧಿಕಾರ ಕೊಟ್ಟದ್ದು ನಿಮಗೆ ಎಂದು ಕೇಳಿದರು.ಕೊನೆಗೆ ಉಪಲೋಕಾಯುಕ್ತರು ಗ್ರಾ.ಪಂ. ಮೇಲೆ ದೂರು ದಾಖಲಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಉಗುರಿನ ಕೆಲಸಕ್ಕೆ ಕೊಡಲಿ ಬೇಕಾ?
ಖಾಸಗಿ ವ್ಯಕ್ತಿಗಳ ನಡುವಿನ ಜಗಳಕ್ಕೆ ಸಂಬಂಧಿಸಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನೀಡಲಾದ ದೂರಿನ ಬಗ್ಗೆ 3 ತಿಂಗಳಾದರೂ ಸ್ಪಂದಿಸದ ಅಧಿಕಾರಿಗಳ ಮೇಲೆ ಉಪಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಇದು ಖಾಸಗಿ ಜಗಳ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಒಂದು ನಿಮಿಷದಲ್ಲಿ ಹಿಂಬರಹ ಬರೆದುಕೊಡುವುದನ್ನು ಬಿಟ್ಟು 3 ತಿಂಗಳಾದರೂ ಅಲೆದಾಡಿಸುತ್ತಿದ್ದರಲ್ಲ, ಉಗುರಿನಿಂದ ಆಗುವ ಕೆಲಸಕ್ಕೆ ಕೊಡಲಿ ಬೇಕಾ ಎಂದು ಗದರಿಸಿದರು.ಒಂದೇ ದಿನದಲ್ಲಿ 154 ಅಹವಾಲು ಸಲ್ಲಿಕೆ
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ 48, ಗ್ರಾಮೀಣ ಅಭಿವೃದ್ಧಿ ಇಲಾಖೆಯ 29, ಸ್ಥಳೀಯ ಸಂಸ್ಥೆಯ 9, ಮೆಸ್ಕಾಂನ 2, ಧಾರ್ಮಿಕ ದತ್ತಿ ಇಲಾಖೆಯ 4, ಗೃಹ ಮಂಡಳಿಯ 11, ಸಹಕಾರಿ ಇಲಾಖೆಯ 3, ಭೂಮಾಪನ ಇಲಾಖೆಯ 7, ಪೊಲೀಸ್ ಇಲಾಖೆಯ 8, ಆರೋಗ್ಯ ಇಲಾಖೆಯ 5, ನೋಂದಣಿ ಇಲಾಖೆಯ 2, ಅರಣ್ಯ ಇಲಾಖೆಯ 2, ಗಣಿ ಇಲಾಖೆಯ 4, ಆರ್.ಟಿ.ಒ.ದ 3, ನಗರಾಭಿವೃದ್ಧಿ ಇಲಾಖೆಯ 2, ಪಿ.ಡಬ್ಲ್ಯೂ.ಡಿ.ಯ 2, ಶಿಕ್ಷಣ ಇಲಾಖೆಯ 3, ಸಾರಿಗೆ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರದ, ಕಾರ್ಮಿಕ ಇಲಾಖೆ, ಕೆ.ಪಿ.ಟಿ.ಸಿ.ಎಲ್, ಕೆ.ಆರ್.ಡಿ.ಎಲ್, ಕೆ.ಎಸ್.ಆರ್.ಟಿ.ಸಿ., ನೀರಾವರಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ಕೆನರಾ ಬ್ಯಾಂಕ್ ಹಾಗೂ ನಿರ್ಮಿತಿ ಕೇಂದ್ರದ ವಿರುದ್ಧ ತಲಾ 1 ಅರ್ಜಿಗಳು ಸೇರಿದಂತೆ ಒಟ್ಟು 154 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 72 ಅರ್ಜಿಗಳನ್ನು ವಿಚಾರಣೆ ಮಾಡಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಯಲಿದೆ.