ಶಿರಹಟ್ಟಿ: ಪಟ್ಟಣದ ೧೮ನೇ ವಾರ್ಡ್‌ನಲ್ಲಿ ವಾಸ ಮಾಡುತ್ತಿರುವ ಜನತೆಗೆ ಎರಡು ದಶಕ ಕಳೆದರೂ ಮೂಲಭೂತ ಸೌಲಭ್ಯ ದೊರೆತಿಲ್ಲ. ಕಳೆದ ೨೦ ವರ್ಷಗಳಿಂದ ಪಪಂ ಮುಖ್ಯಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಶಿವಲಿಂಗಪ್ಪ ಬಡಾವಣೆಯ ನಿವಾಸಿಗಳು ಮಂಗಳವಾರ ಪಪಂ ಕಾರ್ಯಾಲಯದಲ್ಲಿ ಮತ್ತೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ತಾಲೂಕು ಕುಂದುಕೊರತೆ ಹೋರಾಟ ಸಮಿತಿ ಅಧ್ಯಕ್ಷ ಅಕ್ಬರ್‌ಸಾಬ ಯಾದಗಿರಿ ಮಾತನಾಡಿ, ಶಿರಹಟ್ಟಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಅನತಿ ದೂರದಲ್ಲಿರುವ ಶಿವಲಿಂಗಪ್ಪ ಬಡಾವಣೆ, ಬೇಂದ್ರೆ ಪ್ಲಾಟ್‌ಗಳಲ್ಲಿ ವಾಸಿಸುವುದೇ ಕಷ್ಟಕರವಾಗಿದೆ. ಮಳೆಗಾಲವಾದ್ದರಿಂದ ರಸ್ತೆ, ಚರಂಡಿ ವ್ಯವಸ್ಥೆಗಳಿಲ್ಲದೆ ಸಂಚರಿಸುವುದು ದುಸ್ತರವಾಗಿದೆ ಎಂದು ಆರೋಪಿಸಿದರು.ಈ ಬಡಾವಣೆಗಳಲ್ಲಿ ಬಹುತೇಕ ಕೂಲಿ ಕಾರ್ಮಿಕರು, ಕೃಷಿಕರು, ಶೋಷಿತರು, ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಈ ವಾರ್ಡ್‌ನ ಸದಸ್ಯರಾದ ಅನಿತಾ ಬಾರಬರ್ ಪಪಂ ಸಾಮಾನ್ಯ ಸಭೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡುವಂತೆ ಅಧಿಕಾರಿಗಳ ಗಮನ ಸೆಳೆದರೂ ಸ್ಪಂದಿಸಿಲ್ಲ ಎಂದು ದೂರಿದರು.
ಸುಮಾರು ೫೦೦ಕ್ಕೂ ಹೆಚ್ಚು ಮನೆಗಳಿರುವ ಈ ಬಡಾವಣೆಯಲ್ಲಿ ಪ್ರತಿಯೊಬ್ಬರೂ ಪಪಂಗೆ ನಿಗದಿಪಡಿಸಿರುವ ತೆರಿಗೆ ಹಣ ಕಟ್ಟುತ್ತಾ ಬಂದಿದ್ದಾರೆ. ಆದರೆ ಇವತ್ತಿನವರೆಗೂ ಯಾವುದೇ ಸೌಲಭ್ಯ ಕಲ್ಪಿಸದೇ ಇರುವುದು ನಾಚಿಕೆಯ ಸಂಗತಿಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.ಬಡಾವಣೆಯಲ್ಲಿ ಚರಂಡಿ, ರಸ್ತೆ ವ್ಯವಸ್ಥೆಗಳಿಲ್ಲದೆ ಎಲ್ಲೆಂದರಲ್ಲಿ ಕೊಳಚೆ ನೀರು ಹರಿದು ಶೇಖರಣೆಯಾಗುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿ ಜನ ಕಾಯಿಲೆಗಳಿಂದ ನರಳುವಂತಾಗಿದೆ. ಸದ್ಯ ಡೆಂಘೀ ಜ್ವರದ ತೀವ್ರತೆ ಹೆಚ್ಚಾಗಿದ್ದು, ಅಧಿಕಾರಿಗಳು ಜನರ ಜೀವದ ಜೊತೆ ಚೆಲ್ಲಾಟವಾಡದೇ ಲಭ್ಯವಿರುವ ಅನುದಾನ ಬಳಸಿಕೊಂಡು ತುರ್ತು ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಡಾವಣೆಯ ಪಕ್ಕದಲ್ಲಿಯೇ ಸರ್ಕಾರಿ ಶಾಲೆಯಿದೆ. ಅಲ್ಲದೇ ನವೋದಯ ತರಬೇತಿ ಕೇಂದ್ರ ಕೂಡ ಇರುವುದರಿಂದ ನಿತ್ಯ ಮಕ್ಕಳು ಶಾಲೆಗೆ ಹೋಗದಷ್ಟು ರಸ್ತೆ ಹದಗೆಟ್ಟಿದೆ. ಬೀದಿ ದೀಪಗಳಿಲ್ಲದೇ ಇರುವುದರಿಂದ ಸಂಜೆ ವೇಳೆ ಮಕ್ಕಳು, ವೃದ್ದರು ಸಂಚರಿಸುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ತುರ್ತು ಮೂಲಭೂತ ಸೌಲಭ್ಯ ಕಲ್ಪಿಸಲು ಪಪಂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿದ್ದರೆ ಪಂಚಾಯತಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಜಿಲ್ಲಾಧಿಕಾರಿ ಸೂಚನೆ: ೨೦೧೮ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಮನೋಜ ಜೈನ್ ತಹಸೀಲ್ದಾರ ಕಾರ್ಯಾಲಯದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಬಡಾವಣೆಯ ನಿವಾಸಿಗಳು ರಸ್ತೆ, ಚರಂಡಿ ಸೇರಿದಂತೆ ಇತರೇ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ಲಿಖಿತ ಮನವಿ ಕೂಡ ಸಲ್ಲಿಸಿದ್ದರು. ಅಂದು ಸಭೆಯಲ್ಲಿ ಹಾಜರಿದ್ದ ಪಪಂ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದರು.ಆದರೆ ಜಿಲ್ಲಾಧಿಕಾರಿಗಳ ಆದೇಶಕ್ಕೂ ಕವಡೆಕಾಸಿನ ಬೆಲೆ ಇಲ್ಲದಂತಾಗಿದೆ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಇಲಾಖೆಯ ಅಭಿಯಂತರ ವಿ.ಪಿ. ಕಾಟೆವಾಲೆ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಶ್ರೀನಿವಾಸ ಬಾರಬರ್, ಬಸವರಾಜ ಗಾಮನಗಟ್ಟಿ, ರಫೀಕ ಢಾಲಾಯತ, ವೆಂಕಟೇಶ ಬೇಂದ್ರೆ, ಫಕ್ಕೀರೇಶ ಕಪ್ಪತ್ತನವರ, ಮುತ್ತ ಭಾವಿಮನಿ, ಶ್ರೀನಿವಾಸ ಕಪಟಕರ, ಫಕ್ಕೀರೇಶ ಗಾಮನಗಟ್ಟಿ, ಹೊನ್ನಪ್ಪ ಗೂಳಪ್ಪನವರ, ಕೃಷ್ಣಾ ಲೋಂಡೆ ಸೇರಿ ಅನೇಕರು ಮನವಿ ನೀಡುವಲ್ಲಿ ಇದ್ದರು.