ಸಮೂಹ ಮಾಧ್ಯಮಗಳ ನಡುವೆಯೂ ದಿನಪತ್ರಿಕೆ ಮಹತ್ವ ಉಳಿಸಿಕೊಂಡಿವೆ

KannadaprabhaNewsNetwork |  
Published : Sep 05, 2024, 12:36 AM IST
ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.  | Kannada Prabha

ಸಾರಾಂಶ

ಅಸಂಘಟಿತ ವಲಯದಲ್ಲಿ ಬರುವ ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ನೀಡುವ ಉದ್ದೇಶದೊಂದಿಗೆ ಆಕಸ್ಮಿಕವಾಗಿ ಮರಣ ಹೊಂದಿದರೆ ಸರ್ಕಾರದಿಂದ ₹2 ಲಕ್ಷ

ಗದಗ: ಪ್ರಚಲಿತ ದಿನಮಾನಗಳಲ್ಲಿ ನ್ಯೂಸ್ ಚಾನೆಲ್, ಯುಟ್ಯೂಬ್ ಸೇರಿದಂತೆ ಸಮೂಹ ಮಾಧ್ಯಮಗಳ ಅಬ್ಬರದ ನಡುವೆಯೂ ಪತ್ರಿಕೆಗಳು ತಮ್ಮ ಮಹತ್ವ ಉಳಿಸಿಕೊಂಡಿವೆ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಹೇಳಿದರು.

ಅವರು ಬುಧವಾರ ಬೆಟಗೇರಿಯ ಟೆಂಗಿನಕಾಯಿ ಬಜಾರ್ ಸಮೀಪದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯ 13ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಸಿನಿಮಾ, ಕ್ರೀಡೆ, ವಾಣಿಜ್ಯ ಸೇರಿದಂತೆ ಹತ್ತು ಹಲವಾರು ಸಂಗತಿಗಳನ್ನು ಇಡೀ ಪತ್ರಿಕೆ ಒಳಗೊಂಡಿರುತ್ತವೆ. ಪ್ರತಿಯೊಬ್ಬರೂ ಕನ್ನಡ ಹಾಗೂ ಇಂಗ್ಲೀಷ್ ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಹಿರಿಯರು ಬೆಳಗ್ಗೆ ಪತ್ರಿಕೆ ಓದದಿದ್ದರೆ ಚಹಾ, ಕಾಫಿ ಕುಡಿಯುತ್ತಿರಲಿಲ್ಲ. ಆದರೆ ಇಂದಿನ ಯುವ ಸಮೂಹ ಪತ್ರಿಕೆಗಳನ್ನು ಓದುವುದನ್ನು ಬಿಟ್ಟು ಮೊಬೈಲ್,ಟಿವಿಯಂತಹ ಸಮೂಹ ಮಾಧ್ಯಮಗಳ ಹಿಂದೆ ಬಿದ್ದು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಕೂಡಾ ಪತ್ರಿಕೆಗಳನ್ನು ಹಾಕುತ್ತಿದ್ದರು ಎನ್ನುವುದನ್ನು ಸ್ಮರಿಸಿಕೊಂಡರು.

ಅಸಂಘಟಿತ ವಲಯದಲ್ಲಿ ಬರುವ ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ನೀಡುವ ಉದ್ದೇಶದೊಂದಿಗೆ ಆಕಸ್ಮಿಕವಾಗಿ ಮರಣ ಹೊಂದಿದರೆ ಸರ್ಕಾರದಿಂದ ₹2 ಲಕ್ಷ, ಶಾಶ್ವತ ಅಂಗವಿಕಲರಾದರೆ, ಮಾರಣಾಂತಿಕ ಕಾಯಿಲೆ ತುತ್ತಾಗಿದ್ದರೆ ಪರಿಹಾರದ ನೆರವು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 97 ವಿತರಕರು ಈಗಾಗಲೇ ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದು, ಉಳಿದ ಅರ್ಹ ಪತ್ರಿಕಾ ವಿತರಕರು ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದರು.

ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜೆ ಮಾತನಾಡಿ, ಪತ್ರಿಕಾ ವಿತರಕರು ಇ-ಶ್ರಮ ನೋಂದಣಿಗೆ ಕೆಲ ಅಡತಡೆಗಳಿದ್ದು, ಆಯಾ ಪತ್ರಿಕೆಗಳ ಸಂಪಾದಕರು ನೀಡುವ ಶಿಫಾರಸ್ಸು ಪತ್ರದ ಅನ್ವಯ ನೋಂದಣಿಯಾಗಬೇಕಿದೆ. ಅಲ್ಲದೇ, ದೇಶದಲ್ಲಿ ಅಸಂಖ್ಯಾತ ಪತ್ರಿಕೆಗಳಿದ್ದು, ಲಕ್ಷಾಂತರ ಪತ್ರಿಕೆ ವಿತರಕರಿದ್ದಾರೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ವೀರಬಸಯ್ಯ ವಿರಕ್ತಮಠ, ಸಂಘದ ರಾಜ್ಯಾಧ್ಯಕ್ಷ ಶಂಕರ ಕುದರಿಮೋತಿ, ಕಕಾನಿಪ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಉದ್ಯಮಿ ಕಿಶನ್ ಮೇರವಾಡೆ ಮುಂತಾದವರು ಮಾತನಾಡಿದರು. ಮುಕ್ಕಣ್ಣೇಶ್ವರ ಮಠದ ಶಂಕರಾನಾಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಮೇಶ ಭಜಂತ್ರಿ, ಸಂಘದ ಉಪಾಧ್ಯಕ್ಷ ಈರಣ್ಣ ಮಳೇಕರ, ದತ್ತಾತ್ರೇಯ ಮುಂಡರಗಿ, ವಿನಾಯಕ ಬದಿ, ಗಣೇಶ ಶಿರಹಟ್ಟಿ, ಗುರುರಾಜ ಕಲಾಲ, ಹಿರಿಯ ಸಲಹೆಗಾರ ಕೆ.ಎಸ್. ಹಿರೇಮಠ, ಪ್ರಮೋಶ ಜೋಶಿ, ಗಂಗಾಧರ ಮಡ್ಡಿ, ಸಿದ್ಧಲಿಂಗೇಶ ಮಡಿವಾಳರ ಇದ್ದರು. ಮಂಜುನಾಥ ಕುಬನೂರ ಸ್ವಾಗತಿಸಿದರು. ಶಂಕರಗುರು ಕಂದಗಲ್ ನಿರೂಪಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ