ಒಳಮೀಸಲಾತಿ ಜಾಗೃತಿ ಸಮಿಯ ಜಾಗೃತಿ ಸಭೆ । ಸಮರ್ಪಕ ಮಾಹಿತಿ ನೀಡಿ
ಒಳಮೀಸಲಾತಿ ವರ್ಗಿಕರಣ ಸಂಬಂಧ ಏಕ ಸದಸ್ಯ ನ್ಯಾಯಮೂರ್ತಿಗಳ ಸಮಿತಿಯು ಇನ್ನು ಮೂರು ತಿಂಗಳಲ್ಲಿ ಸಮೀಕ್ಷೆ ನಡೆಸಿ, ವರದಿ ನೀಡಲಿದೆ. ಬಲಗೈ ಸಮುದಾಯದವರು ನಿಖರವಾದ ಮಾಹಿತಿಯನ್ನು ದಾಖಲು ಮಾಡಿ, ಒಳಮೀಸಲಾತಿ ಪಡೆಯುವ ಜಾತಿಗಳನ್ನು ಹೆಚ್ಚು ಗುರುತಿಸುವಂತೆ ಸಂಘಟನೆಗಳು, ಪ್ರಗತಿಕರ ಚಿಂತಕರು, ದಲಿತ ಹೋರಾಟಗಾರರು ಕಾರ್ಯಪ್ರವೃತ್ತರಾಗಬೇಕು ಎಂದು ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ಆರ್.ರಾಜು ತಿಳಿಸಿದರು.
ನಗರದ ಶ್ರೀ ರಾಮಚಂದ್ರ ಕಾಲೇಜು ಅವರಣದಲ್ಲಿ ಒಳಮೀಸಲಾತಿ ಜಾಗೃತಿ ಸಮಿತಿ ವತಿಯಿಂದ ನಡೆದ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಳಮೀಸಲಾತಿ ನೀಡುವ ಬಗ್ಗೆ ಚಿಂತನೆ ಮಾಡಿದೆ. ಈ ಹಿಂದೆ ನೀಡಿದ್ದ ಆಯೋಗಗಳ ವರದಿಗಳು ಅವೈಜ್ಞಾನಿಕವಾಗಿದ್ದು, ಈ ಹಿಂದೆ ನೀಡಿದ್ದ ಎಲ್ಲಾ ವರದಿಗಳು ಸಹ ಸತ್ತು ಹೋಗಿವೆ. ಈ ವರದಿಗಳ ಬಗ್ಗೆ ನಾವು ಚರ್ಚೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಬಲಗೈ ಸಮುದಾಯ ಒಳಮೀಸಲಾತಿ ವಿರೋಧಿ ಎಂಬ ಮಾತುಗಳು ಬರುತ್ತಿವೆ. ನಮ್ಮ ಸಹೋದರರಗಿರುವ ಮಾದಿಗ ಸಮುದಾಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. 101 ಜಾತಿಗಳಲ್ಲಿ ನಮ್ಮ ಸಮುದಾಯದ ಹಿರಿಯ ಅಣ್ಣನಂತೆ ಇದ್ದೇವೆ. ನಮ್ಮಲ್ಲಿಯೇ ಹೊಡೆದಾಟ ಬೇಡ. ಎಲ್ಲಾ ಸಮುದಾಯವನ್ನು ಒಟ್ಟಿಗೆಗೆ ತೆಗೆದುಕೊಂಡು ಹೋಗುವ ಜಾಣ್ಮೆ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ನಮ್ಮ ನಡೆ ಜಾಗೃತವಾಗಿರಬೇಕು ಎಂದರು.
ಒಳಮೀಸಲಾತಿ ವಿರೋಧಿಗಳಲ್ಲ:
ಇತ್ತೀಚೆಗೆ ವಿಚಾರ ಸಂಕಿರಣದಲ್ಲಿ ನಮ್ಮ ವಿರುದ್ದ ಪ್ರೊ.ಗೋವಿಂದಯ್ಯ ಮಾತನಾಡಿ ಸಚಿವರಾದ ಎಚ್.ಸಿ.ಮಹದೇವಪ್ಪ, ಡಾ.ಪರಮೇಶ್ವರ್, ದೇವನೂರು ಮಹದೇವ್, ದಾಸಯ್ಯ ಅವರನ್ನು ಟೀಕೆ ಮಾಡಿದ್ದಾರೆ. ಇದು ವಾಸ್ತವಕ್ಕೆ ದೂರವಾಗಿದೆ. ನಮ್ಮ ಎರಡು ಸಮುದಾಯಗಳು ಒಗ್ಗಟ್ಟಾಗಿದ್ದರೆ ರಾಜಕೀಯವಾಗಿ ಹೆಚ್ಚಿನ ಶಕ್ತಿ ಬರುತ್ತದೆ ಎಂಬ ಏಕೈಕ ಕಾರಣದಿಂದ ಪಿತೂರಿ ಮಾಡಿ ಒಳಮೀಸಲಾತಿಯನ್ನು ಮುನ್ನಲೆಗೆ ತಂದಿದ್ದಾರೆ. ಇದನ್ನು ಸರಿಯಾದ ರೀತಿಯಲ್ಲಿ ನಾವು ಬಳಕೆ ಮಾಡಿಕೊಳ್ಳದಿದ್ದರೆ ನಮ್ಮ ಸಮುದಾಯದ ಮುಂದಿನ ಪೀಳಿಗೆಗೆ ತೊಂದರೆಯಾಗುತ್ತದೆ ಎಂದರು.
ದಲಿತ ಮುಖಂಡರಾದ ಹೊನ್ನೂರು ಕೃಷ್ಣಮೂರ್ತಿ, ಆಶೋಕಪುರಂ ಭಾಸ್ಕರ್, ಶೇಖರ್ ಬುದ್ದ, ಸಿ.ಎಂ.ಕೃಷ್ಣಮೂರ್ತಿ, ವಾಸು, ಡಾ.ಶಿವಕುಮಾರ್, ಸುಭಾಷ್ ಮಾಡ್ರಹಳ್ಳಿ, ಕೆ.ಎಂ.ನಾಗರಾಜು, ಅನೇಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ದಲಿತ ಮುಖಂಡರಾದ ಚನ್ನಕೇಶವ, ಚಿಕ್ಕಜವರಯ್ಯ, ಇತರರು ಇದ್ದರು.