ಚೆಕ್‌ಪೋಸ್ಟ್ ಇದ್ದರೂ ಗಡಿ ದಾಟಿ ಬಂದ ಕೇರಳದ ಕಸದ ಗಾಡಿಗಳು । ತನಿಖೆ ನಡೆಸಿ ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪೊಲೀಸ್, ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಸಿಬ್ಬಂದಿ ಇದ್ದರೂ ಅವರ ಕಣ್ತಪ್ಪಿಸಿ ಬಂದ ಕೇರಳದ ಮೂರು ತ್ಯಾಜ್ಯ ತುಂಬಿದ ಮೂರು ವಾಹನಗಳನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರಸಂಗ ತಾಲೂಕಿನ ಮಾಡ್ರಹಳ್ಳಿ ಬಳಿ ಭಾನುವಾರ ಸಂಜೆ ನಡೆದಿದೆ.
ಕೇರಳ ಗಡಿಯಲ್ಲಿ ಅರಣ್ಯ ಹಾಗೂ ಪೊಲೀಸ್ ಚೆಕ್‌ಪೋಸ್ಟ್‌ಗಳಿವೆ. ಬೆಳಗ್ಗೆ 6 ರಿಂದ ರಾತ್ರಿ 10ರ ತನಕ ಕರ್ತವ್ಯ ನಿರ್ವಹಿಸುತ್ತಿವೆ. ಅರಣ್ಯ ಹಾಗೂ ಪೊಲೀಸ್ ಚೆಕ್‌ಪೋಸ್ಟ್ ಸಿಬ್ಬಂದಿಯ ಕರ್ತವ್ಯ ಲೋಪದ ಫಲವಾಗಿ ತ್ಯಾಜ್ಯ ತುಂಬಿದ ವಾಹನಗಳು ಗುಂಡ್ಲುಪೇಟೆ ಒಳಗೆ ನುಸುಳಿವೆ.ಖಚಿತ ಮಾಹಿತಿ ಮೇರೆಗೆ ಮಾಡಹಳ್ಳಿ ಗ್ರಾಮದ ಬಳಿ ಬಿಜೆಪಿ ಮುಖಂಡ ನಾಗೇಂದ್ರ, ಜಯ ಕರ್ನಾಟಕ ಸಂಘಟನೆ ಮಹೇಶ್, ಕರವೇ ಸುರೇಶ್ ನಾಯಕ, ದಲಿತ ಸಂಘಟನೆ ಮುಖಂಡ ಮುತ್ತಣ್ಣ, ಗ್ರಾಮಸ್ಥರಾದ ಮಹೇಶ್, ಶೇಖರಪ್ಪ ಹಾಗೂ ಇತರರು ಕೇರಳದ 2 ಮತ್ತು ತಮಿಳುನಾಡಿನ 1 ವಾಹನ ತಡೆದು ತಪಾಸಣೆ ನಡೆಸಿದಾಗ ತ್ಯಾಜ್ಯ ವಾಹನಗಳಲ್ಲಿ ಇದ್ದದ್ದು ಪತ್ತೆಯಾಗಿದೆ.
ಆಕ್ರೋಶ:ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಚೆಕ್‌ಪೋಸ್ಟ್‌ಗಳಿದ್ದರೂ ತ್ಯಾಜ್ಯ ತುಂಬಿದ ವಾಹನಗಳು ಬಂದಿವೆ ಎಂದರೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಶಾಮೀಲಾಗಿದೆ ಎಂದರ್ಥವಲ್ಲವೇ ಎಂದು ಮುತ್ತಣ್ಣ ಆಕ್ರೋಶ ಹೊರಹಾಕಿದ್ದಾರೆ.
ಎಸ್ಪಿ, ಡಿಸಿಎಫ್ ತನಿಖೆ ನಡೆಸಲಿ:ಅರಣ್ಯ ಹಾಗೂ ಪೊಲೀಸ್ ಚೆಕ್‌ಪೋಸ್ಟ್‌ಗಳಿವೆ. ಆದರೂ ಕೇರಳ ರಾಜ್ಯದಿಂದ ತ್ಯಾಜ್ಯ ತುಂಬಿದ ವಾಹನ ಬರಲು ಅರಣ್ಯ ಹಾಗೂ ಪೊಲೀಸ್ ಕರ್ತವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ. ಆದ್ದರಿಂದ ಎಸ್ಪಿ ಹಾಗೂ ಡಿಸಿಎಫ್ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿದ್ದಾರೆ.