ಗಂಗಾವತಿ: ನಗರದ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ನಗರೋತ್ಥಾನ ಯೋಜನೆಯ ರಸ್ತೆ ಕಾಮಗಾರಿ ಕಳಪೆ ಹಾಗೂ ವಿಳಂಬವಾಗುತ್ತಿರುವುದಕ್ಕೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದು, ಗುತ್ತಿಗೆದಾರರಿಗೆ ನೋಟಿಸ್‌ ಜಾರಿ ಮಾಡುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಕನ್ನಡಪ್ರಭ ಪತ್ರಿಕೆ(ಮಾ.6ರಂದು ಆಮೆಗತಿಯಲ್ಲಿ ಸಾಗಿದ ನಗರೋತ್ಥಾನ ಕಾಮಗಾರಿ) ಶಿರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತು. ಇದಕ್ಕೆ ಜಿಲ್ಲಾಧಿಕಾರಿ ಸ್ಪಂದಿಸಿ ನಗರದ 3 ನೇ ವಾರ್ಡ್‌, ಜಯನಗರ,ಅಂಜನೇಯಸ್ವಾಮಿ ದೇಗುಲದ ಹಿಂಭಾಗ ಮತ್ತು ಚಂದ್ರಹಾಸ ಟಾಕೀಸ್‌ ರಸ್ತೆ ಸೇರಿದಂತೆ ವಿವಿಧ ರಸ್ತೆ ಕಾಮಗಾರಿ ಪರಿಶೀಲಿಸಿ ಗುಣಮಟ್ಟ ಹಾಗೂ ಚರಂಡಿ ನಿರ್ಮಾಣ ಮಾಡದೇ ಇರುವುದರ ಬಗ್ಗೆ ಬಾಲಾಜಿ ಕೃಪಾ ಕನಸ್ಟ್ರಕ್ಷನ್ ನ ಗುತ್ತಿಗೆದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಉಪ ಗುತ್ತಿಗೆದಾರ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನಿಗಾ ವಹಿಸುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.

21.38 ಕೋಟಿ ಅನುದಾನದ ನಗರೋತ್ಥಾನ ಯೋಜನೆಯಲ್ಲಿ ನಗರದ 35 ವಾರ್ಡ್‌ಗಳಲ್ಲಿ 65 ಕಾಮಗಾರಿ ಕೈಗೆತ್ತಿಕೊಂಡಿದ್ದು ಬಹುತೇಕ ರಸ್ತೆಗಳ ನಿರ್ಮಾಣ ವಿಳಂಭವಾಗಿದೆ. ರಸ್ತೆ ದುರಸ್ಥಿ,ಚರಂಡಿ ಕಾಮಗಾರಿ,ಸಿಸಿ ರಸ್ತೆ, ಬಿಟಿ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಯುಜಿಡಿ ಕಾಮಗಾರಿ ವಿಳಂಭವಾಗಿದ್ದರಿಂದ ಸಂಬಂಧ ಪಟ್ಟವರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು.

ಈ ವೇಳೆ ಪೌರಾಯುಕ್ತ ವಿರೂಪಾಕ್ಷಮೂರ್ತಿ,ಎಇಇ ಶರಣಪ್ಪ,ನಗರಸಭೆಯ ಎಇ ಅಸ್ಮಾ,ನೈರ್ಮಲ್ಯ ನೀರಿಕ್ಷಕ ನಾಗರಾಜ್ ಇದ್ದರು.