ಶಿವಾನಂದ ಗೊಂಬಿ ಹುಬ್ಬಳ್ಳಿ
ಕಳೆದ ವಿಧಾನಸಭೆ ಸೋಲಿನ ಬಳಿಕ ಒಂದು ರೀತಿಯಲ್ಲಿ ರಾಜಕೀಯ ನೇಪತ್ಯಕ್ಕೆ ಸರಿದಿರುವ ಮಾಜಿ ಸಚಿವ, ನವಲಗುಂದ ಕ್ಷೇತ್ರದ ಹಿಂದಿನ ಬಿಜೆಪಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಜನವರಿ ತಿಂಗಳು ಬಂದರೂ ಇನ್ನೂ ಜನರ ಮಧ್ಯ ಬಾರದಿರುವುದು ಹಲವು ಅನುಮಾನಗಳನ್ನು ಹುಟ್ಟಿಸಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜತೆ ಮುನೇನಕೊಪ್ಪ ಕಾಂಗ್ರೆಸ್ಸಿಗೆ ಹೋಗುತ್ತಾರೆ ಎನ್ನುವ ಅಬ್ಬರದ ಸುದ್ದಿಯೊಂದು ಹಬ್ಬಿದಾಗ ಮಾಧ್ಯಮಗಳ ಎದುರು ಬಂದು ಜನವರಿ ವೇಳೆಗೆ ನನ್ನ ರಾಜಕೀಯ ನಿರ್ಧಾರ ತಿಳಿಸುತ್ತೇನೆ ಎಂದಿದ್ದರು. ಹಾಗಾಗಿ ಜನವರಿ ಬಂದರೂ ಮುನೇನಕೊಪ್ಪ ತುಟಿ ಬಿಚ್ಚದಿರುವುದು ಈ ಶಂಕೆಗಳಿಗೆ ಕಾರಣ.
ಇದು ಜಿಲ್ಲೆಯಷ್ಟೇ ಅಲ್ಲ ರಾಜ್ಯದಲ್ಲಿನ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಲ್ಲಿ ಉದ್ಭವವಾಗಿರುವ ಪ್ರಶ್ನೆ. ಮುನೇನಕೊಪ್ಪ ಸೆಪ್ಟೆಂಬರ್‌ನಿಂದಲೇ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ. ಸಾಕಷ್ಟು ಸಲ ಆಹ್ವಾನ ನೀಡಿದರೂ, ಅವರದೇ ಕ್ಷೇತ್ರದಲ್ಲೇ ಕಾರ್ಯಕ್ರಮಗಳು ನಡೆದರೂ ಎಲ್ಲೂ ಕಾಣಿಸಿಕೊಂಡಿಲ್ಲ.
ಶೆಟ್ಟರ್ ಜತೆ ಕಾಂಗ್ರೆಸ್ಸಿಗೆ?:
ವಿಧಾನಸಭೆ ಚುನಾವಣೆ ವೇಳೆ ಪಕ್ಷದ ಹಿರಿಯರೆನಿಸಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ತೊರೆದಿದ್ದರು. ಆಗಲೇ ಮುನೇನಕೊಪ್ಪ ಕೂಡ ಹೋಗುತ್ತಾರೆ ಎಂಬ ಗುಲ್ಲು ಹಬ್ಬಿತು.
ಬಳಿಕ ಚುನಾವಣೆಯಲ್ಲಿ ಮುನೇನಕೊಪ್ಪ ಪರಾಭವಗೊಂಡರು. ಕೆಲಸ ಮಾಡಿಯೂ ಸೋತಿದ್ದರು. ಇದು ಅವರಲ್ಲಿ ಬೇಸರವನ್ನುಂಟು ಮಾಡಿತು. ಜತೆಗೆ ಪಕ್ಷದಲ್ಲಿನ ವಾತಾವರಣವೂ ಅಷ್ಟೊಂದು ಸರಿಯಿರಲಿಲ್ಲ. ಬಿಜೆಪಿ ಮುಖಂಡರ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳಿದ್ದರು.
ಅಸಮಾಧಾನ ಹೊರಹಾಕಿದ್ದೇ ತಡ ಮುನೇನಕೊಪ್ಪ ಕೂಡ ಕಾಂಗ್ರೆಸ್‌ಗೆ ಹೋಗಿಬಿಡುತ್ತಾರೆ. ಈ ಸಲ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಧಾರವಾಡ ಕ್ಷೇತ್ರಕ್ಕೆ ಸ್ಪರ್ಧಿಸುತ್ತಾರೆ ಎಂಬ ಗುಲ್ಲು ವಿಪರೀತ ಎನ್ನುವಷ್ಟು ಹಬ್ಬಿತು.
ಆಗ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಹಿರಿಯರೆಲ್ಲರೂ ಕರೆದು ಮುನೇನಕೊಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದುಂಟು. ಆಗೆಲ್ಲ ತಾವು ಕುಟುಂಬದ ಸಮಸ್ಯೆಯಿಂದಾಗಿ ಜನವರಿವರೆಗೂ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲ್ಲ. ತದ ನಂತರ ಹೇಳುತ್ತೇನೆ ಎಂದು ಮುನೇನಕೊಪ್ಪ ಹೇಳಿದ್ದರು.
ಮುಂದಿನ ನಡೆಯೇನು?
ಇದೀಗ ಜನವರಿ ಎರಡನೆಯ ವಾರ. ಮುನೇನಕೊಪ್ಪ ನಡೆಯೇನು? ಬಿಜೆಪಿಯಲ್ಲೇ ಉಳಿಯುತ್ತಾರೋ? ಅಥವಾ ಕಾಂಗ್ರೆಸ್ ಸೇರುತ್ತಾರೋ? ಕಾಂಗ್ರೆಸ್ ಸೇರಿ ಲೋಕಸಭೆಗೆ ಟಿಕೆಟ್ ಪಡೆದು ಜೋಶಿ ವಿರುದ್ಧ ಸ್ಪರ್ಧಿಸುತ್ತಾರೆಯೇ? ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ.
10ಕ್ಕೂ ಹೆಚ್ಚು ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದುಂಟು. ಆದರೂ ಪ್ರಬಲ ಲಿಂಗಾಯತ ಸಮುದಾಯದ ಮುನೇನಕೊಪ್ಪ ಪಕ್ಷಕ್ಕೆ ಬಂದರೆ ಕಾಂಗ್ರೆಸ್‌ಗೆ ದೊಡ್ಡ ಶಕ್ತಿಯೇ ಬಂದಂತಾಗುತ್ತದೆ. ಇದು ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗುತ್ತದೆ.
ಹೀಗಾಗಿ ಒಂದು ವೇಳೆ ಮುನೇನಕೊಪ್ಪ ಬಂದರೆ ಅದಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಮಧ್ಯಸ್ಥಿಕೆ ವಹಿಸುತ್ತಾರೆ. ಈ ಬಗ್ಗೆ ಈ ಹಿಂದೆಯೇ ಒಂದೆರಡು ಬಾರಿ ಚರ್ಚೆ ಕೂಡ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಹೀಗಾಗಿ ಶಂಕರ ಪಾಟೀಲ ಮುನೇನಕೊಪ್ಪ ಮುಂದಿನ ನಡೆಯೇನು? ಎಂಬುದೀಗ ಜಿಲ್ಲೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವುದಂತೂ ಸತ್ಯ. ಸಂಕ್ರಮಣ ಮುಗಿದ ಬಳಿಕ ರಾಜಕೀಯದಲ್ಲಿ ಸಂಚಲನವನ್ನುಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಕೆಲವೊಂದು ಕೌಟುಂಬಿಕ ಸಮಸ್ಯೆಯಿಂದಾಗಿ ಜನವರಿವರೆಗೂ ನಾನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದೆ. ಅದರಂತೆ ಪಕ್ಷದ ಚಟುವಟಿಕೆಯಲ್ಲೂ ಭಾಗವಹಿಸಿಲ್ಲ. ಈ ತಿಂಗಳಾಂತ್ಯಕ್ಕೆ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.