ರಾಷ್ಟ್ರೀಯ ಸೇವಾ ಯೋಜನೆಯ ಕವಿವಿ ಮಟ್ಟದ ನಾಯಕತ್ವ ಶಿಬಿರ ಉದ್ಘಾಟನೆ
ನಾಯಕರು ಅಳಿದರು ನಾಯಕತ್ವ ಉಳಿಯುತ್ತದೆ. ಮಹಾನ್ ನಾಯಕರಾದ ಮಹಾತ್ಮಾ ಗಾಂಧೀಜಿ, ನೇತಾಜಿ ಸುಭಾಷಚಂದ್ರ ಬೋಸ್ ಮುಂತಾದವರು ರಾಷ್ಟ್ರಕ್ಕೆ ಸಲ್ಲಿಸಿದ ಅಪೂರ್ವ ಸೇವೆಯಿಂದ ಅಮರವಾಗಿದ್ದಾರೆ ಎಂದು ಕವಿವಿ ಸಿಂಡಿಕೇಟ್ ಸದಸ್ಯ ಡಾ. ಶಿವಾನಂದ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ಜಿ.ಸಿ. ಕಾಲೇಜಿನಲ್ಲಿ ಎನ್.ಎಸ್.ಎಸ್. ನಾಯಕತ್ವ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಕವಿವಿ ಎನ್.ಎಸ್.ಎಸ್. ಕೋಶದ ಮುಖ್ಯಾಧಿಕಾರಿ ಡಾ. ಎಂ.ಬಿ. ದಳಪತಿ ಮಾತನಾಡಿ, ಮಹಾತ್ಮರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸ್ಥಾಪನೆಯಾಗಿದ್ದು ದೇಶದ ವಿವಿಧ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಏಳು ಕೋಟಿ ವಿದ್ಯಾರ್ಥಿಗಳು ಇದರ ಸದಸ್ಯರಾಗಿದ್ದಾರೆ. ಯುವಕರಲ್ಲಿ ಸಮಾಜ ಸೇವೆಯ ಅರಿವನ್ನು ಮೂಡಿಸುವಲ್ಲಿ ಎನ್.ಎಸ್.ಎಸ್. ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯೆ ಶಾಂತಲಾ ನಾಡಕರ್ಣಿ, ರಫೀಕ ಶೇಖ ಮುಂತಾದವರು ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ವಿ. ವಸ್ತ್ರದ ಮಾತನಾಡಿ, ಒಂದು ವಾರ ನಡೆಯಲಿರುವ ಶಿಬಿರದಲ್ಲಿ ಸ್ವಯಂ ಸೇವಕರು ವಿವಿಧ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸುವರು. ಶಿಬಿರ ಆಯೋಜಿಸಲು ವಿಶ್ವವಿದ್ಯಾಲಯ ನೀಡಿರುವ ಅವಕಾಶವನ್ನು ಬಳಸಿಕೊಂಡು ಸ್ಥಳೀಯರಲ್ಲಿ ಪರಿಸರ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತದೆ ಎಂದರು.ಶಿಬಿರದ ಸಂಯೋಜಕ ಡಾ. ನಂಜುಂಡಯ್ಯ ಸ್ವಾಗತಿಸಿದರು. ಭಾವನಾ ನಾಯಕ ನಿರೂಪಿಸಿದರು. ವಿವಿಧ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿಗಳಾದ ರೇಖಾ ಯಲಿಗಾರ, ರಾಘವೇಂದ್ರ ಅಂಕೋಲೆಕರ, ನವೀನ ದೇವರಬಾವಿ, ಗಣಪತಿ ಕಾಯ್ಕಣಿ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.ಇದೇ ಸಂದರ್ಭ ಕಾಲೇಜಿನ ವತಿಯಿಂದ ಕವಿವಿ ಎನ್.ಎಸ್.ಎಸ್. ಮುಖ್ಯಸ್ಥ ಡಾ. ಎಂ. ಬಿ. ದಳಪತಿ, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಶಾಂತಲಾ ನಾಡಕರ್ಣಿ, ರಫೀಕ ಶೇಖ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಸುಲಕ್ಷಾ ನಾಯ್ಕ ವಂದಿಸಿದರು.