ತಡೆಯಾಜ್ಞೆ ಇದ್ದರೂ ಮರಕ್ಕೆ ಕೊಡಲಿ: ಕೋರ್ಟ್‌ ಗರಂ

KannadaprabhaNewsNetwork |  
Published : Feb 23, 2024, 01:50 AM IST

ಸಾರಾಂಶ

ರೈತರ ಮಾವಿನ ತೋಪಿನಲ್ಲಿನ ಮರಗಳನ್ನು ಕತ್ತರಿಸದಂತೆ ಹೈಕೋರ್ಟ್‌ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿತ್ತು. ಆದರೂ ಅರಣ್ಯ ಪ್ರದೇಶ ಒತ್ತುವರಿ ಆರೋಪದಡಿ ಅರಣ್ಯಾಧಿಕಾರಿಗಳು ಲಕ್ಷಕ್ಕೂ ಹೆಚ್ಚು ಮಾವಿನ ಮರಗಳನ್ನು ಕತ್ತರಿಸಿದ ಪ್ರಕರಣ

ಕನ್ನಡಪ್ರಭ ವಾರ್ತೆ ಬೆಂಗಳೂರು

ನ್ಯಾಯಾಲಯದ ತಡೆಯಾಜ್ಞೆ ಆದೇಶವಿದ್ದರೂ ಅರಣ್ಯ ಒತ್ತುವರಿ ಆರೋಪದಡಿ ಕೋಲಾರದ ಶ್ರೀನಿವಾಸಪುರ ತಾಲೂಕಿನ ಉಪ್ಪಾರಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಮಾವಿನ ತೋಪಿನಲ್ಲಿ ಸುಮಾರು 1.30 ಲಕ್ಷ ಮರ ಕತ್ತರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಮರಗಳ ಕತ್ತರಿಗೆ ಕಾರಣವಾದ ಅಧಿಕಾರಿಗಳ ಖುದ್ದು ಹಾಜರಾತಿಗೆ ಆದೇಶಿಸಿದೆ.

ಈ ಸಂಬಂಧ ಉಪ್ಪಾರಪಲ್ಲಿಯ ಗುಲ್ಜಾರ್‌ ಪಾಷ ಮತ್ತಿತರರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.ಸರ್ಕಾರಿ ವಕೀಲರ ಸಮರ್ಥನೆ

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ಅರ್ಜಿದಾರರು ಸೇರಿದಂತೆ ರೈತರ ಮಾವಿನ ತೋಪಿನಲ್ಲಿನ ಮರಗಳನ್ನು ಕತ್ತರಿಸದಂತೆ ಹೈಕೋರ್ಟ್‌ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿತ್ತು. ಆದರೆ, ಅರಣ್ಯ ಪ್ರದೇಶ ಒತ್ತುವರಿ ಆರೋಪದಡಿ ಅರಣ್ಯಾಧಿಕಾರಿಗಳು ಕತ್ತರಿಸಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ರಾಜ್ಯ ಸರ್ಕಾರದ ಪರ ವಕೀಲರು, ಅರಣ್ಯ ಒತ್ತುವರಿ ಹಿನ್ನೆಲೆಯಲ್ಲಿ 1,300 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, ಅರಣ್ಯ ಭೂಮಿ ಒತ್ತುವರಿಯಾಗಿದ್ದರೆ, ಅದನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬೇಕಿತ್ತು. ಅದು ಬಿಟ್ಟು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುವ ಸಂದರ್ಭದಲ್ಲಿ ಅನುಮತಿ ಪಡೆಯದೇ ಸಾವಿರಾರು ಮರಗಳನ್ನು ಏಕೆ ಕತ್ತರಿಸಲಾಗಿದೆ ಎಂದು ಖಾರವಾಗಿ ಪ್ರಶ್ನಿಸಿತು. ಅಲ್ಲದೆ, ಮರಗಳನ್ನು ಕತ್ತರಿಸಲು ಕಾರಣವಾಗಿರುವ ಅಧಿಕಾರಿಗಳು ಮುಂದಿನ ವಿಚಾರಣೆಗೆ ಖುದ್ದು ಹಾಜರಿರಬೇಕು ಎಂದು ತಾಕೀತು ಮಾಡಿ ವಿಚಾರಣೆಯನ್ನು ಮುಂದೂಡಿತು.ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದ ಪ್ರಕರಣ

ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಶ್ರೀನಿವಾಸಪುರ ತಾಲೂಕಿನ ಪಾಳ್ಯ, ಯಲವಳ್ಳಿ, ಕೇತಗಾನಹಳ್ಳಿ, ಚಿಂತೆ ಕುಂಟೆ, ನಾರಮಾಕಲ ಹಳ್ಳಿ, ಉಪ್ಪರಹಳ್ಳಿ, ಕೋಟಬಲ್ಲಹಳ್ಳಿ, ಇಲದೋಣಿ, ಲಕ್ಷ್ಮೀಪುರ, ಪಾತಪಲ್ಲಿ, ದ್ವಾರಸಂದ್ರ, ಆಲಂಬಗಿರಿ, ಸುಣ್ಣಕಲ್ಲು, ಜಿಂಕಲವಾರಿಹಳ್ಳಿ ಸೇರಿದಂತೆ ಮುಂತಾದ ಕಡೆ 85 ಸಾವಿರ ಮಾವಿನ ಮರಗಳು ಸೇರಿದಂತೆ ಒಟ್ಟು 1 ಲಕ್ಷ 30 ಸಾವಿರಕ್ಕೂ ಅಧಿಕ ಮರಗಳನ್ನು ಕತ್ತರಿಸಿದ್ದಾರೆ. ಅರಣ್ಯ ಭೂಮಿ ಒತ್ತುವರಿಯಾಗಿಲ್ಲ. ಭೂಮಿಗೆ ಸಂಬಂಧಿಸಿದಂತೆ ಅರ್ಜಿದಾರರು ಸೇರಿದಂತೆ ಇತರೆ ರೈತರು ಸಾಗುವಳಿ ಚೀಟಿ ಹೊಂದಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ