ಮಕ್ಕಳ ಅಪೌಷ್ಟಿಕತೆ ತಡೆಗೆ ರಾಗಿ ಮಾಲ್ಟ್ ಯೋಜನೆ: ಬಿಇಒ ಬಸವರಾಜಪ್ಪ

KannadaprabhaNewsNetwork |  
Published : Feb 23, 2024, 01:50 AM IST
ಹರಪನಹಳ್ಳಿಯ ಮೇಗಳಪೇಟೆ ಸಹಿಪ್ರಾ ಶಾಲೆಯಲ್ಲಿ ಬಿಇಒ ಬಸವರಾಜಪ್ಪ ಅವರು ಮಕ್ಕಳಿಗೆ ರಾಗಿಮಾಲ್ಟ್ ನೀಡಿ ಯೋಜನೆಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಇದನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ವಿನೂತನ ಯೋಜನೆ ಜಾರಿಗೆ ತಂದಿದೆ.

ಹರಪನಹಳ್ಳಿ: ಮಕ್ಕಳ ಅಪೌಷ್ಟಿಕತೆ ತೊಡೆದು ಹಾಕಲು ಮಧ್ಯಾಹ್ನ ಉಪಾಹಾರ ಜತೆಗೆ ಇದೀಗ ಸರ್ಕಾರ ರಾಗಿ ಮಾಲ್ಟ್ ನೀಡಲಾಗುತ್ತಿದ್ದು, ಅಪೌಷ್ಟಿಕತೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ತಿಳಿಸಿದರು.

ಪಟ್ಟಣದ ಮೇಗಳಪೇಟೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ತಾಲೂಕು ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಇದನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ವಿನೂತನ ಯೋಜನೆ ಜಾರಿಗೆ ತಂದಿದ್ದು, ಮಕ್ಕಳ ಕಲಿಕೆಗೆ ಸದೃಢತೆಯಿಂದ ಮುಂದಾಗಲು ಸರ್ಕಾರದ ಅನೇಕ ಯೋಜನೆಗಳು ಸಹಾಯಕವಾಗಲಿವೆ. ಯಾವುದೇ ಯೋಜನೆ ಬಂದರೂ ನೌಕರರು, ಶಿಕ್ಷಕರು ಟೀಕಿಸದೆ ಅವುಗಳನ್ನು ಅನುಷ್ಠಾನಕ್ಕೆ ಮುಂದಾಗಿ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಇದೆ. ಯಾರೇ ಆಗಲಿ, ಯೋಜನೆ ಬಗ್ಗೆ ಟೀಕೆ ಮಾಡಿದಲ್ಲಿ ಕ್ರಮ ವಹಿಸಲಾಗುತ್ತಿದ್ದು, ಯಾವುದೇ ಲೋಪ ಬಾರದಂತೆ ಮಕ್ಕಳಿಗೆ ಈ ಯೋಜನೆಯನ್ನು ತಲುಪಿಸಬೇಕು ಎಂದರು.

ಅಕ್ಷರದಾಸೋಹ ಸಹಾಯಕ ನಿರ್ದೇಶಕ ಜಯರಾಜ್ ಮಾತನಾಡಿ, ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರ ವಿನೂತನವಾಗಿ ಹಾಲಿನ ಜತೆ ರಾಗಿ‌ಮಾಲ್ಟ್ ಉಚಿತವಾಗಿ ನೀಡಲಾಗುತ್ತಿದ್ದು, ಸದೃಢ ಶರೀರಕ್ಕಾಗಿ ಹಾಗೂ ಆರೋಗ್ಯ ದೃಷ್ಟಿಯಿಂದ ಇದನ್ನು ನೀಡಲಾಗುತ್ತಿದ್ದು, ಎಲ್ಲರೂ ಇದರ ಸದುಪಯೋಗ ಮಾಡಿಕೊಳ್ಳಬೇಕು. ವಾರದಲ್ಲಿ ಮೂರು ದಿನ ಬಿಸಿಹಾಲಿನೊಂದಿಗೆ ಸಾಯಿ ಶೂರ್ ರಾಗಿ ಮಾಲ್ಟ್ಅನ್ನು ಎಲ್ಲ ಶಾಲೆಗಳಿಗೂ ನೀಡಲಾಗುವುದು ಎಂದರು.

ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ ಮಾತನಾಡಿ, ದೇಶದ ಹಾಗೂ ರಾಜ್ಯದಲ್ಲಿ ಅನೇಕ ಬಡ ಮಕ್ಕಳು ಅಪೌಷ್ಟಿಕತೆಯಿಂದ ಸಾವಿಗೀಡಾದ ಘಟನೆಗಳು ನಡೆದಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ. ಅನೇಕ ಯೋಜನೆಗಳ ಮೂಲಕ ಅನ್ನರಾಮಯ್ಯ ಆಗಿದ್ದಾರೆ. ಶೈಕ್ಷಣಿಕ ಹಿತದೃಷ್ಟಿಯಿಂದ ಮಕ್ಕಳಿಗೆ ಈ ಯೋಜನೆ ತಲುಪಿಸಲು ಎಲ್ಲರೂ ಮುಂದಾಗೋಣ ಎಂದರು.

ತಾಪಂ ಇಒ ಕೆ.ಆರ್. ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಬಿಆರ್‌ಸಿ ಹೊನ್ನತೆಪ್ಪ, ಬಿಆರ್‌ಪಿ ವಾಗೀಶ, ಅಣ್ಣಪ್ಪ, ರುಕ್ಷನಾ, ವಿವಿಧ ಶಾಲೆಯ ಮುಖ್ಯೋಪಾಧ್ಯಾಯ ಸಲೀಂ, ಅರ್ಜುನ ಪರಸಪ್ಪ, ಲತಾ, ಚಿದಾನಂದಪ್ಪ, ಎಸ್‌ಡಿಎಂಸಿ ಅಧ್ಯಕ್ಷೆ ರೇಖಾ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ