ಭಯ, ಗೊಂದಲವಿಲ್ಲದೇ ಪರೀಕ್ಷೆ ಬರೆಯಿರಿ: ಶರಣಪ್ಪ ಸಂಕನೂರ್‌

KannadaprabhaNewsNetwork | Published : Feb 23, 2024 1:50 AM

ಸಾರಾಂಶ

ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯವನ್ನುರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು.

ಕುರುಗೋಡು: ತಾಲೂಕಿನ ಸೋಮಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶರಣಪ್ಪ ಸಂಕನೂರ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದು ಸಂತೋಷಗೊಂಡರು. ಸಮಾಜ ವಿಜ್ಞಾನ ವಿಷಯ ಪಾಠ ಬೋಧಿಸಿದ ಅವರು ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.

ಶಾಲಾ ಮಟ್ಟದಲ್ಲಿ ಜರುಗಿದ ಪರೀಕ್ಷೆಗಳಂತೆ ಅಂತಿಮ ಪರೀಕ್ಷೆಯನ್ನು ಭಯವಿಲ್ಲದೆ ಬರೆದು ಹೆಚ್ಚು ಅಂಕಗಳಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಭಯ ಮತ್ತು ಗೊಂದಲಕ್ಕೆ ಒಳಗಾಗದೆ ಶ್ರದ್ಧೆಯಿಂದ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದರು. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯವನ್ನುರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು, ಆದ್ದರಿಂದ ವಿಷಯಕ್ಕೆ ಅನುಗುಣವಾಗಿ ಮಕ್ಕಳಿಗೆ ಶಿಕ್ಷಣದಲ್ಲಿ ಯಾವುದೇ ಕೊರತೆ ಆಗದಂತೆ ಎಚ್ಚರ ವಹಿಸಬೇಕು ಎಂದರು.ಮಕ್ಕಳ ಬಾಲ್ಯ ಶಿಕ್ಷಣದ ಪ್ರಮುಖ ಘಟ್ಟ ಎಸ್ಎಸ್ಎಲ್‌ಸಿ. ಆದ್ದರಿಂದ ಅವರ ಮುಂದಿನ ಶಿಕ್ಷಣದ ಭವಿಷ್ಯ ಇಲ್ಲಿಂದ ಪ್ರಾರಂಭವಾಗುತ್ತದೆ. ಮಕ್ಕಳಿಗೆ ನಿತ್ಯ ಪಠ್ಯ ಚಟುವಟಿಕೆಗಳೊಂದಿಗೆ ಗುಣಾತ್ಮಕ ಶಿಕ್ಷಣ ನೀಡಿ ಎಂದರು.

1ರಿಂದ 10ನೇ ತರಗತಿಯಲ್ಲಿ ಒಟ್ಟು 696 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ. ಆಧುನಿಕ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಶಿಕ್ಷಕರು ರಾಹುಲ್ ಶರಣಪ್ಪ ಸಂಕನೂರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅವರು, ನಿರ್ಮಿಸಿಕೊಡುವ ಭರವಸೆ ನೀಡಿದರು.ಶಾಲೆಯಲ್ಲಿ ಎರಡು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದ ₹62 ಲಕ್ಷ ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಿಕ್ಷಕರು ಮಾಹಿತಿ ನೀಡಿದರು.

ಇಒ ಕೆ.ವಿ. ನಿರ್ಮಲಾ, ಪಿಡಿಒ ಕೆ. ಸಿದ್ದಲಿಂಗಪ್ಪ, ಅಧ್ಯಕ್ಷ ಪಾವಡಿ ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಮುಖ್ಯ ಶಿಕ್ಷಕ ಗುಂಡಪ್ಪನವರ ನಾಗರಾಜ್, ಮತ್ತು ಮುಖ್ಯ ಶಿಕ್ಷಕಿ ಅನಿತಾ ಜೋಷಿ ಇದ್ದರು.

Share this article