ಶ್ರೀನಿವಾಸ ಬಬಲಾದಿ
ಕನ್ನಡಪ್ರಭ ವಾರ್ತೆ ಲೋಕಾಪುರಲೋಕಾಪುರ ಪಪಂ ಆಗಿ ಮೂರು ವರ್ಷ ಕಳೆದಿದೆ. ಹೀಗಾಗಿ ಇನ್ನುವರೆಗೂ ಒಮ್ಮೆಯೂ ಚುನಾವಣೆ ನಡೆದು ಸದಸ್ಯರು ಆಯ್ಕೆ ಆಗಿಲ್ಲ. ಹೀಗಿದ್ದರೂ ಸರ್ಕಾರ ಲೋಕಾಪುರ ಪಪಂಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಮೀಸಲು ಘೋಷಿಸಿ ಅಚ್ಚರಿ ಮೂಡಿಸಿದೆ.
ಹೌದು, ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಸ್ಥಾನ ಎಸ್‌ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಎಂದು ಪ್ರಕಟಿಸಿರುವುದು ಪಟ್ಟಣದ ಜನತೆಗೆ ಅಚ್ಚರಿ ಉಂಟುಮಾಡಿದೆ.ಮೂರು ವರ್ಷಗಳ ಹಿಂದೆ ಮೇಲ್ದರ್ಜೆಗೇರಿದ ಲೋಕಾಪೂರ ಪಟ್ಟಣ ಪಂಚಾಯತಗೆ ಚುನಾವಣೆ ನಡೆಸುವುದು ಪ್ರಾರಂಭದಲ್ಲಿ ವಾರ್ಡ್ ವಿಂಗಡನೆ ನೆಪ ಒಡ್ಡಿ ಚುನಾವಣೆ ಪ್ರಕ್ರಿಯೆಗೆ ವಿಳಂಬವಾಗಿತ್ತು. ಈ ಸಮಸ್ಯೆ ಪರಿಹಾರಗೊಂಡು ಎರಡುವರೆ ವರ್ಷ ಕಳೆದರೂ ಸ್ಥಳೀಯ ಶಾಸಕರ ಹಾಗೂ ಸಂಬಂಧಿಸಿದ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಪಟ್ಟಣ ಪಂಚಾಯತ ಚುನಾವಣೆ ಪ್ರಕ್ರಿಯೆಗೆ ವಿಳಂಭವೇ ಕಾರಣ ಎನ್ನಲಾಗಿದೆ.
ಆಕಾಂಕ್ಷಿಗಳಿಗೆ ನಿರಾಸೆ:ಪಟ್ಟಣ ಪಂಚಾಯಿತಿ ಚುನಾವಣೆ ತಯಾರಿಯಲ್ಲಿರುವ ಆಕಾಂಕ್ಷಿಗಳಿಗೆ ಚುನಾವಣೆ ನಡೆಯದಿರುವುದು ನಿರಾಸೆ ಉಂಟು ಮಾಡಿದೆ. ಏಕೆಂದರೆ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಹೇಗಾದರೂ ಮಾಡಿ ವಿಜಯಶಾಲಿ ಆಗಬೇಕೆಂಬ ಕನಸು ಹೊತ್ತು ಸಾಕಷ್ಟು ಆಕಾಂಕ್ಷಿಗಳು ಪಪಂ ಆದಾಗಿನಿಂದ ಆಯಾ ವಾರ್ಡ್‌ಗಳ ಸಾರ್ವಜನಿಕರೊಂದಿಗೆ ಆಗು ಹೋಗಳೊಂದಿಗೆ ಸಾರ್ವಜನಿಕರಿಗೆ ಸ್ಫಂದಿಸುವ ಮೂಲಕ ತಯಾರಿಯಲ್ಲಿ ತೊಡಗಿದ್ದಾರೆ. ಚುನಾವಣೆ ಎದುರಿಸಲು ಸಿದ್ಧರಿರುವ ಇವರಿಗೆ ಚುನಾವಣೆ ನಡೆಯದಿರುವುದು ನಿರಾಸೆ ಉಂಟು ಮಾಡಿದೆ.
ಅಭಿವೃದ್ಧಿಗೆ ಹಿನ್ನಡೆ:ಪಟ್ಟಣ ಪಂಚಾಯಿತಿಗೆ ಆಡಳಿತ ಮಂಡಳಿ ನಿರ್ಮಾಣವಾಗದ ಕಾರಣ ಪಟ್ಟಣದ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗಿವೆ. ಅಧಿಕಾರಿಳಿಗೆ ಸ್ಥಳೀಯ ಸದಸ್ಯರ ಸೂಕ್ತ ಮಾರ್ಗದರ್ಶನ ಸಿಕ್ಕರೆ ಅಭಿವೃದ್ಧಿಗೆ ಹೆಚ್ಚಿನ ವೇಗ ದೊರೆಯುತ್ತದೆ. ಆದರಿಂದ್ದ ಪಟ್ಟಣ ಪಂಚಾಯಿತಿಗೆ ಶೀಘ್ರ ಚುನಾವಣೆ ನಡೆದರೆ ಒಳ್ಳೆಯದು ಎನ್ನುತ್ತಾರೆ ಪಟ್ಟಣದ ಸಾರ್ವಜನಿಕರು.
ಲಕ್ಷಾನಟ್ಟಿ ಗ್ರಾಪಂಗೂ ಸಮಸ್ಯೆ:ಸದಸ್ಯರೇ ಆಯ್ಕೆಯಾಗದ ಪಟ್ಟಣ ಪಂಚಾಯತಗೆ ಮೀಸಲು ಪ್ರಕಟಣೆ ಒಂದೆಡೆ ಆದರೆ ಪಕ್ಕದ ಲೋಕಾಪುರ ಪಂಚಾಯತನ್ನು ಮೇಲ್ದರ್ಜೆಗೇರಿಸಲು ಪಕ್ಕದ ಲಕ್ಷಾನಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯ ಎರಡು ಗ್ರಾಮಗಳನ್ನು ಸೇರ್ಪಡೆ ಆಗಿದ್ದರಿಂದ ಆ ಗ್ರಾಮ ಪಂಚಾಯತನ ಚುನಾವಣೆಗೆ ವಿಳಂಬವಾಗಿದೆ. ಅಲ್ಲಿಯ ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆ ಉಂಟಾಗಿದೆ.
ಮೀಸಲಾತಿ ಘೋಷಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಯಾವ ಪಪಂ, ನಗರಸಭೆ, ಪುರಸಭೆಗಳಿಗೆ ಚುನಾವಣೆ ನಡೆದಿದೆ ಎಂಬ ಸಮಗ್ರ ಮಾಹಿತಿ ಇಟ್ಟುಕೊಂಡು ಮೀಸಲಾತಿ ಘೋಷಣೆ ಮಾಡಬೇಕು. ಆದರೆ, ಒಂದರಲ್ಲಿ ಇನ್ನೊಂದು ಎಂಬಂತೆ ನಿರ್ಲಕ್ಷ್ಯ ಮಾಡಿ ಮೀಸಲಾತಿ ಘೋಷಣೆ ಮಾಡಿದರೆ ಜನರ ಅಪಹಾಸ್ಯಕ್ಕೆ ಕಾರಣವಾಗುವುದು.----
ಕೋಟ್ನಮ್ಮಲ್ಲಿ ಇನ್ನೂವರೆಗೂ ಚುನಾವಣೆ ನಡದೆ ಇಲ್ಲ. ಈ ಮೀಸಲು ನಮಗೆ ಅನ್ವಯಿಸುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿ ಪಪಂ ಚುನಾವಣೆಗೆ ಮನವಿ ಮಾಡಲಾಗುವುದು.
-ಶಿವಾನಂದ ಉದಪುಡಿ, ಮಾಜಿ ಉಪಾಧ್ಯಕ್ಷರು ಬಿಡಿಸಿಸಿ ಬ್ಯಾಂಕ್ ಬಾಗಲಕೋಟೆ.---
ಲೋಕಾಪುರ ಪಪಂಗೆ ಚುನಾವಣೆ ನಡದೆ ಇಲ್ಲ. ಆದರೂ ಪಪಂಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿರುವುದು ನೋಡಿದರೆ ಇದು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಈಗಲಾದರೂ ಸಂಬಂಧಿಸಿದವರು ಪಪಂಗೆ ಚುನಾವಣೆ ನಡೆಸಿ ಅಭಿವೃದ್ಧಿಗೆ ವೇಗ ನೀಡಬೇಕು.-ಯಮನಪ್ಪ ಹೊರಟ್ಟ, ಬಿಜೆಪಿ ಹಿರಿಯ ಮುಖಂಡ