ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗಬಾರದು: ಬಿಇಒ ಉಮಾ

KannadaprabhaNewsNetwork |  
Published : Jun 16, 2025, 04:42 AM IST
15ಕೆಎಂಎನ್ ಡಿ29 | Kannada Prabha

ಸಾರಾಂಶ

ಶಿಕ್ಷಕರಾಗಿ ನಾಗರಿಕರ ನಡುವೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಉತ್ತಮ ಕೆಲಸ ಮಾಡಿ ನಿವೃತ್ತಿ ಹೊಂದಿದ್ದೀರಿ. ಒಬ್ಬ ಸಾಹಿತಿಯಾಗಿ ಮಕ್ಕಳಿಗೆ ಕನ್ನಡ ಭಾಷೆ ಕಲಿಸಿದ್ದೀರಿ. ಅತಿಥಿ ಶಿಕ್ಷಕರಾಗಿ ಕೆಲಸ ಮಾಡಲು ಅವಕಾಶವಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಸರ್ಕಾರಿ ಕೆಲಸಗಳಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ಯಾರು ನಿವೃತ್ತರಾಗಬಾರದು ಎಂದು ಮಳವಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಹೇಳಿದರು.

ಮಾರಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಶಿವಮಲ್ಲಯ್ಯ ದಂಪತಿಯನ್ನು ಅಭಿನಂದಿಸಿ ಮಾತನಾಡಿದರು.

ಶಿಕ್ಷಕರಾಗಿ ನಾಗರಿಕರ ನಡುವೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಉತ್ತಮ ಕೆಲಸ ಮಾಡಿ ನಿವೃತ್ತಿ ಹೊಂದಿದ್ದೀರಿ. ಒಬ್ಬ ಸಾಹಿತಿಯಾಗಿ ಮಕ್ಕಳಿಗೆ ಕನ್ನಡ ಭಾಷೆ ಕಲಿಸಿದ್ದೀರಿ. ಅತಿಥಿ ಶಿಕ್ಷಕರಾಗಿ ಕೆಲಸ ಮಾಡಲು ಅವಕಾಶವಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಒಂದು ಶಾಲೆ ಉನ್ನತ ಮಟ್ಟಕ್ಕೆ ತಲುಪಲು ಆಧಾರಸ್ತಂಭ ಮುಖ್ಯ ಶಿಕ್ಷಕರು. ಶಿವಮಲ್ಲಯ್ಯ ಅವರು ಕರ್ತವ್ಯ ನಿರ್ವಹಿಸಿದ ಮೂರು ವರ್ಷಗಳಲ್ಲೇ ಕೇವಲ 40 ಇದ್ದ ಮಕ್ಕಳ ಸಂಖ್ಯೆಯನ್ನು 140ಕ್ಕೆ ಏರಿಸುವುದು ಸುಲಭದ ಮಾತಲ್ಲ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿ ಮಾರಗೌಡನ ಹಳ್ಳಿ ಶಾಲೆ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದೆ. ಉತ್ತಮ ಫಲಿತಾಂಶ ಬರುವುದಕ್ಕೆ ಸಹಕಾರಿಯಾಗಿದೆ ಎಂದರು.

ಇಂಗ್ಲಿಷ್ ಮಾಧ್ಯಮದ ಅನುಮೋದನೆಗಾಗಿ ಮನವಿ ಸಲ್ಲಿಸುವಂತೆ ತಿಳಿಸಿದ ಅವರು, ಶಾಲೆಯಲ್ಲಿ ಕೊಠಡಿಗಳ ಕೊರತೆ ನೀಗಿಸಲು ಸಿಆರ್ ಎಸ್ ಫಂಡ್‌ನಲ್ಲಿ 20 ಕೋಟಿಗಳನ್ನು ಕೆಲವು ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲು ನೀಡಲಾಗುತ್ತಿದೆ. ಅದಕ್ಕೆ ಈ ಶಾಲೆಯನ್ನು ಸೇರಿಸಿದ್ದೇವೆ. ಸ್ಮಾರ್ಟ್ ಕ್ಲಾಸ್‌ಗೆ ಬೇಕಾದ ಪರಿಕರ, ಆಕರ್ಷಕ ಕೊಠಡಿಯನ್ನು ನಿರ್ಮಿಸಿ ಕೊಡುವುದು ನಮ್ಮ ಶಾಸಕರ ಕನಸು. ಅದನ್ನು ಮುಂದಿನ ದಿನಗಳಲ್ಲಿ ಮಾಡಲಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ಮುಖ್ಯ ಶಿಕ್ಷಕ ಶಿವಮಲ್ಲಯ್ಯ, ಗ್ರಾಮದ ವಾಸಿ, ಬೆಂಗಳೂರಿನ ಚರ್ಮರೋಗ ತಜ್ಞ ಡಾ.ರಾಜಶೇಖರ್ ಮಾತನಾಡಿದರು. ಇದೇ ವೇಳೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕ ಶಿವಮಲ್ಲಯ್ಯರನ್ನು ಎತ್ತಿನಗಾಡಿಯಲ್ಲಿ ಕೂರಿಸಿ ಪೂರ್ಣಕುಂಭ ಹೊತ್ತ ವಿದ್ಯಾರ್ಥಿನಿಯರೊಂದಿಗೆ ವಾದ್ಯಗೋಷ್ಠಿಯಲ್ಲಿ ಶಾಲಾ ಆವರಣಕ್ಕೆ ಕರೆತರಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶಕುಂತಲಾ, ಶಿಕ್ಷಕ ರವಿ , ಚೆಲುವರಾಜು, ಜಿ.ಎಸ್.ಕೃಷ್ಣ, ಪ್ರದೀಪ್ ಮಾತನಾಡಿ, ಎಸ್ಡಿಎಂಸಿ ಅಧ್ಯಕ್ಷ ಚಿಕ್ಕಸ್ವಾಮಿ, ಸದಸ್ಯರು, ಗ್ರಾಮದ ಮುಖಂಡರು, ಸಿಆರ್ ಪಿ ಶಿಕ್ಷಕರು ಮತ್ತು ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಸುರೇಶ್ , ಶಿಕ್ಷಕಿಯರಾದ ಇಂದುಮತಿ, ಶ್ವೇತಾ ಮತ್ತು ಅತಿಥಿ ಶಿಕ್ಷಕಿಯರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ