ಕನ್ನಡಪ್ರಭ ವಾರ್ತೆ ಬೆಳಗಾವಿ
2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದಿರುವ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ 600ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ. ಎಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂಬ ಉದ್ದೇಶದಿಂದ ನಾನು ರಾಜಕೀಯಕ್ಕೆ ಬಂದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಒಬ್ಬ ಗುಮಾಸ್ತನಾಗಲಿ ಅಥವಾ ಈ ದೇಶದ ರಾಷ್ಟ್ರಪತಿಯೇ ಆಗಲಿ, ಅವರು ಕನಸು ಕಾಣುವುದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂದು. ಮಕ್ಕಳು ಶಾಲೆಯಲ್ಲಿ ಚೆನ್ನಾಗಿ ಓದಬೇಕು. ಅವರ ಕಷ್ಟ ಕಾರ್ಪಣ್ಯಗಳು ತನ್ನ ಮಕ್ಕಳಿಗೆ ಬರಬಾರದು ಎಂಬುದೇ ಪಾಲಕರ ಆಶಯವಾಗಿರುತ್ತದೆ ಎಂದು ಅವರು ಹೇಳಿದರು.
ತಂದೆ-ತಾಯಿ ಆಸ್ತಿ ಏನೆಂದು ಕೇಳಿದರೆ, ನಮ್ಮ ಮಕ್ಕಳು ಎನ್ನುತ್ತಾರೆ. ಅಪ್ಪ ಅಮ್ಮನ ಪಾಲಿಗೆ ಮಕ್ಕಳೇ ಆಸ್ತಿಯಾಗಿರುತ್ತಾರೆ. ಅದೇ ರೀತಿ ಮಕ್ಕಳು ಕೂಡ ಅಪ್ಪ ಅಮ್ಮನೇ ನಮ್ಮ ಆಸ್ತಿ ಎಂದು ಹೇಳುವಂತಾಗಬೇಕು. ಅಮ್ಮ, ಅಪ್ಪನ ಕನಸನ್ನು ಮಕ್ಕಳು ನನಸು ಮಾಡಬೇಕು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಕ್ಕಳು ಇಡೀ ಕರ್ನಾಟಕ ರಾಜ್ಯದಲ್ಲಿ ಉತ್ತಮ ಹೆಸರು ಮಾಡಬೇಕು ಎಂದರು.ರಾಜಕಾರಣದಲ್ಲೂ ಒಳ್ಳೆಯದು ಕೆಟ್ಟದು ಇರುತ್ತದೆ. ನಾನು ಸದಾ ಕ್ಷೇತ್ರದ ಬಗ್ಗೆ ಹೆಚ್ಚು ಚಿಂತನೆ ಮಾಡುತ್ತೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸುವರ್ಣ ವಿಧಾನಸೌಧ, ವಿಮಾನ ನಿಲ್ದಾಣ, ವಿಟಿಯು ಇದ್ದರೂ ಅತ್ಯಂತ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಹೊಂದಿದೆ. ಆದರೀಗ ಪರಿಸ್ಥಿತಿ ಬದಲಾಗಿದ್ದು, ಕ್ಷೇತ್ರ ಸಂಪೂರ್ಣ ಪ್ರಗತಿಯತ್ತ ಸಾಗುತ್ತಿದೆ ಎಂದರು.
ಶೇ.90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ನಗದು ಪುರಸ್ಕಾರ ನೀಡಲಾಗುವುದು ಎಂದರು. ಇದೇ ವೇಳೆ ಪಿಯುಸಿಯಲ್ಲಿ ಶೇ.99 ಅಂಕ ಪಡೆದ ಮುತಗ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ನಾರಾಯಣ ಅಮಟೇಕರ್ ಸೇರಿದಂತೆ, ಅಪ್ರತಿಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪಾಲಕರೊಂದಿಗೆ ವೇದಿಕೆಗೆ ಕರೆದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೀಲಾವತಿ ಹಿರೇಮಠ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಎಂ. ಕಾಂಬಳೆ, ಯುವರಾಜ್ ಕದಂ, ಶಂಕರಗೌಡ ಪಾಟೀಲ, ನಾಗೇಶ್ ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ದಾಸಪ್ಪನವರ್, ಸಿ.ಪಿ.ಆಯ್ ಔಟಿ, ಸುರೇಶ್ ಇಟಗಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ತಾಲೂಕುಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಕ್ರೀಡಾಂಗಣ ನಿರ್ಮಾಣಕ್ಕಾಗಿ ಬೆಳೆಗುಂದಿ ಭಾಗದಲ್ಲಿ 6 ಎಕರೆ ಭೂಮಿ ಈಗಾಗಲೇ ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಸುಮಾರು ₹20 ಕೋಟಿ ವೆಚ್ಚದಲ್ಲಿ ಶೀಘ್ರದಲ್ಲೇ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಹೇಳಿದರು.ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ 7 ವರ್ಷಗಳಿಂದ ಶೈಕ್ಷಣಿಕ ಮೂಲಸೌಲಭ್ಯ ಕಲ್ಪಿಸಲು ನಾನು ಸಾಕಷ್ಟು ಶ್ರಮವಹಿಸುತ್ತಿದ್ದೇನೆ. ಯಾವುದೇ ಶಾಲೆಗೆ ಕೊಠಡಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ನೂರಾರು ಕೊಠಡಿ ನಿರ್ಮಾಣ ಮಾಡಲಾಗಿದೆ. ಶಾಲಾ ಕಂಪೌಂಡ್, ಕುಡಿವ ನೀರಿನ ಸೌಲಭ್ಯ, ಆಟದ ಮೈದಾನಗಳ ನಿರ್ಮಾಣ ಸೇರಿ ಎಲ್ಲ ಸೌಲಭ್ಯ ಒದಗಿಸಲಾಗುತ್ತಿದೆ. ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ಗಳನ್ನು ಆರಂಭಿಸುವುದು ನನ್ನ ಕನಸಾಗಿದೆ. ಅವಶ್ಯಕತೆ ಇರುವ ಕಡೆಗಳಲ್ಲಿ ಅತಿ ಶೀಘ್ರವೇ ಸ್ಮಾರ್ಟ್ ಕ್ಲಾಸ್ ತರಗತಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ, ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.