ಕೋಟಿ ಗಳಿಸಿದರೂ ಹೆತ್ತ ತಂದೆ ತಾಯಿಗಳ ಋುಣ ತೀರಲ್ಲ: ಗಣೇಶಶಾಸ್ತ್ರಿಗಳು

KannadaprabhaNewsNetwork | Published : Mar 10, 2025 12:16 AM

ಸಾರಾಂಶ

ತಂದೆ ತಾಯಿಗಳು ಮೃತಪಟ್ಟ ನಂತರ ಅವರನ್ನು ಸ್ಮರಿಸುವದನ್ನು ಬಿಟ್ಟು ಜೀವಂತ ಇರುವಾಗ ಅವರನ್ನು ಸಂತೋಷದಿಂದ ನೋಡಿಕೊಳ್ಳಬೇಕು

ಕುಷ್ಟಗಿ: ಕೋಟಿ ಕೋಟಿ ಸಂಪತ್ತು ಗಳಿಸಿದರೂ ಹೆತ್ತ ತಂದೆ ತಾಯಿಗಳ ಋಣ ತೀರಲ್ಲ ಎಂದು ಪ್ರವಚನಕಾರ ಕಮತಗಿಯ ಗಣೇಶ ಶಾಸ್ತ್ರೀಗಳು ಹೇಳಿದರು.

ತಾಲೂಕಿನ ಕೇಸೂರು ಗ್ರಾಮದಲ್ಲಿ ಲಿಂ, ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ 30ನೇಯ ಪುಣ್ಯ ಸ್ಮರಣೋತ್ಸವ, ರೇಣುಕಾಚಾರ್ಯರ ಜಯಂತ್ಯುತ್ಸವದ ನಿಮಿತ್ತ ನಡೆದ ಮಹಾತ್ಮರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಂದೆ ತಾಯಿಗಳು ಮೃತಪಟ್ಟ ನಂತರ ಅವರನ್ನು ಸ್ಮರಿಸುವದನ್ನು ಬಿಟ್ಟು ಜೀವಂತ ಇರುವಾಗ ಅವರನ್ನು ಸಂತೋಷದಿಂದ ನೋಡಿಕೊಳ್ಳಬೇಕು, ಅವರ ಕಣ್ಣಲ್ಲಿ ನೀರು ತರಿಸುವ ಬದಲಿಗೆ ಒಳ್ಳೆಯ ಹೆಸರನ್ನು ತಂದು ಕೊಡುವ ಉತ್ತಮ ಕೆಲಸ ಮಾಡಬೇಕು ಅಂದಾಗ ಮಾತ್ರ ಬದುಕು ಸಾರ್ಥಕಗೊಳ್ಳುತ್ತದೆ ಎಂದರು.

ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಮಾತನಾಡಿ, ಮಹಾತ್ಮರ ಜೀವನ ದರ್ಶನದ ಕುರಿತು ಪ್ರವಚನಗಳನ್ನು ಕೇಳುವದರಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ. ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಆಚಾರ ವಿಚಾರ ಕಲಿಸುವ ಕೆಲಸ ಮಾಡಬೇಕು ಎಂದರು.

ಚಂದ್ರಶೇಖರ ದೇವರು ಮಾತನಾಡಿ , ಅಂತರಂಗದಲ್ಲಿ ಪ್ರೀತಿ, ದಯೆ, ವಿಶ್ವಾಸ, ಕೃತಜ್ಞತೆ ಹಾಗೂ ಮಾನವೀಯತೆ ಮೌಲ್ಯ ಬೆಳೆಯಬೇಕಾದರೆ ಮಹಾತ್ಮರ ಜೀವನ ಚರಿತ್ರೆ ಅರಿಯಬೇಕು.ಇಂತಹ ಚರಿತ್ರೆಗಳು ಬದುಕಿಗೆ ದಾರಿದೀಪವಿದ್ದಂತೆ ನಾವೆಲ್ಲರೂ ಇಂದು ಒತ್ತಡದ ಬದುಕಿನಲ್ಲಿ ಜೀವಿಸುತ್ತಿದ್ದೇವೆ. ನೆಮ್ಮದಿಯ ಬದುಕಿಗಾಗಿ ಪರಿತಪಿಸುತ್ತಿದ್ದೇವೆ. ಸಂತ ಮಹಾತ್ಮರ ಜೀವನ, ತಪಸ್ಸು, ವಿನಯ, ಕಲ್ಯಾಣ ಗುಣಗಳು ತ್ರಿವೇಣಿ ಸಂಗಮಗಳಿದ್ದಂತೆ ಇಂತಹ ಮಹಾತ್ಮರ ಜೀವನ ಚರಿತ್ರೆಯ ಅವಲೋಕನ, ಕತ್ತಲು ಕವಿದ ನಮ್ಮ ಬದುಕಿಗೆ ಬೆಳಕಿದ್ದಂತೆ ಎಂದರು.

ಈ ಕಾರ್ಯಕ್ರಮದಲ್ಲಿ ಕಡಕಲಾಟ ಘನಲಿಂಗ ದೇವರು, ಗುರುದೇವ ದೇವರು, ತಬಲಾ ವಾದಕ ಚಿದಾನಂದಯ್ಯ ಹಿರೇಮಠ, ಗಾಯಕ ಬಸವರಾಜ ಹೊನ್ನಿಗನೂರು, ಸೇರಿದಂತೆ ದೋಟಿಹಾಳ, ಕೇಸೂರು, ಕೆ ಗೋನಾಳ, ಕಲಕೇರಿ ಸೇರಿದಂತೆ ಮಹಿಳೆಯರು ಮಕ್ಕಳು ಗ್ರಾಮದ ಗುರುಹಿರಿಯರು ಯುವಕರು ಇದ್ದರು, ಸಾಹಿತಿ ನಿಂಗಪ್ಪ ಸಜ್ಜನ ನಿರೂಪಿಸಿದರು.

Share this article