ವೈದ್ಯಕೀಯ ಸೀಟು ಸಿಕ್ಕರೂ ಶುಲ್ಕ ಭರಿಸುವ ಶಕ್ತಿ ಇಲ್ಲ! ನೆರವಿನ ನಿರೀಕ್ಷೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿ

KannadaprabhaNewsNetwork | Updated : Aug 29 2024, 12:51 PM IST

ಸಾರಾಂಶ

ಕಡು ಬಡತನದ ಕುಟುಂಬವು ಆತನ ಪ್ರವೇಶ ಶುಲ್ಕ ಭರಿಸುವುದು ಸಾಧ್ಯವಾಗದೇ ವೈದ್ಯಕೀಯ ಶಿಕ್ಷಣ ಓದುವ ವಿದ್ಯಾರ್ಥಿಯ ಕನಸು ಕಮರುವ ಸಾಧ್ಯತೆ ಇದೆ.

 ಕೊಪ್ಪಳ :  ತಾಲೂಕಿನ ಬೇಳೂರು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಪ್ರಕಾಶ ತಳವಾರನಿಗೆ ನೀಟ್‌ ಪರೀಕ್ಷೆಯಲ್ಲಿ ಎಂಬಿಬಿಎಸ್‌ ಸೀಟ್‌ ದೊರೆತಿದ್ದು, ಕಡು ಬಡತನದ ಕುಟುಂಬವು ಆತನ ಪ್ರವೇಶ ಶುಲ್ಕ ಭರಿಸುವುದು ಸಾಧ್ಯವಾಗದೇ ವೈದ್ಯಕೀಯ ಶಿಕ್ಷಣ ಓದುವ ವಿದ್ಯಾರ್ಥಿಯ ಕನಸು ಕಮರುವ ಸಾಧ್ಯತೆ ಇದೆ.

ಪ್ರಕಾಶ ಹಿರೇ ಸಿಂದೋಗಿ ಮೊರಾರ್ಜಿ ಶಾಲೆಯಲ್ಲಿ ಪಿಯುಸಿ ಓದಿದ್ದಾನೆ. ಪಿಯುಸಿಯಲ್ಲಿ ಶೇ. 92 ಅಂಕ ಪಡೆದು ತೇರ್ಗಡೆಯಾಗಿದ್ದ. ಪ್ರಥಮ ಪ್ರಯತ್ನದಲ್ಲಿ ಕಳೆದ ಬಾರಿ ವಿಫಲನಾಗಿದ್ದ. ಆದರೆ, ಛಲಬಿಡದೆ ಮತ್ತೊಮ್ಮೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೋಚಿಂಗ್ ಪಡೆದುಕೊಂಡು ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾನೆ. ಈ ಬಾರಿ 720 ಅಂಕಗಳಿಗೆ 594 ಅಂಕ ಪಡೆಯುವ ಮೂಲಕ ಎಂಎಂಬಿಎಸ್ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾನೆ. ಈಗ ಹುಬ್ಬಳ್ಳಿಯ ಕಿಮ್ಸ್ ಕಾಲೇಜು ಪ್ರವೇಶಕ್ಕೆ ಪತ್ರವೂ ಬಂದಿದೆ. ಆದರೆ, ಮನೆಯಲ್ಲಿ ಬಡತನ ಇರುವುದರಿಂದ ಪಾಲಕರಿಗೆ ಪ್ರವೇಶ ಕೊಡಿಸುವ ಶಕ್ತಿ ಇಲ್ಲ.

ಮಗ ಪ್ರಕಾಶನಿಗೆ ಎಂಬಿಬಿಎಸ್ ಸೀಟ್ ಸಿಕ್ಕಿರುವುದಕ್ಕೆ ತಂದೆ ಕನಕಪ್ಪ ಮತ್ತು ತಾಯಿ ಮಲ್ಲಮ್ಮನಿಗೆ ಖುಷಿಯಾಗಿದ್ದರೂ ಶುಲ್ಕ ಹೊಂದಿಸಲಾಗದೇ ಹೆಣಗಾಡುತ್ತಿದ್ದಾರೆ. ಆದರೂ ಏನಾದರೂ ಮಾಡಿ, ನನ್ನ ಮಗನನ್ನು ಓದಿಸಿಯೇ ತಿರುತ್ತೇನೆ ಎನ್ನುತ್ತಾರೆ ಕನಕಪ್ಪ.

ನನ್ನ ಮಗನಿಗೆ ವೈದ್ಯನಾಗುವ ಸೀಟ್ ಸಿಕ್ಕಿದೆಯಂತೆ. ಆದರೆ, ಓದಿಸುವ ಶಕ್ತಿ ನಮ್ಮಲ್ಲಿ ಇಲ್ಲ. ಯಾರಾದರೂ ಸಹಾಯ ಮಾಡಿದರೆ ಪುಣ್ಯ ಬರುತ್ತೆ ಎನ್ನುತ್ತಾರೆ ಕನಕಪ್ಪ.

ವಿದ್ಯಾರ್ಥಿ ಪ್ರಕಾಶಗೆ ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 606 ನೇ ರ್‍ಯಾಂಕ್ ಬಂದಿದೆ. ದೇಶದಲ್ಲಿ 87,725ನೇ ರ್‍ಯಾಂಕ್ ದೊರಕಿದೆ. ಹೀಗಾಗಿ, ಈಗ ಪ್ರಕಾಶ ನೆರವಿನ ನಿರೀಕ್ಷೆಯಲ್ಲಿದ್ದಾನೆ.

ಸಹಾಯ ಮಾಡಿ:

ಎಂಬಿಬಿಎಸ್ ಓದುವ ವಿದ್ಯಾರ್ಥಿ ಪ್ರಕಾಶ ತಳವಾರಗೆ ಸಹಾಯ ಮಾಡುವವರು ಸಿಂಡಿಕೇಟ್ ಬ್ಯಾಂಕಿನ ಖಾತೆ ಸಂಖ್ಯೆ:-  18122210055807  , ಐಎಫ್ಎಸ್ಇ ಕೋಡ್ ಸಂಖ್ಯೆ:-SYNB0001812 ಗೆ ಈ ಖಾತೆಗೆ ಸಂಪರ್ಕಿಸಬಹುದು. ಅಲ್ಲದೇ ಪೋನ್ ಪೇ ನಂಬರ್:- 84313 93640ಕ್ಕೆ ಹಣ ಪಾವತಿ ಮಾಡಬಹುದು.

Share this article