ಕನ್ನಡಪ್ರಭ ವಾರ್ತೆ ಬೆಳಗಾವಿ
ನಮ್ಮ ಹುಟ್ಟು ಗುಡಿಸಲಲ್ಲಿಯಾದರೂ ಬದುಕು ಚರಿತ್ರೆಯಾಗಬೇಕು. ಬದುಕು ಚರಿತ್ರೆಯಾಗಬೇಕಾದರೆ ನಾವು ಜ್ಞಾನ, ವಿದ್ವತ್ತನ್ನು ಸಂಪಾದಿಸಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಸಿ.ಎಂ.ತ್ಯಾಗರಾಜ ಅಭಿಪ್ರಾಯಪಟ್ಟರು.ಉದ್ಯೋಗ ವಿನಿಮಯ ಕೇಂದ್ರ ಮತ್ತು ಮಾದರಿ ವೃತ್ತಿ ಕೇಂದ್ರ ಬೆಳಗಾವಿ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಬೆಳಗಾವಿ ಸಹಯೋಗದೊಂದಿಗೆ ಕಾಲೇಜಿನಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಅವಕಾಶವೇ ದೇವರು. ಅವಕಾಶಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ವಿದ್ಯಾರ್ಥಿಗಳು ಜ್ಞಾನ, ಕೌಶಲ್ಯಗಳನ್ನು ಹೊಂದಬೇಕು. ಅಂಥ ವಿದ್ಯಾರ್ಥಿಗಳನ್ನು ಉದ್ಯೋಗ ನೀಡುವ ಸಂಸ್ಥೆಗಳು ಕೈಬೀಸಿ ಕರೆಯುತ್ತವೆ. ಇಂದಿನದು ಜ್ಞಾನದ ಮಾರುಕಟ್ಟೆ. ಇದರಲ್ಲಿ ಜ್ಞಾನವೇ ಮಾನದಂಡ. ಜ್ಞಾನದ ಮೇಲೆಯೇ ವ್ಯವಹಾರ. ಜ್ಞಾನ ಕೌಶಲ್ಯಗಳನ್ನು ಪಡೆದುಕೊಂಡವರಿಗೆ ಬಹುಬೇಡಿಕೆಯಿದೆ ಎಂದರು.ನಮ್ಮ ಮಹಾವಿದ್ಯಾಲಯದಲ್ಲಿ ಓದುವ ವಿದ್ಯಾರ್ಥಿಗಳು ತುಂಬಾ ಬಡತನ ಮತ್ತು ಗ್ರಾಮೀಣ ಭಾಗದವರು. ಆದರೆ ಅವರಲ್ಲಿರುವ ಧೈರ್ಯ ಸ್ಥೈರ್ಯ ಅಪರಿಮಿತವಾದುದು. ಅವರು ಎತ್ತರಕ್ಕೆ ಏರಬೇಕಾದರೆ ಅವರಲ್ಲಿ ಹೊಸ ತಂತ್ರಜ್ಞಾನ, ಭಾಷೆ ಮತ್ತು ಜ್ಞಾನದ ಕೌಶಲ್ಯಗಳು, ಆವಿಷ್ಕಾರದ ಮನೋಭಾವವಿರಬೇಕು. ಜೊತೆಗೆ ಬೆಳೆಯಬೇಕೆಂಬ ತುಡಿತ ರಾಜಿಯಾಗದ ಕಾರ್ಯಕ್ಷಮತೆ ಇರಬೇಕು. ಇವು ಅವರನ್ನು ಸಾಧಕರನ್ನಾಗಿ ಮಾಡುತ್ತದೆ. ಒಂದು ದೇಶದ ಅರ್ಥ ವ್ಯವಸ್ಥೆಯನ್ನು ಮೇಲಕ್ಕೆ ಎತ್ತಬೇಕಾದರೆ ಅದಕ್ಕೆ ಆ ದೇಶದ ಯುವಕರ ಕಾಣಿಕೆ ಬಲು ದೊಡ್ಡದು. ಜಗತ್ತಿನಲ್ಲಿಯೇ ಅತೀ ಹೆಚ್ಚು ಯುವಕರನ್ನು ಹೊಂದಿರುವ ಭಾರತವು ಆರ್ಥಿಕವಾಗಿ ಬಲಾಢ್ಯವಾಗಲು ಯುವಕರ ಕೊಡುಗೆ ಮುಖ್ಯವಾದುದು ಎಂದರು.
ವಿದ್ಯಾರ್ಥಿಗಳಲ್ಲಿ ಒಂದಿಷ್ಟು ಭಾಷಾಜ್ಞಾನ, ಒಂದಿಷ್ಟು ಕೌಶಲ್ಯ ಜ್ಞಾನ ತುಂಬಿದಲ್ಲಿ ಅವರು ಉತ್ತಮ ಉದ್ಯೋಗವನ್ನು ಪಡೆಯುವಲ್ಲಿ ಖಂಡಿತವಾಗಿ ಯಶಸ್ವಿಯಾಗುತ್ತಾರೆ. ಜೂನ್ ಕೊನೆಯ ವಾರದಲ್ಲಿ ಮತ್ತೊಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಕನಿಷ್ಠ 60,000 ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ನೂರಾರು ಕಂಪನಿಗಳು ವಿದ್ಯಾಲಯದ ಅಂಗಳಕ್ಕೆ ಬರುತ್ತಿವೆ. ಇದೆಲ್ಲವನ್ನೂ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕುಲಸಚಿವ ಸಂತೋಷ ಕಾಮಗೌಡ ಮಾತನಾಡಿ, ವಿದ್ಯಾರ್ಥಿಗಳು ತಾವು ಬಯಸುವ ಉದ್ಯೋಗಕ್ಕೆ ತಕ್ಕಂತೆ ಕೌಶಲ್ಯ, ಜ್ಞಾನ ಹೊಂದಿರಬೇಕಾಗುತ್ತದೆ. ಅಂಥ ಬೌದ್ಧಿಕ ಸಾಮರ್ಥ್ಯ ಒದಗಿಸಿಕೊಡುವುದು ಶಿಕ್ಷಣ ಸಂಸ್ಥೆಗಳ ಬಹು ಮುಖ್ಯ ಕೆಲಸವಾಗಬೇಕು. ಆಗ ವಿದ್ಯಾರ್ಥಿಗಳು ಉತ್ತಮವಾದ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ನಾವು ಬಯಸುವ ವೇತನಕ್ಕೆ ತಕ್ಕಂತೆ ಕೌಶಲ್ಯ ನಮ್ಮಲ್ಲಿರಬೇಕು. ಯಾಕೆಂದರೆ, ಉದ್ಯೋಗ ಸಂಸ್ಥೆಗಳು ತಾವು ನೀಡುವ ವೇತನಕ್ಕೆ ತಕ್ಕಂತೆ ಕಾರ್ಯಕ್ಷಮತೆ ನಿರೀಕ್ಷಿಸುತ್ತವೆ ಎಂದರು.
ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕ ಗುರುಪಾದಯ್ಯ ಹಿರೇಮಠ ಮತ್ತು ಜಿಲ್ಲಾ ಸಂಚಾಲಕರಾದ ಸಂತೋಷ ನಾಗಲಾವಿ ಬೃಹತ್ ಉದ್ಯೋಗ ಮೇಳದ ಕುರಿತು ಮಾತನಾಡಿ, ಯುವಜನಾಂಗಕ್ಕೆ ಉದ್ಯೋಗವನ್ನು ಕಲ್ಪಿಸಲು ನಮ್ಮ ಉದ್ಯೋಗ ವಿನಿಮಯ ಕೇಂದ್ರವು ಸತತವಾಗಿ ಪ್ರಯತ್ನಿಸುತ್ತಿದೆ. ಜೊತೆಗೆ ಇಂತಹ ಮೇಳವನ್ನು ಆಯೋಜಿಸಿದಾಗ ಯುವಜನತೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಜಿ.ಹೆಗಡೆ ಮಾತನಾಡಿ, ಈ ಕಾಲೇಜಿನಲ್ಲಿ ಇಂಥ ಬೃಹತ್ ಉದ್ಯೋಗ ಮೇಳ ಆಯೋಜಿಸಿದುದು ಇದೇ ಮೊದಲು. ಕುಲಪತಿಗಳ ಸಹಕಾರದಿಂದ ಇದು ಸಾಧ್ಯವಾಯಿತು. ವಿದ್ಯಾರ್ಥಿಗಳು ಕಾಣುವ ಕನಸು ನಿಮ್ಮ ಶಕ್ತಿ ಮೀರಿದಂತಿಬೇಕು. ಆಗ ಅದಕ್ಕೆ ಬೇಕಾದಂತ ಇನ್ಪುಟ್ಸ್ ತನ್ನಿಂದ ತಾನೇ ಬರುತ್ತದೆ. ನಮ್ಮ ಜ್ಞಾನಕ್ಕೆ ಮತ್ತು ನಾವು ಮಾಡುವ ಉದ್ಯೋಗಕ್ಕೆ ಮಿತಿಯನ್ನು ನಾವು ಹಾಕಿಕೊಳ್ಳಬಾರದು. ಅವೆರಡೂ ಚಲನಶೀಲತೆಯಿಂದ ಕೂಡಿರಬೇಕು. ಈ ಉದ್ಯೋಗ ಮೇಳದಲ್ಲಿ ನೂರಾರು ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದಿದ್ದೀರಿ. ಆದರೆ ಅಲ್ಲಿಯೆ ಸ್ಥಗಿತವಾಗದೇ ನಿಮ್ಮ ಜ್ಞಾನ ವಿಕಾಸದೊಂದಿಗೆ ಮುಂದೆ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಿ. ಆ ಮೂಲಕ ನಿಮ್ಮ ಪಾಲಕರಿಗೂ ನಿಮ್ಮ ಶಿಕ್ಷಣ ಸಂಸ್ಥೆಗಳಿಗೂ ಗೌರವ ತನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಉದ್ಯೋಗ ಮೇಳದಲ್ಲಿ ಒಟ್ಟು 38 ಕಂಪನಿಗಳು ಭಾಗಿಯಾಗಿದ್ದವು. 1454 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. 449 ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸಿದರು. 43 ಅಭ್ಯರ್ಥಿಗಳಿಗೆ ಕೆಲಸಕ್ಕೆ ಹಾಜರಾಗಲು ಸ್ಥಳದಲ್ಲಿಯೇ ಆದೇಶ ಪ್ರತಿ ನೀಡಿದರು.ಮಹಾವಿದ್ಯಾಲಯದ ಉದ್ಯೋಗ ಕೋಶದ ಸಂಯೋಜನಾಧಿಕಾರಿ ಡಾ. ಮುಕುಂದ ಮುಂಡರಗಿ ಮಾತನಾಡಿದರು. ಬಿಬಿಎ ವಿಭಾಗದ ಉಪನ್ಯಾಸಕ ಶಿವಕುಮಾರ ಮೇಸ್ತ್ರಿ ಸ್ವಾಗತಿಸಿದರು, ಮಲ್ಲಸರ್ಜಿ ವಂದಿಸಿದರು, ಡಾ. ನಮಿತಾ ಪೋತರಾಜ ನಿರೂಪಿಸಿದರು.