ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ

| Published : Sep 06 2025, 01:01 AM IST

ಸಾರಾಂಶ

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಕಾನೂನಿನಲ್ಲಿ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಸೆ.9ರಂದು ಬೆಳಗ್ಗೆ 10ಕ್ಕೆ ನಗರದ ಕದ್ರಿ ಪಾರ್ಕ್ ಬಳಿಯ ಗೋರಕ್ಷ ಜ್ಞಾನ ಮಂದಿರದಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ 10ರ ಬಳಿಕ ಯಕ್ಷಗಾನ, ನಾಟಕ ಸಹಿತ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಕಾನೂನಿನಲ್ಲಿ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಸೆ.9ರಂದು ಬೆಳಗ್ಗೆ 10ಕ್ಕೆ ನಗರದ ಕದ್ರಿ ಪಾರ್ಕ್ ಬಳಿಯ ಗೋರಕ್ಷ ಜ್ಞಾನ ಮಂದಿರದಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದೆ.ನಗರದ ವಿಶ್ವ ಹಿಂದೂ ಪರಿಷತ್‌ ಜತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಳುನಾಡ ಧಾರ್ಮಿಕ, ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ಸಂಚಾಲಕ, ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಜನಾಗ್ರಹ ಸಭೆಯು ವಿಶ್ವಹಿಂದು ಪರಿಷತ್ ಸಹಯೋಗದಲ್ಲಿ ನಡೆಯಲಿದೆ. ಸರ್ವ ಹಿಂದೂ ಸಂಘಟನೆಗಳ ಒಕ್ಕೂಟ, ಸರ್ವ ಯಕ್ಷಗಾನ ಕಲಾವಿದರ ಒಕ್ಕೂಟ, ರಂಗಭೂಮಿ ಕಲಾವಿದರ ಒಕ್ಕೂಟ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟ, ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ, ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ, ಫ್ಲವರ್ ಡೆಕೋರೇಷನ್ ಮಾಲಕರ ಸಂಘ, ಕೊಂಕಣಿ ನಾಟಕ ಸಭಾ, ತುಳು ನಾಟಕ ಕಲಾವಿದರ ಒಕ್ಕೂಟ, ನಾಟಕ ಸಂಗೀತ ನಿರ್ದೇಶಕರ ಒಕ್ಕೂಟ, ಕರಾವಳಿ ದೈವಾರಾದಕರ ಮತ್ತು ದೈವನರ್ತಕರ ಒಕ್ಕೂಟ, ಜಾನಪದ ಪರಿಷದ್ ದಕ ಜಿಲ್ಲೆ, ಶಾಮಿಯಾನ ಮಾಲಕರ ಸಂಘ, ಎಲ್ಲಾ ಗಣೇಶೋತ್ಸವ, ಶಾರದೋತ್ಸವ, ಕೃಷ್ಣ ಜನ್ಮಾಷ್ಟಮಿ ಸಮಿತಿಗಳು ದಕ್ಷಿಣ ಕನ್ನಡ ಜಿಲ್ಲೆ, ಕೊಂಕಣಿ ರಂಗ ಕಲಾವಿದರು ಬೆಂಬಲ ಸೂಚಿಸಿದ್ದು, ತುಳುನಾಡಿನ ಸಂಸ್ಕೃತಿ ಪರಂಪರೆ ಉಳಿಸುವ ಈ ಬೃಹತ್ ಜನಾಗ್ರಹ ಸಭೆಯಲ್ಲಿ ಕಲಾವಿದರ ಸಹಿತ ಸಂಬಂಧಿಸಿದ ಎಲ್ಲರೂ ಭಾಗಹಿಸಬೇಕು ಎಂದು ಮನವಿ ಮಾಡಿದರು.ಕರಾವಳಿಯಲ್ಲಿ ಯಕ್ಷಗಾನ ಮೇಳಗಳು, ನೂರಾರು ನಾಟಕ ತಂಡಗಳು, ಸಾವಿರಾರು ಕಲಾವಿದರು, ಹಿಮ್ಮೇಳದವರು, ಭಾಗವತರು, ತಂತ್ರಜ್ಞರು, ರಂಗಸಜ್ಜಿಕೆ, ಕಾರ್ಮಿಕರು ತಮ್ಮ ಬದುಕನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೂವಿನ ವ್ಯಾಪಾರದಿಂದ ಹಿಡಿದು ದ್ವನಿವರ್ಧಕ, ಶಾಮಿಯಾನ, ಜಾತ್ರಾ ವ್ಯಾಪಾರ ಹೀಗೆ ಉತ್ಸವ, ಆಚರಣೆಗಳನ್ನೇ ನಂಬಿಕೊಂಡು ಅದೆಷ್ಟೋ ಜನರು ಜೀವನ ನಡೆಸುತ್ತಿದ್ದಾರೆ. ಆದರೆ ರಾತ್ರಿ 10 ಗಂಟೆ ಬಳಿಕ ದ್ವನಿವರ್ಧಕ ಬಳಕೆ ಮತ್ತು ಸಮಯದ ಮಿತಿ ಹಾಕಿರುವುದರಿಂದ ಎಲ್ಲರ ಜೀವನ ನಿರ್ವಹಣೆಗೆ ದೊಡ್ಡ ಸಮಸ್ಯೆ ಉಂಟಾಗಿದೆ ಎಂದರು.

ಜಿಲ್ಲೆಯ ಕೆಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಲ್ಲಿಸಿ, ದ್ವನಿವರ್ಧಕ ವಸ್ತುಗಳನ್ನು ಮುಟ್ಟುಗೋಲು ಹಾಕಿ ಕೇಸು ದಾಖಲಿಸಲಾಗುತ್ತಿದೆ. ಯಕ್ಷಗಾನವನ್ನು ಸ್ಥಗಿತಗೊಳಿಸಿರುವುದು ಕೂಡ ನಡೆದಿದೆ. ಇದು ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು ಆಕ್ರೋಶಕ್ಕೂ ಕಾರಣವಾಗಿದೆ. ಹಾಗಾಗಿ ಕರಾವಳಿಯ ಧಾರ್ಮಿಕ ಸಾಂಸ್ಕೃತಿಕ ವೈಭವ ಉಳಿಸುವ ಜತೆಗೆ ಸಾವಿರಾರು ಕುಟುಂಬಗಳ ಜೀವನಕ್ಕಾಗಿ ಜನಾಗ್ರಹ ಸಭೆ ನಡೆಸಲಾಗುತ್ತಿದೆ ಎಂದು ಸತೀಶ್‌ ಶೆಟ್ಟಿ ತಿಳಿಸಿದರು.

ಈ ಹೋರಾಟ ನಿರಂತರ. ಇದರೊಂದಿಗೆ ಕಾನೂನು ಹೋರಾಟ, ಜನಪ್ರತಿನಿಧಿಗಳ ಮುಖಾಂತರ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡ ತರುವ ಮೂಲಕ ಸಮಸ್ಯೆಗೆ ಪರಿಹಾರ ದೊರಕಿಸುವಂತೆ ಆಗ್ರಹಿಸುವ ಕೆಲಸ ಕೂಡ ನಡೆಯಲಿದೆ ಎಂದರು.

ಸಮಿತಿ ಸಂಚಾಲಕರಾದ ನಟ, ನಿರ್ದೇಶಕ ಡಾ. ದೇವದಾಸ್ ಕಾಪಿಕಾಡ್, ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ಲಕುಮಿ ತಂಡದ ಮುಖ್ಯಸ್ಥ ಕಿಶೋರ್ ಡಿ ಶೆಟ್ಟಿ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪಮ್ಮಿ ಕೊಡಿಯಾಲ್ ಬೈಲ್, ದಕ ಜಿಲ್ಲಾ ಸೌಂಡ್ಸ್ ಅಂಡ್ ಲೈಟ್ಸ್ ಅಧ್ಯಕ್ಷ ಧನರಾಜ್ ಶೆಟ್ಟಿ, ನಾಟಕ ಸಂಗೀತ ನಿರ್ದೇಶಕರ ಒಕ್ಕೂಟದ ಅಧ್ಯಕ್ಷ ಮಧು ಬಂಗೇರ ಕಲ್ಲಡ್ಕ, ನಾಟಕ ಸಂಗೀತ ನಿರ್ದೇಶಕರ ಒಕ್ಕೂಟ ಕಾರ್ಯದರ್ಶಿ ಕೃಷ್ಣ ಮಂಜೇಶ್ವರ, ಫ್ಲವರ್ ಡೆಕೋರೇಷನ್ ಸಂಘದ ಅಧ್ಯಕ್ಷ ತುಷಾರ್ ಸುರೇಶ್, ನಟ ರಾಜೇಶ್, ಶಾಮಿಯಾನ ಮಾಲಕರ ಸಂಘದ ಪ್ರತಿನಿಧಿಗಳು ಇದ್ದರು.