ರಟ್ಟೀಹಳ್ಳಿ ತಾಲೂಕಿನ ನಾಗವಂದ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಸಹಕಾರ ಧ್ವಜಾರೋಹಣ ನೆರವೇರಿಸಿದರು.

ರಟ್ಟೀಹಳ್ಳಿ: ನಬಾರ್ಡ್ ರೈತರಿಗೆ ಹೆಚ್ಚಿನ ರೀತಿಯಲ್ಲಿ ಸಾಲ ಕೊಡುವ ಕೆಲಸ ಮಾಡಬೇಕಿದೆ. ನಾವು ಬರಿ ಬೆಳೆ ಸಾಲ ಕೊಡುತ್ತೇವೆ. ಜಮೀನು ಪರಿವರ್ತನೆ, ಸುಗ್ಗಿ ಮಾಡಲು, ಯಂತ್ರೋಪರಕಣಕ್ಕೆ ಹಾಗೂ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ಸಹಾಯ ನೀಡಬೇಕು. ಬರುವ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳಿಂದ ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ನಾಗವಂದ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಸಹಕಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಹಕಾರಿ ರಂಗ ಬಲಗೊಳ್ಳಬೇಕು. ಮಹಾರಾಷ್ಟ್ರದಲ್ಲಿ ಸಹಕಾರಿ ಸಂಘಗಳು ಸರ್ಕಾರವನ್ನು ಆಳುತ್ತವೆ. ಅಷ್ಟು ಪ್ರಬಲವಾಗಿವೆ. ಇಲ್ಲಿ ಸರ್ಕಾರ ಸಹಕಾರಿ ಸಂಘಗಳನ್ನು ಆಳಲು ಬಿಡುವುದಿಲ್ಲ. ಆಧುನಿಕ ಯುಗದಲ್ಲಿ ಸಹಕಾರಿ ಸಂಘಗಳ ಶಕ್ತಿ ದೊಡ್ಡದಿದೆ. ಜಾಗತೀಕರಣದ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಹಾರ ಮಾಡಿದಷ್ಟು ಸಹಕಾರಿ ಸಂಘ ದೊಡ್ಡದಾಗುತ್ತದೆ. ಕೇಂದ್ರದಲ್ಲಿ ಸಹಕಾರಿ ಇಲಾಖೆ ಇರಲಿಲ್ಲ. ಈಗ ಸಹಕಾರ ಸಚಿವರಾಗಿ ಅಮಿತ್ ಶಾ ಇದ್ದಾರೆ. ಅವರು ಮೊದಲು ಎಲ್ಲ ಸಹಕಾರಿ ಸಂಘಗಳನ್ನು ಡಿಜಿಟೈಲೇಜೇಷನ್ ಮಾಡಿದ್ದಾರೆ. ಆಧುನಿಕ ಬ್ಯಾಂಕ್‌ಗಳೊಂದಿಗೆ ಪೈಪೋಟಿ ಮಾಡಬೇಕು. ಸಹಕಾರಿ ಸಂಘ ಬಲಗೊಳ್ಳಬೇಕೆಂದು ಹೇಳಿದ್ದಾರೆ ಎಂದರು.

ಬೇಡ್ತಿ ವರದಾ ಯೋಜನೆಗೆ ಈಗಾಗಲೇ ಹೋರಾಟ ಕೈಗೆತ್ತಿಕೊಂಡಿದ್ದೇವೆ. ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದೆ. ರಾಜ್ಯ ಸರ್ಕಾರವೂ ಒಪ್ಪಿಗೆ ಕೊಟ್ಟಿದೆ. ಆ ಯೋಜನೆ ಜಾರಿಯಾದರೆ ನಮ್ಮ ಜಿಲ್ಲೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಶಿವಯೋಗಿ ಶಿವಾನಂದ ಶಿವಾಚಾರ್ಯರು, ನಾಗವಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಬಿ.ಸಿ. ಪಾಟೀಲ್, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಟಿಎಪಿಸಿಎಂ ಅಧ್ಯಕ್ಷರಾದ ಎಸ್.ಎಸ್. ಪಾಟೀಲ್, ಕೆಸಿಸಿ ಬ್ಯಾಂಕ್‌ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ರವಿಶಂಕರ ಬಾಳಿಕಾಯಿ, ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಮುಖಂಡ ಎನ್.ಎಂ. ಈಟೇರ, ಆರ್.ಎನ್. ಗಂಗೋಳ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ದೀಪಾ ಆನ್ವೇರಿ, ಗ್ರಾಪಂ ಅಧ್ಯಕ್ಷೆ ಮಂಜುಳಾ ನಾಗಪ್ಪ ಹಾಲಿವಾಣದ ಉಪಸ್ಥಿತರಿದ್ದರು.