ಕನ್ನಡಪ್ರಭ ವಾರ್ತೆ ಬೈಲಹೊಂಗಲಮಳೆ ಅಭಾವದಿಂದ ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಕಬ್ಬಿನ ಇಳುವರಿ ಕಡಿಮೆಯಾಗಿದ್ದು, ಕಬ್ಬು ಬೆಳೆಗಾರರು ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ಪೂರೈಸುವ ಮೂಲಕ ಕಾರ್ಖಾನೆಯ ಪ್ರಗತಿಗೆ ಕೈಜೋಡಿಸಬೇಕು ಎಂದು ಕಾರ್ಖಾನೆಯ ಅಧ್ಯಕ್ಷ ಬಸವರಾಜ ಬಾಳೆಕುಂದರಗಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮಳೆ ಅಭಾವದಿಂದ ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಕಬ್ಬಿನ ಇಳುವರಿ ಕಡಿಮೆಯಾಗಿದ್ದು, ಕಬ್ಬು ಬೆಳೆಗಾರರು ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ಪೂರೈಸುವ ಮೂಲಕ ಕಾರ್ಖಾನೆಯ ಪ್ರಗತಿಗೆ ಕೈಜೋಡಿಸಬೇಕು ಎಂದು ಕಾರ್ಖಾನೆಯ ಅಧ್ಯಕ್ಷ ಬಸವರಾಜ ಬಾಳೆಕುಂದರಗಿ ಮನವಿ ಮಾಡಿದರು.ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಪ್ರದೀಪನ ಪೂಜಾ ಸಮಾರಂಭದಲ್ಲಿ ಮಾತನಾಡಿ, ಸಹಕಾರ ತತ್ವದಡಿ ಕಳೆದ ಎರಡು ದಶಕಗಳಿಂದ ಎಲ್ಲರ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಬಾರಿ ಮಳೆ ಅಭಾವದಿಂದ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳ ಪೈಪೋಟಿಯ ನಡುವೆಯೂ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಉಳಿಸಿ ಬೆಳೆಸಲು ರೈತ ಬಾಂಧವರು ಗುಣಮಟ್ಟದ ಕಬ್ಬನ್ನು ಪೂರೈಸಿ ಕಾರ್ಖಾನೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.ಸರ್ಕಾರ ನಿಗದಿಪಡಿಸಿದ ದರದಲ್ಲಿ ಕಬ್ಬು ಬೆಳೆಗಾರರಿಗೆ ಹಣ ಪಾವತಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಾರ್ಖಾನೆಯ ಅಭಿವೃದ್ಧಿಗೆ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಕಾರ್ಮಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ. ದೊಡ್ಡವಾಡ ಹಿರೇಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದಿ.ರಮೇಶ ಬಾಳೆಕುಂದರಗಿ ಅವರು ಈ ಭಾಗದ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಅರಿತು ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಶ್ರಮಿಸಿದ್ದರು. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಹಗಲಿರುಳು ದುಡಿದು ಕಾರ್ಖಾನೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.ಕಾರ್ಖಾನೆ ನಿರ್ದೇಶಕರಾದ ಪ್ರಕಾಶ ಮೂಗಬಸವ, ರಾಜಪ್ಪ ಮಟ್ಟಿ, ಉಮೇಶ್ ಬಾಳಿ, ಮಹಾಂತೇಶ ಮತ್ತಿಕೊಪ್ಪ ಮಾತನಾಡಿ, ಖಾಸಗಿ ಸಕ್ಕರೆ ಕಾರ್ಖಾನೆಗಳ ಪೈಪೋಟಿ ಮಧ್ಯಯೂ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಪ್ರಸಕ್ತ ಹಂಗಾಮಿಗೆ ಮಳೆಯ ಕೊರತೆ ಕಾರಣ ಹಂಗಾಮು ನಡೆಸುವ ಕಾರ್ಯ ಕಷ್ಟದಾಯಕವಾಗಿದೆ. ಪ್ರಸಕ್ತ ಹಂಗಾಮಿಗೆ ಮೂರುವರೆ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಇಟ್ಟುಕೊಂಡಿದ್ದು, ಸೋಮೇಶ್ವರನ ಕೃಪೆಯಿಂದ ಈ ಗುರಿ ಮುಟ್ಟಲು ಭಗವಂತನಲ್ಲಿ ಪ್ರಾರ್ಥಿಸಿದರು.ವೇದಿಕೆಯಲ್ಲಿ ಕಾರ್ಖಾನೆ ಉಪಾಧ್ಯಕ್ಷ ಮಹಾಬಳೇಶ್ವರ ಕುಡಸೋಮಣ್ಣವರ, ನಿರ್ದೇಶಕರಾದ ಅಶೋಕ ಯರಗೊಪ್ಪ, ಕಸ್ತೂರಿ ಸೋಮನಟ್ಟಿ, ಅದೃಶ್ಯಪ್ಪ ಕೊಟಬಾಗಿ, ಅಶೋಕ ಬಾಳೆಕುಂದರಗಿ, ರಾಮಚಂದ್ರ ಕಕ್ಕಯ್ಯನವರ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ಶ್ರೀಶೈಲ ಶರಣಪ್ಪನವರ, ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ ಶಿವಾನಂದ ದೂತಗುಂಡಿ, ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಬಸವರಾಜ ಬೋಳಗೌಡರ, ಸಹಮತ ನಿರ್ದೇಶಕರಾದ ಶ್ರೀಶೈಲ ಮೂಗಬಸವ, ಮಹಾಂತೇಶ ತುರಮರಿ ಸಿದ್ಧನಗೌಡ ಪಾಟೀಲ ಉಪಸ್ಥಿತರಿದ್ದರು.ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ ಬೊಮ್ಮಣ್ಣವರ ನಿರೂಪಿಸಿ, ವಂದಿಸಿದರು. ಮಹಾಂತೇಶ ಶಾಸ್ತ್ರಿ ಹಾಗೂ ಸಂಗಡಿಗರಿಂದ ಹೋಮ-ಹವನ ಮತ್ತು ಪೂಜಾ ವಿಧಿವಿಧಾನಗಳು ನೆರವೇರಿದವು. ಅಶೋಕ ಬಾಳೆಕುಂದರಗಿ ದಂಪತಿಯಿಂದ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಕಾರ್ಖಾನೆಯ ಎಲ್ಲ ಸಿಬ್ಬಂದಿ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.