ಕನ್ನಡಪ್ರಭ ವಾರ್ತೆ, ಯಳಂದೂರು
ಚಾಮರಾಜನಗರ ಜಿಲ್ಲೆ ತಮಿಳುನಾಡು ಹಾಗೂ ಕೇರಳ ರಾಜ್ಯದ ಗಡಿ ಹಂಚಿಕೊಂಡಿದೆ. ಆದರೂ ಸಹ ಇಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು ಇಲ್ಲಿನವರು ಕನ್ನಡಾಭಿಮಾನಿಗಳಾಗಿದ್ದಾರೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬಣ್ಣಿಸಿದರು.ಶನಿವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಬೆಂಗಳೂರಿನಂತಹ ಮಹಾನಗರದಲ್ಲಿ ಕನ್ನಡ ಭಾಷೆ ಮಾತನಾಡುವರ ಸಂಖ್ಯೆ ಕಡಿಮೆಯಾಗುತ್ತಿದೆ. ನಾವು ಕನ್ನಡದಲ್ಲೇ ವ್ಯವಹರಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಭಾಷೆಯ ಬಗ್ಗೆ ಅಭಿಮಾನವನ್ನು ಮೂಡಿಸಿಕೊಳ್ಳಬೇಕು. ದೇಶದ ನೆಲ, ಜಲ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮೈಸೂರು ರಾಜ್ಯದ ನಂತರ ಕರ್ನಾಟಕ ಎಂಬ ನಾಮಕರಣ ಮಾಡಲಾಗಿದೆ. ಭಾಷೆಗೆ ಸಾವಿರಾರು ವರ್ಷಗಳ ಐತಿಹ್ಯವಿದೆ ಎಂದರು.ಇಲ್ಲಿನ ಜಾನಪದದಲ್ಲಿ ಕನ್ನಡದ ಭಾಷಾ ಬಳಕೆ ಹಾಗೂ ಪದ ಬಳಕೆ ವೈವಿಧ್ಯತೆಯಿಂದ ಕೂಡಿದೆ. ಕದಂಬರಿಂದ ಹಿಡಿದು ಮೈಸೂರು ಅರಸರ ವರೆಗೂ ಎಲ್ಲಾ ರಾಜಮನೆತನಗಳು ಭಾಷೆ, ಸಂಸ್ಕೃತಿ, ಶಿಲ್ಪಕಲೆ, ಸಾಹಿತ್ಯ ಸೇರಿ ಎಲ್ಲಾ ಕ್ಷೇತ್ರಗಳಿಗೂ ಅಮೋಘ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯದ ನಂತರ ಭಾಷಾವಾರು ರಾಜ್ಯಗಳ ವಿಗಂಡಣೆ ವೇಳೆ ಕನ್ನಡ ನಾಡು ಉದಯವಾಯಿತು. ಇದಕ್ಕೂ ಸುದೀರ್ಘ ಹೋರಾಟವೇ ನಡೆದಿದೆ. ಇಂತಹ ಶ್ರೀಮಂತ ಭಾಷೆಗೆ ಇಂದು ಅನ್ಯ ಭಾಷೆ ಸವಾಲೊಡ್ಡುತ್ತಿವೆ. ಈ ನಿಟ್ಟಿನಲ್ಲಿ ನಾವು ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿ ಇದನ್ನು ಉಳಿಸಿ, ಬೆಳೆಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಕುದೇರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ಶಿವಪ್ರಕಾಶ್ ಅವರು, ಕನ್ನಡ ನಾಡು, ನುಡಿ ಕಟ್ಟುವಲ್ಲಿ ಸೇವೆ ಸಲ್ಲಿಸಿದ ಮಹನೀಯರು, ಭಾಷೆಯ ಇತಿಹಾಸ, ಇದರ ಸಂರಕ್ಷಣೆ ಕುರಿತು ಮುಖ್ಯ ಭಾಷಣ ಮಾಡಿದರು. ಕನ್ನಡದಲ್ಲಿ ಹೆಚ್ಚು ಅಂಕಗಳಿದ ವಿದ್ಯಾರ್ಥಿಗಳಿಗೆ ಗೋಪಾಲಸ್ವಾಮಿ ಗ್ಯಾಸ್ ಏಜೆನ್ಸೀಸ್ ವತಿಯಿಂದ ವೈ.ಜಿ. ನಿರಂಜನ್ ಅವರು ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರವನ್ನು ವಿತರಣೆ ಮಾಡಿದರು. ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು, ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಸವಿತಾ ಬಸವರಾಜು, ಬಿ. ರವಿ, ಸುಶೀಲಾ ಪ್ರಕಾಶ್, ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ತಹಸೀಲ್ದಾರ್ ಎಸ್.ಎಲ್. ನಯನ, ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್, ಬಿಇಒ ಮಾರಯ್ಯ, ಉಪಪ್ರಾಂಶುಪಾಲ ನಂಜುಂಡಯ್ಯ, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ. ಮೋಳೆ ನಾಗರಾಜು, ಸಿಆರ್‌ಪಿ ರೇಚಣ್ಣ ಸೇರಿ ಅನೇಕರು ಇದ್ದರು.