ವಿಪ ಚುನಾವಣೆಯಲ್ಲೂ ಆಮಿಷ ಬೇಸರ ಸಂಗತಿ

KannadaprabhaNewsNetwork |  
Published : May 19, 2024, 01:46 AM IST
18ಕೆಡಿವಿಜಿ3, 4, 5-ದಾವಣಗೆರೆ ಬಿಜೆಪಿ ಹಿರಿಯ ಮುಖಂಡ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ. | Kannada Prabha

ಸಾರಾಂಶ

ಲೋಕಸಭೆ ಚುನಾವಣೆ ಬೆನ್ನಲ್ಲೇ ವಿಧಾನ ಪರಿಷತ್ತಿಗೆ ಪದವೀಧರರು, ಶಿಕ್ಷಕರ ಕ್ಷೇತ್ರದಿಂದ ಚುನಾವಣೆ ಬಂದಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ರಾಜಕೀಯ ಪಕ್ಷವೊಂದರ ಅಭ್ಯರ್ಥಿ ಮತದಾರರಿಗೆ ಗಿಫ್ಟ್ ಬಾಕ್ಸ್ ನೀಡಲು ಸಂಗ್ರಹಿಸಿದ್ದ ಗಿಫ್ಟ್ ಬಾಕ್ಸ್‌ಗಳನ್ನು ಜಪ್ತಿ ಮಾಡಿದ್ದಾರೆ. ಈ ಘಟನೆ ಬುದ್ಧಿವಂತರು, ನೀತಿವಂತರೇ ತುಂಬಿರುವ ಪರಿಷತ್ತಿಗೆ ನಡೆಯುವ ಚುನಾವಣೆ ಇಂದು ಎತ್ತಸಾಗಿದೆ ಎಂಬ ಪ್ರಶ್ನೆಯೊಂದಿಗೆ ಆತಂಕವನ್ನೂ ತಂದೊಡ್ಡಿದೆ ಎಂದು ವಿಧಾನ ಪರಿಷತ್ತು ಮಾಜಿ ಮುಖ್ಯ ಸಚೇತಕ, ಬಿಜೆಪಿ ಹಿರಿಯ ಮುಖಂಡ ಡಾ. ಎ.ಎಚ್. ಶಿವಯೋಗಿಸ್ವಾಮಿ ದಾವಣಗೆರೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

- ಪದವೀಧರರು, ಶಿಕ್ಷಕರ ಕ್ಷೇತ್ರವನ್ನೂ ಬಿಡದ ಆಮಿಷ: ಡಾ.ಶಿವಯೋಗಿಸ್ವಾಮಿ ತೀವ್ರ ಕಳವಳ

- ಗಿಫ್ಟ್‌ ಬಾಕ್ಸ್, ಪಾರ್ಟಿ, ಹಣ ಹಂಚಿಕೆ ಸರಿಯಲ್ಲ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭೆ ಚುನಾವಣೆ ಬೆನ್ನಲ್ಲೇ ವಿಧಾನ ಪರಿಷತ್ತಿಗೆ ಪದವೀಧರರು, ಶಿಕ್ಷಕರ ಕ್ಷೇತ್ರದಿಂದ ಚುನಾವಣೆ ಬಂದಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ರಾಜಕೀಯ ಪಕ್ಷವೊಂದರ ಅಭ್ಯರ್ಥಿ ಮತದಾರರಿಗೆ ಗಿಫ್ಟ್ ಬಾಕ್ಸ್ ನೀಡಲು ಸಂಗ್ರಹಿಸಿದ್ದ ಗಿಫ್ಟ್ ಬಾಕ್ಸ್‌ಗಳನ್ನು ಜಪ್ತಿ ಮಾಡಿದ್ದಾರೆ. ಈ ಘಟನೆ ಬುದ್ಧಿವಂತರು, ನೀತಿವಂತರೇ ತುಂಬಿರುವ ಪರಿಷತ್ತಿಗೆ ನಡೆಯುವ ಚುನಾವಣೆ ಇಂದು ಎತ್ತಸಾಗಿದೆ ಎಂಬ ಪ್ರಶ್ನೆಯೊಂದಿಗೆ ಆತಂಕವನ್ನೂ ತಂದೊಡ್ಡಿದೆ ಎಂದು ವಿಧಾನ ಪರಿಷತ್ತು ಮಾಜಿ ಮುಖ್ಯ ಸಚೇತಕ, ಬಿಜೆಪಿ ಹಿರಿಯ ಮುಖಂಡ ಡಾ. ಎ.ಎಚ್. ಶಿವಯೋಗಿಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರು, ಪದವೀಧರರ ಕ್ಷೇತ್ರದಲ್ಲಿ ಹಣ, ಉಡುಗೊರೆ, ಮದ್ಯದ ಹಾವಳಿಯ ಪ್ರಭಾವವು ಫಲಿತಾಂಶ ನಿರ್ಧರಿಸುತ್ತದೆಂದರೆ ಅದ್ಯಾವಪರಿ ನೈತಿಕವಾಗಿ ಅಧಃಪತನಕ್ಕೆ ಇಳಿಯುತ್ತಿದ್ದೇವೆಂಬ ಬೇಸರ ಕಾಡುತ್ತದೆ ಎಂದಿದ್ದಾರೆ.

1996-2002 ಹಾಗೂ 2008-2014 ರವರೆಗೆ ಪರಿಷತ್‌ಗೆ ಆಗ್ನೇಯ ಪದವೀಧರ ಕ್ಷೇತ್ರದ ಸದಸ್ಯನಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತು. ಆಗ ಒಂದು ಘಟನೆ ನಡೆದಿತ್ತು. ಚುನಾವಣೆಗೆ 3-4 ದಿನಗಳಿದ್ದ ಸಂದರ್ಭವದು. ರಾತ್ರಿ ಕೆಲ ಪದವೀಧರ ಸ್ನೇಹಿತರು ಬಂದು, ತಮಗೆ ಕಡೇ ಪಕ್ಷ ಒಂದೇ ಒಂದು ಪಾರ್ಟಿ ಕೊಡಿ ಎಂಬ ಬೇಡಿಕೆ ಇಟ್ಟರು. ಅವರಿಗೆ ಪಾರ್ಟಿಗೆ ಎಷ್ಟು ಖರ್ಚಾಗಬಹುದು ಎಂದಾಗ ಕನಿಷ್ಠ ₹25 ಸಾವಿರ ಅಂದರು. ಆಗ ₹30 ಸಾವಿರ ಕೊಡುತ್ತೇನೆ. ದಯವಿಟ್ಟು ಅದೇ ಹಣದಲ್ಲಿ ಪುಸ್ತಕಗಳನ್ನು ಖರೀದಿಸಿ, ಲೈಬ್ರರಿಗೆ ಕೊಡಿ. ಮುಂದೆ ಬರುವ ವಿದ್ಯಾರ್ಥಿಗಳಿಗೆ, ವೃತ್ತಿಪರರಿಗೆ ಅನುಕೂಲ ಆಗುತ್ತದೆ ಎಂದಿದ್ದೆ. ನಮ್ಮ ಪ್ರಮುಖರು, ಕಾರ್ಯಕರ್ತರು ಮಾಡಿರುವ ನಿರ್ಣಯ ಉಲ್ಲಂಘಿಸಲು ಆಗುವುದಿಲ್ಲ. ದಯವಿಟ್ಟು ಕ್ಷಮಿಸಿ, ಅಂತಾ ಹೇಳಿ ಕಳಿಸಿದ್ದೆ ಎಂದು ಹಳೆ ನೆನಪು ಮೆಲಕು ಹಾಕಿದ್ದಾರೆ.

ಪ್ರಬುದ್ಧ ಮತದಾರರಿಂದಾಗಿ ಆಯ್ಕೆ:

"ಪ್ರಾಶಸ್ತ್ಯ "ದ ಮತ ನೀಡಲು ಅವಕಾಶವಿದ್ದು, ನಿಮಗೆ ಪಾರ್ಟಿ ಕೊಟ್ಟವರಿಗೇ ಮತ ನೀಡಬೇಕೆಂದು ನಿಮ್ಮ ಮಿತ್ರರು ಆಗ್ರಹಿಸುತ್ತಿದ್ದರೆ, ಅಂತಹವರಿಗೆ ತಿಳಿಸಿ. ಉತ್ತಮವಾದ ಮದ್ಯ ನೀಡಿದವರಿಗೆ ಪ್ರಥಮ ಪ್ರಾಶಸ್ತ್ಯ. ಅದಕ್ಕಿಂತ ಸ್ವಲ್ಪ ಕಡಿಮೆ ದರ್ಜೆ ಮದ್ಯ ನೀಡಿದವರಿಗೆ 2ನೇ ಪ್ರಾಶಸ್ಯ, ತುಂಬಾ ಕೀಳು, ಕಳಪೆಮಟ್ಟದ ಮದ್ಯ ನೀಡಿದವರಿಗೆ 3ನೇ ಪ್ರಾಶಸ್ತ್ಯ ನೀಡಿ. ಆದರೆ ನೀವೆಲ್ಲರೂ ಪ್ರಬುದ್ಧ ಮತದಾರರು. ನಿಮ್ಮ ಆಯ್ಕೆಯಲ್ಲಿ ಬಿಜೆಪಿಗೆ ಸ್ಥಾನವಿರಲಿಲ್ಲ ಅನಿಸಬಾರದು. 4, 5 ಅಥವಾ ಯಾವುದಾದರೂ ಒಂದು ''''''''ಪ್ರಾಶಸ್ತ,'''''''' ಬಿಜೆಪಿಗೂ ನೀಡಿ. ನಿಮ್ಮ ಆರೋಗ್ಯ ಹಾಳು ಮಾಡಿ, ನಿಮ್ಮ ಮತ ಪಡೆದು ಆಯ್ಕೆ ಆಗುವ ಅಪೇಕ್ಷೆ ನನಗಿಲ್ಲ ಎಂದಿದ್ದೆ. ಆಗ ಬಂದವರು ಪರಸ್ಪರ ಮುಖ ನೋಡಿಕೊಂಡು ಹೊರಟುಹೋದರು. ಆದರೆ, ಪ್ರಜ್ಞಾವಂತ, ಪ್ರಬುದ್ಧ ಮತದಾರರು ಆಗ ಬಿಜೆಪಿಗೆ ಆಶೀರ್ವಾದ ಮಾಡಿ, ತಮ್ಮನ್ನು ಆಯ್ಕೆ ಮಾಡಿದರು ಎಂದು ಸ್ಮರಿಸಿದ್ದಾರೆ.

ಇನ್ನೊಂದು ಪಕ್ಷಕ್ಕೆ ಹೋದರು..:

2014ರ ಚುನಾವಣೆಯ ದಿನ ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ಹೊರಡಲು ವಾಹನದಲ್ಲಿದ್ದೆ. ಆಗ ಮೂವರು ಸ್ನೇಹಿತರು ನಮಸ್ಕರಿಸುತ್ತಾ ಬಂದರು. ಅದರಲ್ಲೊಬ್ಬರು, ನಾವು 3 ಜನ ಇದ್ದೇವೆ ಸರ್, ಅಂತಾ ಚೀಟಿ ತೋರಿಸಿದರು. ಅವರ ನಿರೀಕ್ಷೆ ಹಣ ನೀಡಲಿ ಎಂಬುದಾಗಿತ್ತೆಂದು ಅರ್ಥವಾಯಿತು. ಆಗ ನಾನು, ನೋಡಿ ಸರ್.. ಈಗಾಗಲೇ 4.45 ಗಂಟೆ ಆಗಿದೆ. 5ಕ್ಕೆ ಮತದಾನ ಮುಗಿಯಲಿದೆ. ನಿಮಗೆ ದೇವರು ಬುದ್ಧಿ ನೀಡಿದಂತೆ ಮತ ನೀಡಿ. ದಯವಿಟ್ಟು ಮೊದಲು ಓಟು ಮಾಡಿ ಅಂದಾಗ, ಅವರಲ್ಲೊಬ್ಬರು ಬಾರೋ ಇವರಿಗೆ ಕೇಳೋಕೆ ಹೋಗಿದ್ದೀಯಲ್ಲಾ ಅಂತಾ ನನಗೆ ಕೇಳಿಸುವಂತೆ ಗಟ್ಟಿಯಾಗಿ ಹೇಳುತ್ತಾ, ಇನ್ನೊಂದು ಪಕ್ಷದ ಟೆಂಟ್ ಕಡೆ ನಡೆದಿದ್ದರು ಎಂದಿದ್ದಾರೆ.

- - - ಬಾಕ್ಸ್

ಇದಕ್ಕೆಲ್ಲಾ ಕಾರಣವೇನು?

ತಮ್ಮ ಮತ ಪಡೆದು ಆಯ್ಕೆಯಾದ ವ್ಯಕ್ತಿ ಪ್ರತಿನಿಧಿಯಾದ ನಂತರ ತನ್ನ ಆರ್ಥಿಕ ಸ್ಥಿತಿ, ಸಂಪನ್ಮೂಲ ಎಷ್ಟೊಂದು ಹೆಚ್ಚಿಗೆ ಮಾಡಿಕೊಳ್ಳುತ್ತಿದ್ದಾನೆಂದು ಜನ ಗಮನಿಸುತ್ತಾರೆ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಆಯೋಗಕ್ಕೆ ತನ್ನ ಆಸ್ತಿ ವಿವರ ನೀಡುವಾಗ ಅನೇಕರ ಸಂಪಾದನೆ 5 ವರ್ಷದಲ್ಲಿ ನೂರಾರು ಕೋಟಿ ಹೆಚ್ಚಿರುತ್ತದೆ. ಇದು ನೋಡಿದಾಗ ಸಾಮಾನ್ಯ ಮತದಾರನಿಗೆ ಆಶ್ಚರ್ಯ, ಸಜ್ಜನ ಮತದಾರರಿಗೆ ಆಘಾತವು ಆಗುತ್ತದೆ. ಇಷ್ಟೊಂದು ಗಳಿಸುವ ಸ್ಥಾನಕ್ಕೆ ಆಯ್ಕೆ ಆಗುವ ವ್ಯಕ್ತಿ ನಮಗೂ ಕೊಟ್ಟರೆ ತಪ್ಪೇನು ಎಂಬ ಮಾನಸಿಕತೆ ಅನೇಕರಲ್ಲಿ ಮೂಡುವುದು ಸಹಜ ಎಂದೂ ಡಾ.ಶಿವಯೋಗಿಸ್ವಾಮಿ ತಿಳಿಸಿದ್ದಾರೆ. ಅದೇ ಚುನಾಯಿತ ಪ್ರತಿನಿಧಿಗೆ ಕೇಳಿದರೆ, ನಾನು ಚುನಾವಣೆಗೆ ಇಷ್ಟು ಖರ್ಚು ಮಾಡಿದ್ದೇನೆ. ಮುಂದಿನ ಬಾರಿ ಸ್ಪರ್ಧಿಸಲು ಇದರ ದುಪ್ಪಟ್ಟು ಖರ್ಚಾಗುತ್ತದೆ. ಅಷ್ಟೊಂದು ಹಣ ಎಲ್ಲಿಂದ ತರಲಿ ಎನ್ನಬಹುದು. ಅದಕ್ಕೆ ನಾನು ಹೇಳಿದ್ದು, ಭ್ರಷ್ಟಾಚಾರಕ್ಕೆ ಮೂಲ ಯಾವುದು ಅನ್ನೋದು, "ಕೋಳಿ ಮೊದಲೋ, ಮೊಟ್ಟೆ ಮೊದಲೋ? " ಎಂಬ ಪ್ರಶ್ನೆಯಂತಾಗಿದೆ. ಈ ವ್ಯವಸ್ಥೆ ಸರಿಪಡಿಸಬೇಕೆಂದರೆ ಅದಕ್ಕೆ ಎಲ್ಲರೂ ಪಕ್ಷಗಳು, ಸ್ಪರ್ಧಿಗಳು, ಮತದಾರರು ದೃಢ ನಿರ್ಧಾರ ಮಾಡಬೇಕು. ಚುನಾವಣೆಯಲ್ಲಿ "ಗೆಲುವೇ " ಮಾನದಂಡವಾದರೂ, ಗಾಂಧೀಜಿ ಹೇಳಿದಂತೆ "ಗುರಿ " ಮತ್ತು "ಮಾರ್ಗ "ದಲ್ಲಿ, ''''''''ಗುರಿ'''''''' ಸಾಧಿಸುವಷ್ಟೇ ''''''''ಮಾರ್ಗ''''''''ವೂ ಮುಖ್ಯ ಎಂದು ಡಾ.ಶಿವಯೋಗಿಸ್ವಾಮಿ ಅಭಿಪ್ರಾಯಿಸಿದ್ದಾರೆ.

- - - -18ಕೆಡಿವಿಜಿ3, 4, 5: ಡಾ. ಎ.ಎಚ್. ಶಿವಯೋಗಿಸ್ವಾಮಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!