ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ
ವಿಶ್ವದಲ್ಲೆ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಭಾರತ ಸಂವಿಧಾನ ಬದಲಾವಣೆ ಮಾಡಲು ಹರಿಹರಿ ಬ್ರಹ್ಮ ಬಂದರೂ ಸಾಧ್ಯವಿಲ್ಲ, ಬದಲಾವಣೆ ಮಾಡಲು ಇದೇನು ಮಗ್ಗಿ ಪುಸ್ತಕವಲ್ಲ ಎಂದು ಮಾಜಿ ಸಚಿವ ಎನ್. ಮಹೇಶ ಹೇಳಿದರು.
ಇಲ್ಲಿನ ಶಿವಶಾಂತ ವೀರ ಸಮುದಾಯ ಭವನದಲ್ಲಿ ಮಂಡಲ ಬಿಜೆಪಿ ಆಯೋಜಿಸಿದ್ದ ನ. 26 ಸಂವಿಧಾನ ಗೌರವ ದಿವಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ನೀಲಿ ಬಣ್ಣದ ಸಂವಿಧಾನದ ಪುಸ್ತಕ ಕೆಂಪು ಬಣ್ಣಕ್ಕೆ ತಿರುಗಿಸಿ ಕೈಯಲ್ಲಿ ಹಿಡಿದು, ದೇಶ ತಿರುಗುತ್ತಾ ಭಾರತದ ಸಂವಿಧಾನ ಅಪಾಯದಲ್ಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಸಿ ಸುಳ್ಳನ್ನು ಜನರ ತಲೆಯಲ್ಲಿ ಬಿತ್ತುತ್ತಿದ್ದಾರೆ. ಇದೇ ಕಾಂಗ್ರೆಸ್ ಪಕ್ಷದಿಂದಲೇ ಸಂವಿಧಾನಕ್ಕೆ ಹೆಚ್ಚು ಅಪಾಯ ತಂದಿದ್ದಾರೆ, ಅದರ ಆಶಯಗಳಿಗೆ ಧಕ್ಕೆ ತಂದಿದ್ದಾರೆ,ರಾಹುಲ್ ಗಾಂಧಿ ಜಿರಲೆ ಪಾರ್ಟಿ ಜತೆ ಸೇರಿಕೊಂಡು ಸಂವಿಧಾನ ವಿರೋಧಿ ಚಟುವಟಿಕೆ ಮಾಡುತ್ತಾ ದೇಶದಲ್ಲಿ ಅರಾಜಿಕತೆ ಸೃಷ್ಠಿಸುತ್ತಿದ್ದಾರೆ ಎಂದು ಆರೋಪಿಸಿದರು.ದೇಶದಲ್ಲಿ ಅರಾಜಿಕತೆ ಸೃಷ್ಠಿಸುವವರೇ ಸಂವಿಧಾನ ವಿರೋಧಿಗಳಾಗಿದ್ದಾರೆ. ಒಂದು ದಿನವೂ ಸಂವಿಧಾನ ಕುರಿತು ಸಂಸತ್ತಿನ ಚರ್ಚಿಸದೇ ಹಾದಿ ಬೀದಿಯಲ್ಲಿ ಮಾತನಾಡುವ ಕಾಂಗ್ರೆಸ್‌ನವರಿಗೆ ಸಂವಿಧಾನದ ಘನತೆ,ಗೌರವ ಗೊತ್ತಿಲ್ಲ, ಈ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಹಕ್ಕನ್ನು ಧಮನ ಮಾಡಿದ ಕಾಂಗ್ರೆಸ್, ಈಗ ಬಿಜೆಪಿಯವರಿಗೆ ಸಂವಿಧಾನದ ಪಾಠ ಮಾಡಲು ಬರುತ್ತಿದ್ದಾರೆ, ಈ ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳಿದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ, ಭಾರತ ದೇಶದ ಭವಿಷ್ಯ ಮಂಕು ಮಾಡಲು ವಿದೇಶಿ, ಸ್ವದೇಶಿ ಶಕ್ತಿ ಸಂಚು ರೂಪಿಸಿವೆ ಎಂದು ದೂರಿದರು.
ಸಂವಿಧಾನ ಎಲ್ಲ ಕಾನೂನುಗಳ ತಾಯಿ ಬೇರು, ಈ ಸಂವಿಧಾನದಿಂದಲೇ ನಾನು ಪ್ರಧಾನಿ ಹುದ್ದೆಗೆ ಬಂದಿದ್ದೇನೆಂದು ಪ್ರಧಾನಿ ಮೋದಿ ಹೇಳುತ್ತಾರೆ, ಆದರೆ ನಾನು ಲೋಕಸಭೆ ಪ್ರವೇಶಕ್ಕೆ ಸಂವಿಧಾನ ಕಾರಣ ಎಂದು ರಾಹುಲ್ ಗಾಂಧಿ ಹೇಳಲಿ ಎಂದು ಸವಾಲು ಹಾಕಿದರು.
ಬಿಜೆಪಿ ಎಸ್ಟಿ ಮೋರ್ಚಾದ ಬಂಗಾರು ಹನುಮಂತು ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಸಂಜೀವರೆಡ್ಡಿ, ಮಾಜಿ ಅಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ಉಪಾಧ್ಯಕ್ಷ ಹಣ್ಣಿ ಶಶಿಧರ, ಈಟಿ ಲಿಂಗರಾಜ, ಕೆ.ಪುತ್ರೇಶ, ಎಚ್.ಪೂಜೆಪ್ಪ, ಎಂ. ಪರಮೇಶ್ವರಪ್ಪ, ಕೋಟಿಹಳ್ಳಿ ಮುದುಕಪ್ಪ, ಟಿ.ಮಹಾಂತೇಶ, ಮಂಜುನಾಥ ಜೈನ್, ಬೀರಬ್ಬಿ ಬಸವರಾಜ, ಕಿಚಡಿ ಕೊಟ್ರೇಶ ಸೇರಿದಂತೆ ಇತರರಿದ್ದರು.