ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಕೋಗಿಲೆಮನೆ, ಬಿಕ್ಕೋಡು ಗ್ರಾಪಂ ವ್ಯಾಪ್ತಿಯ ಕೊತ್ತನಹಳ್ಳಿ, ಮಾಳೆಗೆರೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಜೋಳ, ಶುಂಠಿ, ಭತ್ತ, ಅಡಿಕೆ ಬೆಳೆಗಳನ್ನು ತಿಂದು ತೇಗಿ ತುಳಿದು ನಾಶಪಡಿಸುತ್ತಿದ್ದು ಬಡಪಾಯಿ ರೈತರು ಅರಣ್ಯ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.ಮಲೆನಾಡು ಭಾಗದಲ್ಲಿ ಉಪದ್ರವ ಕೊಡುತ್ತಿದ್ದ ಕಾಡಾನೆಗಳು ಈಗ ಬಯಲುಸೀಮೆಯ ಜೋಳ, ಶುಂಠಿ, ಭತ್ತದ ರುಚಿ ಸವಿಯಲು ಮುಂದಾಗುತ್ತಿವೆ. ಬಿಕ್ಕೋಡು, ಕೋಗಿಲೆಮನೆ ವ್ಯಾಪ್ತಿಯಲ್ಲಿ ತಮ್ಮ ಬಿಡಾರವನ್ನು ಹೂಡಿದ್ದು ದನಕರುಗಳಂತೆ ಆರಾಮವಾಗಿ ರಸ್ತೆಯಲ್ಲಿ ಅಡ್ಡಾಡುತ್ತಾ ತಮಗೆ ಇಷ್ಟವಾದ ತೋಟಕ್ಕೆ ನುಗ್ಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಸ್ವಾಹ ಮಾಡುತ್ತಿವೆ. ರೈತರು ಎರಡು ದಿಕ್ಕಿನಿಂದ ತೊಂದರೆಗೆ ಸಿಲುಕಿದ್ದು ಒಂದು ಕಡೆ ಅತಿಯಾದ ಮಳೆ, ಮತ್ತೊಂದು ಕಡೆ ಕಾಡಾನೆಗಳ ನಿರಂತರ ಹಾವಳಿ. ಈ ಎರಡೂ ಬಾಧೆಗಳ ಮಧ್ಯೆ ರೈತರ ಪರಿಶ್ರಮದ ಫಸಲು ಸಂಪೂರ್ಣವಾಗಿ ಹಾಳಾಗಿದ್ದು, ಲಕ್ಷಾಂತರ ರು. ಮೌಲ್ಯ ನಷ್ಟ ಸಂಭವಿಸಿದೆ.
ಕೋಗಿಲೆ ಮನೆ ಪಂಚಾಯತಿ ವ್ಯಾಪ್ತಿಯ ಸರ್ವೆ ನಂಬರ್ ೬೯ ಮಾಳೆಗೆರೆ ಗ್ರಾಮದ ರೈತರಾದ ಜಯಪ್ರಕಾಶ್, ಶಿವಕುಮಾರ್, ತಿಮ್ಮೆಗೌಡ, ರೇಣುಕ ಹಾಗೂ ಈರಪ್ಪ ಇವರ ಹತ್ತಾರು ಎಕರೆ ಜಮೀನಿನಲ್ಲಿ ಗದ್ದೆ, ಜೋಳ ಹಾಗೂ ಇತರೆ ಬೆಳೆಗಳನ್ನು ಬೆಳೆದಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ರಾತ್ರಿ ಕಾಡಿನಿಂದ ಬಂದ ಸುಮಾರು ೨೦ಕ್ಕೂ ಹೆಚ್ಚು ಆನೆಗಳ ಗುಂಪು ಈ ಜಮೀನಿನೊಳಗೆ ನುಗ್ಗಿ ಸಂಪೂರ್ಣ ಬೆಳೆಗಳನ್ನು ತುಳಿದು, ನುಚ್ಚುನೂರು ಮಾಡಿವೆ.ರೈತರಾದ ಜಯಪ್ರಕಾಶ್ ಮಾತನಾಡಿ ಒಂದು ಬದಿ ಮಳೆಯ ಕಾಟ, ಮತ್ತೊಂದು ಬದಿ ಆನೆಗಳ ಕಾಟ, ನಮ್ಮಂತವರಿಗೆ ಬದುಕಿನ ಬಾಗಿಲೇ ಮುಚ್ಚಿದಂತಾಗಿದೆ. ಸುಮಾರು 4 ಎಕರೆಗೂ ಅಧಿಕ ಬೆಳೆ ನಾಶವಾಗಿದೆ. ಫಸಲಿಗೆ ಬಂದಿದ್ದ ಬೆಳೆಗಳು ಕಟಾವು ಮಾಡುವ ಹಂತದಲ್ಲೇ ಈ ರೀತಿ ಸಂಪೂರ್ಣವಾಗಿ ನಾಶವಾಗಿದೆ. ಅರಣ್ಯ ಇಲಾಖೆಯವರು ಕೇವಲ ಆನೆಗಳನ್ನು ಓಡಿಸುವುದರಲ್ಲಿ ಮಾತ್ರ ಕಾಲ ಕಳೆಯುತ್ತಿದ್ದಾರೆಯೇ ಹೊರತು ಇಲ್ಲಿವರೆಗೂ ಯಾವುದೇ ಶಾಶ್ವತ ಪರಿಹಾರ ಮಾಡಿಕೊಟ್ಟಿಲ್ಲ. ನಾವು ಕೂಡ ಬೆಳೆ ಬೆಳೆಯಲು ಸಾಕಷ್ಟು ಕೈಸಾಲ ಮಾಡಿಕೊಂಡಿದ್ದು ಮತ್ತೆ ಅವರಿಗೆ ಮರುಪಾವತಿ ಹೇಗೆ ಕೊಡುವುದು ಎಂಬುದೇ ತಿಳಿಯದಾಗಿದೆ. ಮಳೆ ಮತ್ತು ಆನೆಗಳ ಕಾಟದಿಂದ ಬೆಳೆಯು ಸಂಪೂರ್ಣ ನಾಶವಾಗಿದೆ ಎಂದರು.* ಹೇಳಿಕೆ1ಬೆಳೆ ಬೆಳೆಸಲು ಬ್ಯಾಂಕಿನಿಂದ ಲಕ್ಷಾಂತರ ರು. ಸಾಲ ಮಾಡಿದ್ದೇವೆ. ಆನೆಗಳು ಒಂದು ರಾತ್ರಿಯಲ್ಲೇ ನಮ್ಮ ಹತ್ತು ತಿಂಗಳ ಪರಿಶ್ರಮ ನಾಶಮಾಡಿದವು. ಅರಣ್ಯ ಇಲಾಖೆಯವರು ಬಂದರು, ವರದಿ ಬರೆದು ಹೋದರು, ಆದರೆ ಪರಿಹಾರ ಮಾತ್ರ ಸೊನ್ನೆಯಾಗಿದ್ದು ಸರ್ಕಾರ ನಮ್ಮ ಕಷ್ಟ ಕೇಳುತ್ತಿಲ್ಲ. ಕಾಡಾನೆಗಳು ರಾತ್ರಿ ಬಂದರೆ ನಾವು ನಿದ್ರೆ ಮಾಡೋಕೆ ಸಾಧ್ಯವಿಲ್ಲ. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ.
- ಶಿವಕುಮಾರ್, ರೈತ