- ವಿಜಯಪುರ ಶಾಸಕರ ಉಚ್ಚಾಟನೆಯಿಂದ ಬಿಜೆಪಿಗೆ ಹಾನಿ ಸಾಧ್ಯತೆ: ಶಾಂತರಾಜ ಪಾಟೀಲ ಹೇಳಿಕೆ - - -
ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸಿದಂತೆ ರಾಜ್ಯ ಬಿಜೆಪಿಯ ಬಂಡಾಯದ ಪಿತಾಮಹ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೂ ಪಕ್ಷದ ರಾಜ್ಯ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲರು ಉಚ್ಚಾಟಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ, ಹೊನ್ನಾಳಿಯ ಶಾಂತರಾಜ ಪಾಟೀಲ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರ ಉಚ್ಚಾಟನೆಯು ಬಿಜೆಪಿ ನಿಷ್ಠಾವಂತರು, ಹಿರಿಯ ಕಾರ್ಯಕರ್ತರ ಮನಸ್ಸಿಗೆ ನೋವು ಮಾಡಿದೆ. ಪಕ್ಷದ ರಾಷ್ಟ್ರೀಯ ನಾಯಕರು, ರಾಷ್ಟ್ರೀಯ ಶಿಸ್ತುಪಾಲನಾ ಸಮಿತಿ ಬಸವನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಿದ ಕ್ರಮದ ಬಗ್ಗೆ ಪುನಃ ಪರಿಶೀಲಿಸಬೇಕು ಎಂದರು.ಯತ್ನಾಳ್ ಪಕ್ಷದಲ್ಲಿ ಇಲ್ಲದಿದ್ದರೆ ಸಾಕಷ್ಟು ಹಾನಿ ಪಕ್ಷಕ್ಕೂ ಆಗಲಿದೆ. ಬೂತ್ ಮಟ್ಟದ ಕಟ್ಟಕಡೆಯ ಕಾರ್ಯಕರ್ತರೂ ಇಂತಹ ನಿರ್ಧಾರದಿಂದ ಸಾಕಷ್ಟು ವಿಚಲಿತರಾಗಿದ್ದಾರೆ. ಯತ್ನಾಳ್ ಅವರ ಉಚ್ಚಾಟನಾ ತೀರ್ಮಾನ ಪುನರ್ ಪರಿಶೀಲನೆಯಾಗಬೇಕು. ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಕಲ್ಪನೆ ಕೊಟ್ಟು, ಬಂಡಾಯದ ಪಿತಾಮಹನಾದ ರೇಣುಕಾಚಾರ್ಯ ಅವರಿಂದ ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆಗಿದೆ. ಇಂತಹ ರೇಣುಕಾಚಾರ್ಯ ಅವರಿಗೆ ಪಕ್ಷದಿಂದ ಉಚ್ಚಾಟನೆ ಮಾಡಲಿ ಎಂದು ಆಗ್ರಹಿಸಿದರು.
ಮಾಧ್ಯಮಗಳ ಮುಂದೆ ರಾಷ್ಟ್ರೀಯ ಶಿಸ್ತು ಸಮಿತಿ ನೋಟಿಸ್ ಕೊಟ್ಟಿದ್ದು ಸಂತೋಷವಾಗಿದೆ ಎನ್ನುವ ಮೂಲಕ ಕಳಂಕಿತ ಪರಂಪರೆಗೆ ರೇಣುಕಾಚಾರ್ಯ ಮುನ್ನುಡಿ ಬರೆದಿದ್ದಾರೆ. ತಕ್ಷಣವೇ ರೇಣುಕಾಚಾರ್ಯಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಬೇಕು. ಆ ಮೂಲಕ ರಾಜ್ಯದಲ್ಲಿ ಪಕ್ಷ ಗೌರವ ಉಳಿಸಬೇಕು. ಕಾಂಗ್ರೆಸ್ಸಿನ ಸಚಿವರು, ಮುಖಂಡರನ್ನು ಭೇಟಿ ಮಾಡುತ್ತಾ, ತಮ್ಮ ಕುಟುಂಬ ಸದಸ್ಯರ ಬಿಲ್ ಮಂಜೂರು ಮಾಡಿಸುತ್ತ, ಪಕ್ಷಕ್ಕೂ ಮುಜುಗರ ಮಾಡುವ ಕೆಲಸವನ್ನು ರೇಣುಕಾಚಾರ್ಯ ಮಾಡುತ್ತಿದ್ದಾರೆ. ಪಕ್ಷದ ನಾಯಕರ ವಿರುದ್ಧವೇ ಹೇಳಿಕೆ ನೀಡಿದರೂ ಕ್ರಮ ಯಾಕಿಲ್ಲ ಎಂದು ಪ್ರಶ್ನಿಸಿದರು.
ಪಕ್ಷದ ಮುಖಂಡರಾದ ಎಂ.ಆರ್. ಮಹೇಶ, ಮಾಸಡಿ ಸಿದ್ದೇಶ, ನೆಲಹೊನ್ನೆ ದೇವರಾಜ, ಕೆ.ವಿ.ಚನ್ನಪ್ಪ, ರಾಜಣ್ಣ ಇತರರು ಇದ್ದರು.
-27ಕೆಡಿವಿಜಿ1.ಜೆಪಿಜಿ: