ಬರುವ ಭಕ್ತರಿಗೆ ಮೂಲ ಸೌಕರ್ಯ ಒದಗಿಸಿ

KannadaprabhaNewsNetwork | Published : Mar 28, 2025 12:31 AM

ಸಾರಾಂಶ

ಏ. 9ರಂದು ನಡೆಯುವ ಶ್ರೀಕಂಠೇಶ್ವರ ಸ್ವಾಮಿಯವರ ದೊಡ್ಡ ಜಾತ್ರೆಗೆ ರಾಜ್ಯಾದ್ಯಂತ ಸಾವಿರಾರು ಭಕ್ತರು ಪಾಲುಗೊಳ್ಳುತ್ತಾರೆ

ಕನ್ನಡಪ್ರಭ ವಾರ್ತೆ ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರ ದಾಸೋಹ ಭವನದಲ್ಲಿ ಬುಧವಾರ ಶಾಸಕ ದರ್ಶನ್ ಧ್ರುವನಾರಾಯಣ ಅಧ್ಯಕ್ಷತೆಯಲ್ಲಿ ದೊಡ್ಡ ಜಾತ್ರೆ ಸಿದ್ದತೆ ಪರಿಶೀಲನಾ ಸಭೆ ನಡೆಯಿತು.ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಏ. 9ರಂದು ನಡೆಯುವ ಶ್ರೀಕಂಠೇಶ್ವರ ಸ್ವಾಮಿಯವರ ದೊಡ್ಡ ಜಾತ್ರೆಗೆ ರಾಜ್ಯಾದ್ಯಂತ ಸಾವಿರಾರು ಭಕ್ತರು ಪಾಲುಗೊಳ್ಳುತ್ತಾರೆ, ಭಕ್ತರಿಗೆ ದೇವರ ಸೇವೆ ಮಾಡಲು ತೊಂದರೆಯಾಗದಂತೆ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು, ಕಪಿಲಾ ನದಿಯ ಜೊಂಡನ್ನು ತೆಗೆದು, ನದಿಯ ಸೋಪಾನಕಟ್ಟೆಯನ್ನು ಸ್ವಚ್ಛಗೊಳಿಸಬೇಕು, ಶುದ್ದ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ಬಟ್ಟೆ ಬದಲಿಸಲು ತಾತ್ಕಾಲಿಕ ಕೊಠಡಿಗಳನ್ನು ನಿರ್ಮಿಸಬೇಕು, ರಾಷ್ಟ್ರೀಯ ಹೆದ್ದಾರಿ, ಚಾಮರಾಜನಗರ ಬೈಪಾಸ್ ರಸ್ತೆಯ ಚತುಷ್ಪಥ ರಸ್ತೆಗಳಲ್ಲಿ ವಿದ್ಯುತ್ ಅಲಂಕಾರ ಮಾಡಬೇಕು, ರಥ ಚಲಿಸುವಾಗ ರಥಬೀದಿಯ ಇಕ್ಕೆಲಗಳಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಯಾಗಬೇಕು, 110 ಟನ್ ತೂಗುವ ಸ್ವಾಮಿಯ ಗೌತಮ ರಥದ ಚಕ್ರಗಳ ಬಳಿ ಭಕ್ತರು ಸುಳಿಯದಂತೆ ಪೊಲೀಸರು ರಕ್ಷಣೆ ಕಾರ್ಯ ನಡೆಸಬೇಕು, ಕೆಲವು ರಥಗಳ ಚಕ್ರಗಳು ಶಿಥಿಲವಾಗಿತ್ತು, ಬಸದಲಾಯಿಸಲು ಸೂಚಿಸಲಾಗಿತ್ತು, ಈ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದರು.ಲೋಕೋಪಯೋಗಿ ಇಲಾಖೆಯ ಎಇಇ ಬಸವರಾಜ್ ಮಾತನಾಡಿ, ಗಣಪತಿ ರಥದ ಚಕ್ರಗಳು ಶಿಥಿಲವಾಗಿತ್ತು, ಚಕ್ರಗಳನ್ನು ಬದಲಿಸಿ ಹೊಸ ಚಕ್ರಗಳನ್ನು ಅಳವಡಿಸಲಾಗಿದೆ, ಅಮ್ಮನವರ ರಥದ ಮುಂಭಾಗದ 2 ಚಕ್ರಗಳನ್ನು ಬದಲಿಸಲಾಗಿದೆ, ಜಾತ್ರೆಯ ದಿನ ರಥ ಬೀದಿಯಲ್ಲಿ ಮರಳು ಚೆಲ್ಲಿಸಿ ರಥದ ಚಕ್ರಗಳು ಸುಗಮವಾಗಿ ಸಾಗಲು ವ್ಯವಸ್ಥೆ ಮಾಡಲಾಗುವುದು, ಭಕ್ತರು ರಥ ಚಲಿಸುವಾಗ ಅಡ್ಡಿಯಾಗದಂತೆ ಸೂಕ್ತ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜ್ ಮಾತನಾಡಿ, ಜಾತ್ರೆಯ ದಿನ ಸ್ವಯಂ ಸೇವಾ ಸಂಸ್ಥೆಗಳು ಹಂಚುವ ಪ್ರಸಾದದ ಬಗ್ಗೆ ಆಹಾರ ಸುರಕ್ಷತೆಯ ನಿಯಮ ಪಾಲಿಸಲಾಗಿರುವ ಬಗ್ಗೆ ಪರಿಶೀಲನೆ ನಡೆಸಬೇಕು, ಜಾತ್ರೆಯ ದಿನ ಸರ್ಕಾರಿ ಕಚೇರಿಗಳು, ರಥ ಬೀದಿಯಲ್ಲಿ ಕಟ್ಟಡಗಳು ವಿದ್ಯೂತ್ ಅಲಂಕಾರ ಮಾಡಬೇಕು, ರಥ ಬೀದಿ ಹಾಗೂ ದೇವಾಲಯದ ಬಳಿ ಆರೋಗ್ಯ ಇಲಾಖೆ ಭಕ್ತರ ಆರೋಗ್ಯದ ದೃಷ್ಟಿಯಿಂದ ತಾತ್ಕಾಲಿಕ ಚಿಕಿತ್ಸಾಲಯ ತೆರಯಬೇಕು, ತಾಪಂ ನಗರಸಭೆ, ದೇವಾಲಯದ ಆಡಳಿತ, ತಾಲೂಕು ಆಡಳಿತ ಗಳ ನಡುವೆ ಸಮನ್ವಯತೆ ಸಾಧಿಸಿ ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಬೇಕು, ದೇವಾಲಯದ ಆವರಣದ ಶ್ರೀಕಂಠೇಶ್ವರ ಕಲಾ ಮಂದಿರ, ಕೈಸಾಲೆಗಳಲ್ಲಿ ರಾತ್ರಿ ತಂಗುವ ಭಕ್ತರಿಗೆ ವ್ಯವಸ್ಥೆ ಮಾಡಬೇಕು, ಜೇಬು, ಸರಗಳ್ಳರ ಬಗ್ಗೆ ಪೊಲೀಸ್ ಇಲಾಖೆ ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.ಡಿವೈಎಸ್ಪಿ ರಘು ಮಾತನಾಡಿ, ರಥಗಳು ಚಲಿಸುವ ಹಾಗೂ ನಿಲ್ಲುವ ಬಗ್ಗೆ ಹಸಿರು ಹಾಗೂ ಕೆಂಪು ಬಾವುಟಗಳನ್ನು ತೋರಿಸಿ ಸೂಚನೆ ನೀಡುವ ವ್ಯವಸ್ಥೆ ಮಾಡಲಾಗಿದೆ, ಐಪಿಎಲ್ ಕ್ರಿಕೆಟ್ ನಡೆಯುತ್ತಿರುವುರಿಂದ ಐಪಿಎಲ್ ಪ್ರಾಂಚೈಸಿಗಳು ತಮ್ಮತಂಡಗಳ ಪರವಾಗಿ ಯಾವುದೇ ಬಾವುಟ ಪ್ರದರ್ಶಿಸಲು ಅವಕಾಶವಿಲ್ಲ, ಅಭಿಮಾನಿಗಳು ಚಿತ್ರ ನಟರ ಪ್ಲೇಕ್ಸ್ ಹಿಡಿದು ಪ್ರದರ್ಶಿಸುವುದನ್ನು ನಿಷೇಧಿಸಿದೆ, ಜಾತ್ರೆಗೆ ಶುಭ ಕೋರುವ ಫ್ಲೇಕ್ಸ್ ಗಳನ್ನು ಹಾಕುವಂತಿಲ್ಲ ಎಂದು ಹೇಳಿದರು.ಆಹಾರ ಸುರಕ್ಷತಾ ಅಧಿಕಾರಿ ಸಂದೀಪ್ ಮಾತನಾಡಿ, ಭಕ್ತರ ಆರೋಗ್ಯದ ಹಿತ ದೃಷ್ಠಿಯಿಂದ ದೇವಾಲಯದ ಪ್ರಸಾದ ತಯಾರಿಸುವ ಉಗ್ರಾಣ,ದಾಸೋಹ ಭವನ ಹಾಗೂ ಲಾಡು ತಯಾರಿಸುವ ಸ್ಥಳಗಳನ್ನು ಪರಿಶೀಲನೆ ನಡೆಸಲಾಗಿದೆ,ತಯಾರಿಸಲಾದ ಆಹಾರದ ಸ್ಯಾಂಪಲ್ ಗಳನ್ನು ಮೈಸೂರಿನ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆಹಾರ ತಯಾರಿಸುವ ಬಾಣಸಿಗರಿಗೆ ಆಹಾರ ರಕ್ಷಣೆಯ ತರಬೇತಿ ನೀಡಲಾಗಿದೆ ಎಂದು ಹೇಳಿದರು.ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್, ತಾಪಂ ಇಒ ಜೆರಾಲ್ಡ್ ರಾಜೇಶ್, ಎ ಎಸ್.ಪಿ ಮಲ್ಲಿಕ್, ಟಿಎಚ್.ಒ ಈಶ್ವರ್, ದೇವಾಲಯದ ಇಒ ಜಗದೀಶ್ ಕುಮಾರ್, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ನಗರಸಭಾ ಆಯುಕ್ತ ವಿಜಯ್, ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್ ಇದ್ದರು.

Share this article