ಉದ್ದು ಬೆಳೆಗಾರನಿಗೂ ತಪ್ಪಿಲ್ಲ ಸಂಕಟ

KannadaprabhaNewsNetwork |  
Published : Sep 12, 2025, 12:06 AM IST
11ಎಚ್‌ಯುಬಿ21ರಸ್ತೆಯಲ್ಲಿ ಉದ್ದು ಒಣಹಾಕಿರುವ ರೈತ | Kannada Prabha

ಸಾರಾಂಶ

ಈ ವರ್ಷ ರೈತರು ಮುಂಗಾರು ಮಳೆಯಿಂದ ಒಂದಿಲ್ಲ ಒಂದು ಸಮಸ್ಯೆ ಎದುರಿಸುವಂತಾಗಿದೆ. ಮೊದಲು ಹೆಸರು ಬೆಳೆ ಫಸಲು ಕೈ ಕೊಟ್ಟಿತು. ಉದ್ದು ಇಳುವರಿಯೂ ಹೇಳಿಕೊಳ್ಳುವಷ್ಟು ಬಂದಿಲ್ಲ.

ರಫೀಕ್ ಕಲೇಗಾರ

ಅಣ್ಣಿಗೇರಿ: ಹೆಸರು ಬೆಳೆದು ಕೈಸುಟ್ಟುಕೊಂಡಿರುವ ಅಣ್ಣಿಗೇರಿ ಭಾಗದ ರೈತರು, ಇದೀಗ ಉದ್ದಿನ ಬೆಲೆ ಇ‍ಳಿಕೆಯಿಂದ ಕಂಗಾಲಾಗಿದ್ದಾರೆ. ಸತತ ಮಳೆಯಿಂದ ಅತಿ ಕಡಿಮೆ ಪ್ರಮಾಣದಲ್ಲಿ ಇಳುವರಿ ಬಂದಿದ್ದು, ಇದೀಗ ರಾಶಿ ಮಾಡಿ ಮಾರುಕಟ್ಟೆಗೆ ತಂದರೆ ದರ ಕಡಿಮೆಯಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ವರ್ಷ ರೈತರು ಮುಂಗಾರು ಮಳೆಯಿಂದ ಒಂದಿಲ್ಲ ಒಂದು ಸಮಸ್ಯೆ ಎದುರಿಸುವಂತಾಗಿದೆ. ಮೊದಲು ಹೆಸರು ಬೆಳೆ ಫಸಲು ಕೈ ಕೊಟ್ಟಿತು. ಉದ್ದು ಇಳುವರಿಯೂ ಹೇಳಿಕೊಳ್ಳುವಷ್ಟು ಬಂದಿಲ್ಲ. ಕಳೆದ ವರ್ಷ ಕ್ವಿಂಟಲ್‌ಗೆ ₹7 ಸಾವಿರದಿಂದ ₹8 ಸಾವಿರದ ವರೆಗೂ ಮಾರಾಟವಾಗಿತ್ತು. ಕಳೆದ ಬಾರಿ ಎಕರೆಗೆ ಆರು ಕ್ವಿಂಟಲ್‌ಗಿಂತ ಹೆಚ್ಚಿನ ಇ‍ಳುವರಿ ಬಂದಿತ್ತು. ಈ ಬಾರಿ ಮಳೆಯಿಂದ ಇಳುವರಿ ಕುಂಠಿತವಾಗಿದ್ದಲ್ಲದೆ ಕ್ವಿಂಟಲ್‌ಗೆ ₹5000 ರಿಂದ ₹6000 ಮಾರಾಟವಾಗುತ್ತಿದೆ. ಹೀಗಾಗಿ, ರೈತರು ಇ‍ಳುವರಿ ಕುಂಠಿತ ಮತ್ತು ದರದಲ್ಲಿ ಕುಸಿತದಿಂದ ಕಂಗಾಲಾಗಿದ್ದಾರೆ.

ಸದ್ಯದ ದರದಲ್ಲಿ ಮಾರಾಟ ಮಾಡಿದರೆ ಬಿತ್ತನೆ ಮತ್ತು ಬೀಜ, ಗೊಬ್ಬರಕ್ಕೆ ಹಾಕಿದ ಹಣವೂ ವಾಪಸ್ ಬಾರದಂತಾಗಿದೆ ಎನ್ನುತ್ತಾರೆ ರೈತರು.

ಬೆ‍‍ಳೆಹಾನಿ ಪರಿಹಾರಕ್ಕಾಗಿ ನಿರಂತರ ಹನ್ನೊಂದು ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ನಿರಂತರ ಮಳೆಯಿಂದ ಹೆಸರು, ಸೊಯಾಬಿನ್, ಹತ್ತಿ, ಉಳ್ಳಾಗಡ್ಡಿ ಹಾಳಾಗಿದೆ. ಉದ್ದು ರೈತರ ಕೈ ಹಿಡಿಯುತ್ತದೆ ಎಂದರೆ ದರ ಕಡಿಮೆ ಆಗಿದ್ದರಿಂದ ಅದು ಕೂಡ ನಿರಾಸೆಯುಂಟು ಮಾಡಿದೆ. ಸರ್ಕಾರ ಬೆಳೆ ಪರಿಹಾರ ಘೋಷಣೆ ಮಾಡುವ ಭರವಸೆ ನೀಡಿದೆ. ಪರಿಹಾರ ಎಷ್ಟು ಯಾವಾಗ ಬರುತ್ತದೆ ಎನ್ನುವುದು ತಿಳಿಯದಾಗಿದೆ ಎನ್ನುತ್ತಾರೆ ತಾಲೂಕು ರೈತ ಹೋರಾಟ ಸಮಿತಿ ಸದಸ್ಯ ಭಗವಂತಪ್ಪ ಪುಟ್ಟನವರ.

ಹೆಸರು ಅಂತೂ ಹಾನಿ ಆತ್ರಿ. ಉದ್ದಾದರೂ ಒಳ್ಳೆ ಬೆಲೆ ಐತಿ ಅಂದ್ರ ಅದರ ಬೆಲೆನೂ ಕಡಿಮೆ ಆಗೈತ್ರಿ. ಹಿಂಗಾದ್ರ ರೈತರ ಪರಿಸ್ಥಿತಿ ಹೆಂಗ್ರೀಸರ್ಕಾರ ? ಆದಷ್ಟು ಲಗೂನ ರೈತರಿಗೆ ಪರಿಹಾರ ಕೊಡಬೇಕು ಎಂದು ರೈತ ಬಾಳಪ್ಪ ನರಗುಂದ ಹೇಳಿದರು.

ಕಳೆದ ವರ್ಷ ಇದೇ ಸಂದರ್ಭದಲ್ಲಿ ನಮ್ಮ ಅಂಗಡಿಗೆ 700ರಿಂದ 800 ಚೀಲ ಉದ್ದು ಬರುತ್ತಿತ್ತು. ಈ ವರ್ಷ ಅತಿವೃಷ್ಟಿಯಿಂದ ಬಹಳ ಕಡಿಮೆ ಉದ್ದು ಬಂದಿದೆ. ಉತ್ತಮ ಗುಣಮಟ್ಟ ಉದ್ದಿಗೆ ಐದರಿಂದ ಆರು ಸಾವಿರ, ಕಪ್ಪಾಗಿರುವ ಉದ್ದಿಗೆ ಎರಡೂವರೆಯಿಂದ ಮೂರು ಸಾವಿರ ದರವಿದೆ ಎಂದು ದಲಾಲಿ ಅಂಗಡಿ ಮಾಲಿಕ ಶಿವಾನಂದ ಹೇಳಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ