ಅರಣ್ಯ ಸಂರಕ್ಷಕರು ನಾಡಿನ ಹಸಿರಿನ ಹರಿಕಾರರು: ನ್ಯಾ. ಗಂಗಾಧರ

KannadaprabhaNewsNetwork |  
Published : Sep 12, 2025, 12:06 AM IST
ಕಾರ್ಯಕ್ರಮದಲ್ಲಿ ನ್ಯಾ. ಗಂಗಾಧರ.ಎಂ.ಸಿ ಮಾತನಾಡಿದರು. | Kannada Prabha

ಸಾರಾಂಶ

ನಾಡಿನ ಹಸಿರಿನ ನಿಜವಾದ ಹರಿಕಾರರು ಅರಣ್ಯ ಸಂರಕ್ಷಕರು ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ ಎಂ.ಸಿ. ಹೇಳಿದರು.

ಗದಗ: ನಾಡಿನ ಹಸಿರಿನ ನಿಜವಾದ ಹರಿಕಾರರು ಅರಣ್ಯ ಸಂರಕ್ಷಕರು ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ ಎಂ.ಸಿ. ಹೇಳಿದರು.ತಾಲೂಕಿನ ಬಿಂಕದಕಟ್ಟಿಯಲ್ಲಿ ಗುರುವಾರ ಅರಣ್ಯ ಇಲಾಖೆಯಿಂದ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಜರುಗಿದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಡಿನ ಅರಣ್ಯ ಸಂಪತ್ತನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಕರ್ನಾಟಕ ಅರಣ್ಯ ಇಲಾಖೆ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಅವರ ತ್ಯಾಗ ಬಲಿದಾನ ನಾವೆಲ್ಲರೂ ನೆನೆಯುವ ಮೂಲಕ ಅರಣ್ಯ ಸಂರಕ್ಷಣೆಗೆ ಶ್ರಮಿಸಿದ ಸರ್ವರಿಗೂ ಆಭಾರಿಗಳಾಗಿರೋಣ ಎಂದರು.ಅರಣ್ಯ ಸಂರಕ್ಷಣೆಯಲ್ಲಿ ಹುತಾತ್ಮರಾದವರ ತ್ಯಾಗ ಬಲಿದಾನ ರಾಷ್ಟ್ರಕ್ಕೆ ಆದ ನಷ್ಟ. ನೈಸರ್ಗಿಕ ಸಂಪತ್ತು ರಕ್ಷಣೆ ಕಾರ್ಯ ನಮ್ಮೆಲ್ಲರದ್ದು. ಪ್ರಕೃತಿ ಇಂದು ನಮಗೆಲ್ಲ ಶುದ್ಧ, ಸುಂದರ ವಾತಾವರಣ ಕಲ್ಪಿಸಿದೆ. ಇದರ ರಕ್ಷಣೆಯಲ್ಲಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಶ್ರಮ ಅಪಾರವಾಗಿದೆ ಎಂದರು.

ಇಂದು ಹುತಾತ್ಮರನ್ನು ಕೇವಲ ಸ್ಮರಿಸುವ ದಿನವಲ್ಲ. ಜೊತೆಗೆ ನಾವೆಲ್ಲರೂ ಪರಿಸರ ಸಂರಕ್ಷಣೆ ಹೊಣೆ ಹೊರುವ ದಿನ. ನಿರಂತರವಾಗಿ ನಡೆಯುವ ಅಕ್ರಮ ಪ್ರಾಣಿ ಬೇಟೆ ತಡೆಯಬೇಕು. ಪ್ರಕೃತಿಯಲ್ಲಿನ ಒಂದಿಲ್ಲೊಂದು ಲಾಭ ಪಡೆಯುವ ನಾವೆಲ್ಲರೂ ಪ್ರಕೃತಿ ಸಂರಕ್ಷಣೆ ಮಾಡುವ ಹೊಣೆಗಾರಿಕೆ ನಿರ್ವಹಿಸೋಣ ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ನಾವಿಂದು ಪರಿಸರ ಬದಲಾವಣೆಯಿಂದಾಗುವ ಅನಾಹುತಗಳನ್ನು ಎದುರಿಸುತ್ತಿದ್ದೇವೆ. ಪರಿಸರ ಸಂರಕ್ಷಣೆಯ ಕಾಳಜಿ ಹೊಣೆಗಾರಿಕೆಯನ್ನು ನಿಭಾಯಿಸುತ್ತಿಲ್ಲ. ಮನುಷ್ಯನನ್ನು ಬಿಟ್ಟು ಎಲ್ಲವನ್ನೂ ಸಹ ಪರಿಸರವೆಂದು ಪರಿಗಣಿತವಾಗುತ್ತದೆ. ಅಂತಹ ಪರಿಸರದ ಮೇಲೆ ಮಾನವನ ಅತಿಯಾದ ದುರಾಸೆಯಿಂದಾಗಿ ಹಾನಿ ಮಾಡುತ್ತಾ ಪ್ರಕೃತಿ ಅಸಮತೋಲನಕ್ಕೆ ಕಾರಣರಾಗಿದ್ದೇವೆ ಎಂದರು.ಮನುಷ್ಯನ ಅಗತ್ಯತೆಗಳು ಅಗಾಧವಾಗಿ ಪರಿಸರ ಸಂಪತ್ತು ವಿನಾಶದತ್ತ ಸಾಗಿದೆ. ಅರಣ್ಯ ಹುತಾತ್ಮರು ಪ್ರಾಣಿಗಳಿಂದ ಆದವರು ಕಡಿಮೆ. ಮನುಷ್ಯರಿಂದಲೇ ಹತ್ಯೆಯಾದವರ ಸಂಖ್ಯೆ ಅಧಿಕವಾಗಿದೆ. ಪರಿಸರ ಸಂರಕ್ಷಣೆಯೊಂದಿಗೆ ನಾಳಿನ ಭವಿಷ್ಯದ ಪೀಳಿಗೆಗೆ ಉತ್ತಮ ಪ್ರಕೃತಿ ನೀಡುವ ವಾಗ್ದಾನ ನಮ್ಮದಾಗಲಿ ಎಂದು ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಮಾತನಾಡಿ, ನಮ್ಮ ಉತ್ತಮ ಭವಿಷ್ಯಕ್ಕಾಗಿ ತಮ್ಮ ತ್ಯಾಗ ಬಲಿದಾನದ ಮೂಲಕ ಅರಣ್ಯ ಸಂರಕ್ಷಣೆ ಮಾಡಿದವರನ್ನು ನೆನೆಯೋಣ. ಅರಣ್ಯ ಸಂಪತ್ತು ಕೇವಲ ಮರಗಳು, ಪ್ರಾಣಿಗಳಷ್ಟೇ ಅಲ್ಲ. ಅರಣ್ಯ ಇಲ್ಲದೇ ಮಳೆಯೂ ಇಲ್ಲ, ಜೀವವೂ ಇಲ್ಲ ಎಂಬುದನ್ನು ನಾವೆಲ್ಲರೂ ಅರಿತು ಸಂರಕ್ಷಣೆ ಕಾರ್ಯದಲ್ಲಿ ನಮ್ಮದೇ ಆದ ಕೊಡುಗೆ ನೀಡೋಣ ಎಂದರು.

ರಾಜ್ಯದಲ್ಲಿ 1966ರಿಂದ ಈವರೆಗೆ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರತರಾಗಿದ್ದ 62 ನೌಕರರು ಹುತಾತ್ಮರಾಗಿದ್ದು ಅವರೆಲ್ಲರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ. ಬಿಂಕದಕಟ್ಟಿಯಲ್ಲಿ ಅರಣ್ಯ ಹುತಾತ್ಮರ ಸ್ಮಾರಕ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಮುಖ್ಯ ಅತಿಥಿಗಳಿಂದ ಹಾಗೂ ವಿವಿಧ ರಂಗಗಳ ಪ್ರತಿನಿಧಿಗಳಿಂದ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಣೆ ನೆರವೇರಿತು. ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಹುತಾತ್ಮರಾದವರಿಗೆ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಮೌನಾಚರಣೆ ಮಾಡಲಾಯಿತು.

ಈ ವೇಳೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹಾಂತೇಶ ಸಜ್ಜನರ, ಉಪ ವಿಭಾಗಾಧಿಕಾರಿ ಗಂಗಪ್ಪ.ಎಂ, ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಚಂದ್ರಹಾಸ ವೆರ್ಣೆಕರ್, ವಾರ್ತಾಧಿಕಾರಿ ವಸಂತ ಮಡ್ಲೂರ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಪ್ರಕಾರ ಪವಾಡಿಗೌಡ್ರ, ಮೇಘನಾ.ಎಚ್, ವೀರೇಂದ್ರ ಮರಿಸಬಣ್ಣವರ, ಮಂಜುನಾಥ ಮೇಗಳಮನಿ, ರಾಮಪ್ಪ ಪೂಜಾರ, ಸ್ನೇಹಾ ಕೊಪ್ಪಳ, ವೀರಭದ್ರಪ್ಪ ಕುಂಬಾರ, ಅನ್ವರ.ಕೆ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ