ಬಳ್ಳಾರಿ ಜಿಲ್ಲೆಯಲ್ಲಿ ಧಾರಾಕಾರ ಮಳೆ; 4 ಮನೆಗಳು ಭಾಗಶಃ ಹಾನಿ

KannadaprabhaNewsNetwork |  
Published : Sep 12, 2025, 12:06 AM IST
ಬಳ್ಳಾರಿಯಲ್ಲಿ ಗುರುವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು. ಮಳೆಯ ನಡುವೆ ದ್ವಿಚಕ್ರವಾಹನ ಸವಾರರು ಸಂಚರಿಸುತ್ತಿರುವ ದೃಶ್ಯ ಕಂಡು ಬಂತು.  | Kannada Prabha

ಸಾರಾಂಶ

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ತಡರಾತ್ರಿ ಧಾರಾಕಾರ ಮಳೆ ಸುರಿದಿದೆ. ಗುರುವಾರ ಬೆಳಗ್ಗೆಯೂ ನಗರದ ಕೆಲವೆಡೆ ಧಾರಾಕಾರ, ಜಿಲ್ಲೆಯ ಕೆಲವೆಡೆ ತುಂತುರು ಮಳೆಯಾಗಿದೆ.

ಕನ್ನಡಪ್ರಭವಾರ್ತೆ ಬಳ್ಳಾರಿ

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ತಡರಾತ್ರಿ ಧಾರಾಕಾರ ಮಳೆ ಸುರಿದಿದೆ. ಗುರುವಾರ ಬೆಳಗ್ಗೆಯೂ ನಗರದ ಕೆಲವೆಡೆ ಧಾರಾಕಾರ, ಜಿಲ್ಲೆಯ ಕೆಲವೆಡೆ ತುಂತುರು ಮಳೆಯಾಗಿದೆ.

ಸತತ ಮಳೆಯಿಂದಾಗಿ ಜಿಲ್ಲೆಯ ನಾಲ್ಕು ಮನೆಗಳು ಭಾಗಶಃ ಕುಸಿತವಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

ಬುಧವಾರ ರಾತ್ರಿ ಸಿಡಿಲು-ಗುಡುಗು ಆರ್ಭಟದೊಂದಿಗೆ ಶುರುಗೊಂಡ ಮಳೆ ಮಧ್ಯರಾತ್ರಿವರೆಗೆ ನಿರಂತರವಾಗಿ ಸುರಿಯಿತು. ಇದರಿಂದ ನಗರದ ತಗ್ಗು ಪ್ರದೇಶಗಳಲ್ಲಿ ನೀರು ಹರಿದು ಜನರು ಪರದಾಡುವಂತಾಯಿತು. ರಸ್ತೆಗಳಲ್ಲಿನ ಗುಂಡಿಗಳಲ್ಲಿ ಮಳೆನೀರು ಭರ್ತಿಯಾಗಿ ಪ್ರಯಾಣ ಸವಾರರು ಪರದಾಡುವ ಸ್ಥಿತಿ ಕಂಡು ಬಂತು. ಮಳೆ-ಗಾಳಿಯಿಂದಾಗಿ ನಗರದ ಅಲ್ಲಲ್ಲಿ ವಿದ್ಯುತ್ ಕಂಬಗಳು ಬಾಗಿದ್ದು ನಗರದ ಕೆಲ ಪ್ರದೇಶಗಳಲ್ಲಿ ಇಡೀ ರಾತ್ರಿ ವಿದ್ಯುತ್ ವ್ಯತ್ಯಯವಾಗಿತ್ತು. ಗುರುವಾರ ಸಂಜೆವರೆಗೂ ವಿದ್ಯುತ್ ಕಣ್ಣುಮುಚ್ಚಾಲೆ ಮುಂದುವರಿದಿತ್ತು. ಕಳೆದ 24 ತಾಸಿನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಮಳೆಯ ಪೈಕಿ ಕಂಪ್ಲಿ ತಾಲೂಕಿನಲ್ಲಿ 45.9 ಮಿಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಸುರಿದ ಅತಿ ಹೆಚ್ಚು ಮಳೆಯಾಗಿದೆ. ಕಂಪ್ಲಿ ತಾಲೂಕಿನಲ್ಲಿ 19.5 ಮಿ.ಮೀ ಸಾಮಾನ್ಯ ಮಳೆಯ ನಿರೀಕ್ಷೆಯಿತ್ತು. ಕುರುಗೋಡು 26.8 ಮಿಮೀ, ಸಿರುಗುಪ್ಪ 25.9 ಮಿಮೀ, ಸಂಡೂರು 23.6 ಮಿಮೀ ಹಾಗೂ ಬಳ್ಳಾರಿ ತಾಲೂಕಿನಲ್ಲಿ 25.8 ಮಿಮೀ ಮಳೆಯಾಗಿದೆ. ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ, ಪಿ.ಡಿ. ಹಳ್ಳಿ, ಭೈರದೇವನಹಳ್ಳಿ, ಸಂಗನಕಲ್ಲು, ಯರಗುಡಿ, ಕಪ್ಪಗಲ್ಲು ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಸಂಡೂರು ತಾಲೂಕಿನ ಕುರೇಕುಪ್ಪ, ಮೆಟ್ರಿಕಿ, ಸುಗ್ಗೇನಹಳ್ಳಿಯಲ್ಲಿ ಉತ್ತಮ ಮಳೆಯಾಗಿದೆ ಎಂದು ವರದಿಯಾಗಿದೆ.ಮತ್ತೆ ಮಳೆ ಬಂದರೆ ರೈತರಿಗೆ ಸಂಕಷ್ಟ:

ಬುಧವಾರ ರಾತ್ರಿ ಸುರಿದ ಮಳೆಯಿಂದ ರೈತರಿಗೆ ಅನುಕೂಲವಾಗಿದೆಯಾದರೂ ಮತ್ತೊಂದು ಮಳೆಯಾದರೆ ಬೆಳೆಗಳಿಗೆ ಹಾನಿಯಾಗುವ ಆತಂಕ ರೈತರದ್ದು. ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿವರ್ಷ ಭತ್ತ ಹಾಗೂ ಒಣ ಮೆಣಸಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಕಳೆದ 2 ವರ್ಷಗಳಿಂದ ಒಣ ಮೆಣಸಿನಕಾಯಿಗೆ ದರ ಇಲ್ಲದೆ ರೈತರು ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಈ ಬಾರಿ ಒಣಮೆಣಸಿನಕಾಯಿ ಬೆಳೆಯಿಂದ ದೂರ ಸರಿದು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.65ರಷ್ಟು ಒಣ ಮೆಣಸಿನಕಾಯಿ ಬಿತ್ತನೆ ಕಡಿಮೆಯಾಗಿದೆ. ಕಳೆದ ಒಂದು ವಾರದಿಂದ ಮೋಡ ಮುಸುಕಿದ ವಾತಾವರಣವಿದ್ದು, ಮಳೆಯು ಮುಂದುವರಿದರೆ ಭತ್ತ ಹಾಗೂ ಮೆಣಸಿನಕಾಯಿ ಬೆಳೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇತ್ತೀಚೆಗೆ ನಾಟಿ ಮಾಡಿದ ಭತ್ತಕ್ಕಿಂತಲೂ ಕಳೆದ ಎರಡು ತಿಂಗಳ ಹಿಂದೆ ನಾಟಿಯಾದ ಬೆಳೆಗೆ ಸುಳಿರೋಗ ಹಾಗೂ ಒಣ ಮೆಣಸಿನಕಾಯಿಗೆ ಕೊಳೆರೋಗ ಬರಲಿದೆ. ಇದರಿಂದ ಇಳುವರಿ ಸಹ ತೀರಾ ಇಳಿಮುಖಗೊಳ್ಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ತಾಲೂಕಿನ ಚೇಳ್ಳಗುರ್ಕಿ, ಜೋಳದರಾಶಿ, ಕಾರೇಕಲ್ಲು, ವೀರಾಪುರ, ಮೀನಳ್ಳಿ ಸೇರಿದಂತೆ ಬಳ್ಳಾರಿ ತಾಲೂಕಿನ ಮಳೆಯಾಶ್ರಿತ ಜಮೀನುಗಳಿಗೆ ಮಳೆರಾಯನ ಆಗಮನ ಖುಷಿ ನೀಡಿದೆ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ