ಬ್ಯಾರೇಜ್‌ ಭರ್ತಿಯಾದರೂ ತಪ್ಪಲಿಲ್ಲ ಗದಗ-ಬೆಟಗೇರಿ ನೀರಿನ ಗೋಳು

KannadaprabhaNewsNetwork |  
Published : Aug 05, 2025, 01:30 AM IST
ಪೋಟೋ ಇದೆ. | Kannada Prabha

ಸಾರಾಂಶ

ಗದಗ-ಬೆಟಗೇರಿ ಅವಳಿ ನಗರಕ್ಕೆ ಪೂರೈಕೆಯಾಗುವ ಕುಡಿವ ನೀರಿನ ಮೂಲವಾದ ತುಂಗಭದ್ರಾ ನದಿಗೆ ಅಡ್ಡವಾಗಿ ಮುಂಡರಗಿ ತಾಲೂಕಿನಲ್ಲಿ ನಿರ್ಮಿಸಿರುವ ಸಿಂಗಟಾಲೂರು ಬ್ಯಾರೇಜ್ ಸಂಪೂರ್ಣ ಭರ್ತಿಯಾದರೂ ಗದಗ ಬೆಟಗೇರಿ ಅವಳಿ ನಗರದಲ್ಲಿ ಇಂದಿಗೂ 20ರಿಂದ 25 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ವರದಿ

ಗದಗ:ಗದಗ-ಬೆಟಗೇರಿ ಅವಳಿ ನಗರಕ್ಕೆ ಪೂರೈಕೆಯಾಗುವ ಕುಡಿವ ನೀರಿನ ಮೂಲವಾದ ತುಂಗಭದ್ರಾ ನದಿಗೆ ಅಡ್ಡವಾಗಿ ಮುಂಡರಗಿ ತಾಲೂಕಿನಲ್ಲಿ ನಿರ್ಮಿಸಿರುವ ಸಿಂಗಟಾಲೂರು ಬ್ಯಾರೇಜ್ ಸಂಪೂರ್ಣ ಭರ್ತಿಯಾದರೂ ಗದಗ ಬೆಟಗೇರಿ ಅವಳಿ ನಗರದಲ್ಲಿ ಇಂದಿಗೂ 20ರಿಂದ 25 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಿಂಗಟಾಲೂರ ಬ್ಯಾರೇಜ್‌ನ ಒಟ್ಟು ಸಂಗ್ರಹ ಸಾಮರ್ಥ್ಯ 3.12 ಟಿಎಂಸಿ ಇದ್ದು, ಪ್ರಸ್ತುತ 2.17 ಟಿಎಂಸಿ ನೀರು ಸಂಗ್ರಹವಾಗಿದೆ. ಹೆಚ್ಚುವರಿ ನೀರನ್ನು ಹೊರಹಾಕಲು ಬ್ಯಾರೇಜ್‌ನ 26 ಗೇಟ್‌ಗಳ ಪೈಕಿ 12 ಗೇಟ್‌ಗಳನ್ನು ತೆರೆಯಲಾಗಿದೆ. ಆದರೂ, ಅವಳಿ ನಗರಗಳಿಗೆ ಕಳೆದ ಎರಡು-ಮೂರು ತಿಂಗಳುಗಳಿಂದ ಸಮರ್ಪಕ ನೀರು ಪೂರೈಕೆಯಾಗದಿರುವುದು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ವಾರಕ್ಕೆ 2-3 ಬಾರಿ ರಸ್ತೆ ತಡೆ, ಪ್ರತಿಭಟನೆಗಳು ನಡೆದರೂ, ಜಿಲ್ಲಾಡಳಿತ ಮತ್ತು ನಗರಸಭೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸಾರ್ವಜನಿಕರ ಅಳಲನ್ನು ಕೇಳುವವರೇ ಇಲ್ಲದಂತಾಗಿದೆ.

ಹಿನ್ನೆಲೆ: ​2014-15ರಲ್ಲಿ ರು. 24.47 ಕೋಟಿ ವೆಚ್ಚದಲ್ಲಿ ಆರಂಭಗೊಂಡ 24/7 ನಿರಂತರ ನೀರು ಪೂರೈಕೆ ಯೋಜನೆ, 2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಉದ್ಘಾಟನೆಗೊಂಡರೂ ಸಂಪೂರ್ಣ ವಿಫಲವಾಗಿದೆ. ಯೋಜನೆ ಕಳಪೆ ಕಾಮಗಾರಿಯಿಂದ ಕೂಡಿದ್ದು, 2025ರ ವರೆಗೂ ಯಾವುದೇ ಮನೆಗೆ ನಿರಂತರ ನೀರು ಪೂರೈಕೆಯಾಗದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಜನರು 24/7 ನೀರು ಬೇಡ, ಕನಿಷ್ಠ ವಾರಕ್ಕೊಮ್ಮೆ ಸರಿಯಾಗಿ ನೀರು ಪೂರೈಕೆ ಮಾಡಿ ಎಂದು ಪ್ರತಿಭಟನೆಯ ಮೂಲಕ ಬೇಡಿಕೊಂಡರೂ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ.

ಕಾರಣಗಳೇನು?:ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಸುವ ಹಮ್ಮಿಗಿ, ಕೊರ್ಲಹಳ್ಳಿ ಹಾಗೂ ಗಂಗಾಪುರ ಗ್ರಾಮಗಳ ನಡುವೆ ಇರುವ ಮುಖ್ಯ ಪೈಪ್‌ಲೈನ್‌ ನಲ್ಲಿ ಪದೇ ಪದೇ ಸೋರಿಕೆಯಾಗುತ್ತಿರುವುದು, ಇದರಿಂದಾಗಿ ನಗರಕ್ಕೆ ನೀರು ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡು, ಕೆಲವು ವಾರ್ಡ್‌ಗಳಲ್ಲಿ 18-20 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಹಮ್ಮಿಗಿ ಮತ್ತು ಡಂಬಳದ ಪಂಪಿಂಗ್ ಸ್ಟೇಷನ್‌ಗಳಲ್ಲಿ ಇರುವ ಒಟ್ಟು 6 ಪಂಪ್‌ಗಳ ಪೈಕಿ ಕೇವಲ 2 ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಒಂದು ಪಂಪ್ ತಾಂತ್ರಿಕ ದೋಷದಿಂದ ನಿಂತರೆ, ಇಡೀ ನಗರಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತದೆ, ಏಕೆಂದರೆ ಯಾವುದೇ ಸ್ಟ್ಯಾಂಡ್‌ಬೈ ಪಂಪ್‌ಗಳನ್ನು ಪೂರೈಕೆ ಮಾಡುವ ಸಂಸ್ಥೆಗಳು ಹೊಂದಿರದೇ ಇರುವುದು ಸಮಸ್ಯೆಯ ಕಾರಣವಾಗಿದೆ.

ನೀರು ಪೂರೈಕೆ ಹೊಣೆ ಹೊತ್ತಿರುವ ನಗರ ನೀರು ಸರಬರಾಜು ಅಧಿಕಾರಿಗಳು ​ನಗರಸಭೆಗೆ ಪ್ರತಿದಿನ 30 ರಿಂದ 32 ಎಂಎಲ್‌ಡಿ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಪ್ರಸ್ತುತ 24ರಿಂದ 26 ಎಂಎಲ್ ಡಿ ನೀರು ಮಾತ್ರ ಪೂರೈಕೆಯಾಗುತ್ತಿದೆ. ಅದರಲ್ಲಿಯೂ ಪೈಪ್‌ಗಳಲ್ಲಿನ ಹೋಲ್‌ಗಳಿಂದ ವ್ಯಾಪಕವಾಗಿ ನೀರು ಸೋರಿಕೆಯಾಗುತ್ತಿದ್ದು, ಇದನ್ನು ತಪ್ಪಿಸುವ ಪ್ರಯತ್ನಗಳು ನಡೆಯುತ್ತಿಲ್ಲ.

ಗದಗ-ಬೆಟಗೇರಿ ಅವಳಿ ನಗರದ ನೀರಿನ ಸಮಸ್ಯೆ ಇವತ್ತು ನಿನ್ನೆಯದಲ್ಲ, ಇದು ತಾಂತ್ರಿಕ ಕಾರಣಗಳಿಂದ ಸೃಷ್ಟಿಯಾಗುತ್ತಿರುವ ಶಾಶ್ವತ ಸಮಸ್ಯೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಸಭೆಗಳನ್ನು ನಡೆಸಿ, ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ಸೂಚಿಸಿರುವುದು ಸ್ವಾಗತಾರ್ಹ. ಆದರೆ, ಪೈಪ್‌ಲೈನ್ ಸೋರಿಕೆ, ಕಾರ್ಯನಿರ್ವಹಿಸದ ಪಂಪ್‌ಗಳಂತಹ ತಾಂತ್ರಿಕ ಸಮಸ್ಯೆಗಳಿಗೆ ಮೊದಲು ಆದ್ಯತೆ ನೀಡಬೇಕು. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ವಿಶೇಷ ಅನುದಾನ ಮಂಜೂರು ಮಾಡಬೇಕು ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದರು.

ಪರಿಹಾರ ವಿಳಂಬವಾದರೆ ಆಕ್ರೋಶ ಹೆಚ್ಚಾಗುವ ಸಾಧ್ಯತೆ

ಸಿಂಗಟಾಲೂರು ಬ್ಯಾರೇಜ್‌ ಭರ್ತಿಯಾಗಿದ್ದರೂ, ದುರ್ಬಲ ನಿರ್ವಹಣೆ, ಕಳಪೆ ಕಾಮಗಾರಿ ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ಅವಳಿ ನಗರದ ಜನರು ನೀರಿಗಾಗಿ ನಿತ್ಯ ಪರಿತಪಿಸುವಂತಾಗಿದೆ. ಈ ಸಮಸ್ಯೆಗಳನ್ನು ಕೂಡಲೇ ಪರಿಹರಿಸದಿದ್ದರೆ, ಸಾರ್ವಜನಿಕರ ಆಕ್ರೋಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ