- ಹಾನಿ ಸ್ಥಳಗಳಿಗೆ ಭೇಟಿ ನೀಡಿ ಗ್ರಾಮಸ್ಥರು, ರೈತರ ಸಮಸ್ಯೆ ಆಲಿಸಿದ ಕೆ.ಎನ್.ಬಸವಂತಪ್ಪ
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಕೊಚ್ಚಿಹೋಗಿವೆ. ತರಕಾರಿ ಬೆಳೆ ಹಾನಿಯಾಗಿವೆ. ಇಷ್ಟೆಲ್ಲ ತೊಂದರೆ ಆಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಮಂಡಲೂರು, ಹುಣಸೆಕಟ್ಟೆ, ಕಾಟೇಹಳ್ಳಿ, ಚಿನ್ನಸಮುದ್ರ, ಲಕ್ಕಮುತ್ತೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಡೆರಾತ್ರಿ ಸುರಿದ ಧಾರಾಕಾರ ಮಳೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಅಣಜಿ ಹಳ್ಳ ರಭಸವಾಗಿ ಹರಿದು ಮಂಡಲೂರು-ಗೊಲ್ಲರಹಟ್ಟಿ ಸಂಪರ್ಕ ರಸ್ತೆ, ಮಂಡಲೂರು- ಲಕ್ಕ್ಕೆಮುತ್ತೇನಹಳ್ಳಿ ರಸ್ತೆ ಹಾಗೂ ಮಂಡಲೂರು- ಕಾಟೇಹಳ್ಳಿ ತಾಂಡಾ, ಕದರಪ್ಪನಹಟ್ಟಿ ರಸ್ತೆಗಳ ಸಂಪರ್ಕ ಸೇತುವೆಗಳು ನೀರಿನಲ್ಲಿ ಕೊಚ್ಚಿಹೋಗಿವೆ.ಅಲ್ಲದೇ, ಹುಣಸೆಕಟ್ಟೆ ಗ್ರಾಮದ ಶೇಖರಪ್ಪ 4 ಎಕರೆಯಲ್ಲಿ ಬೆಳೆದಿದ್ದ ಟೊಮೆಟೊ, ಮೆಣಸಿನಕಾಯಿ ನೀರಿನಲ್ಲಿ ಕೋಚಿಹೋಗಿವೆ. ಅಡಕೆ ತೋಟಗಳಿಗೂ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ಮಳೆಯಿಂದ ಇಷ್ಟೆಲ್ಲ ರಸ್ತೆಗಳು ಮತ್ತು ಬೆಳೆ ಹಾನಿಯಾಗಿದ್ದರೂ ಒಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ. ಶಾಸಕರು ಬಂದು ಪರಿಶೀಲನೆ ನಡೆಸಿದ್ದರೂ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಗ್ರಾಮಸ್ಥರಿಗೆ, ರೈತರಿಗೆ ಇಷ್ಟು ತೊಂದರೆ ಆಗಿದ್ದರೂ ಅವರ ಸಮಸ್ಯೆಗಳನ್ನು ಆಲಿಸುವ ಸೌಜನ್ಯವಿಲ್ಲ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವು, ರಮೇಶ್, ಕುಮಾರ್, ಗಿರೀಶ್, ನಾಗೇಂದ್ರಪ್ಪ, ಕಲ್ಲಿಂಗಪ್ಪ, ಕಂಟಪ್ಪ, ಪ್ರಕಾಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
-ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ