ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಭಾನುವಾರ ಸಂಚಾರವನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದರು.
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಭಾನುವಾರ ಸಂಚಾರವನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದರು.
4-5 ಗಂಟೆಗಳ ಕಾಲ ಟ್ರಾಫಿಕ್ ಜಾಮ್
ಎಚ್‌ಎಎಲ್ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆ, ಮಾಗಡಿ ರಸ್ತೆ ಸುತ್ತ ಸುಮಾರು 4-5 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡಿದರು. ಒಂದೆಡೆ ಟ್ರಾಫಿಕ್ ಸಮಸ್ಯೆ ಮತ್ತೊಂದೆಡೆ ಬಿಸಿಲಿನ ಬೇಗೆಗೆ ಸಿಲುಕಿ ವಾಹನ ಸವಾರರು ಹೈರಾಣಾದರು.
ಭಾನುವಾರ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ಸಂಚಾರಕ್ಕೆ ತಾತ್ಕಾಲಿಕವಾಗಿ ಬ್ರೇಕ್
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ನಗರದಲ್ಲಿ ಕೆಲವೆಡೆ ಸಂಚಾರಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿ ಪರ್ಯಾಯ ಮಾರ್ಗಗಳನ್ನು ಮಾಡಲಾಗಿತ್ತು. ಇದರಿಂದಾಗಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ವಾಹನ ಸವಾರರು ಮಂದಗತಿಯಲ್ಲಿ ಸಂಚರಿಸಿದರು. ನಗರದಿಂದ ಹೊರ ಹೋಗಲು ಮತ್ತು ಒಳಗಡೆ ಬರಲು ಉಪಯುಕ್ತವಾದಂತೆ ನೈಸ್ ರಸ್ತೆಯ ಸಂಚಾರವನ್ನು ನಿರ್ಬಂಧಿಸಿದ್ದರಿಂದ ನಗರದಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ಕಿ.ಮೀ.ಗಟ್ಟಲೆ ಸಂಚಾರ ದಟ್ಟಣೆಯಲ್ಲಿ ವಾಹನ ಸವಾರರು ಸಿಲುಕುವಂತಾಗಿತ್ತು.
ಪ್ರಧಾನಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಚ್‌ಎಎಲ್ ಸುತ್ತಮುತ್ತ, ಆರ್ಟ್ ಆಫ್ ಲಿವಿಂಗ್ ಸುತ್ತಮುತ್ತ ಸಂಚಾರ ನಿರ್ಬಂಧ ಹೇರಲಾಗಿತ್ತು. ಪ್ರಮುಖವಾಗಿ ನೈಸ್ ರಸ್ತೆಯಿಂದ ಹೋಗುವ ಮತ್ತು ಹೊರ ಬರುವ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದರಿಂದ ನಗರದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿತ್ತು. ಪ್ರಧಾನಿ ಅವರು ಎಚ್‌ಎಎಲ್ ಏರ್‌ಪೋರ್ಟ್‌ನಿಂದ ಸೋಮಪುರದ ಹೆಲಿಪ್ಯಾಡ್‌ಗೆ ಹೆಲಿಕ್ಯಾಪ್ಟರ್ ಮೂಲಕ ಹೋದರು. ಒಂದು ವೇಳೆ ರಸ್ತೆ ಮಾರ್ಗವಾಗಿ ತೆರಳಿದ್ದೆ ಆಗಿದ್ದರೆ ಮತ್ತಷ್ಟು ಸಂಚಾರ ದಟ್ಟಣೆ ಉಂಟಾಗುತ್ತಿತ್ತು.


