ಯುದ್ಧದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಭೀತಿ ಉಂಟಾಗಿರುವ ನಡುವೆಯೇ, ಎಚ್ಚರಿಕೆಯ ನುಡಿಗಳನ್ನು ಆಡಿರುವ ಪ್ರಧಾನಿ ನರೇಂದ್ರ ಮೋದಿ, ‘ಅಂತಾರಾಷ್ಟ್ರೀಯ ಸಂಘರ್ಷಗಳಿಂದ ಆಗುತ್ತಿರುವ ಬೆಲೆ ಏರಿಕೆಗಳನ್ನು ಎದುರಿಸಲು ಎಲ್ಲರ ಸಾಮೂಹಿಕ ಭಾಗೀದಾರಿಕೆ ಅಗತ್ಯವಾಗಿದೆ’ ಎಂದು ಹೇಳಿದ್ದಾರೆ.

ಹೈದರಾಬಾದ್‌: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಭೀತಿ ಉಂಟಾಗಿರುವ ನಡುವೆಯೇ, ಎಚ್ಚರಿಕೆಯ ನುಡಿಗಳನ್ನು ಆಡಿರುವ ಪ್ರಧಾನಿ ನರೇಂದ್ರ ಮೋದಿ, ‘ಅಂತಾರಾಷ್ಟ್ರೀಯ ಸಂಘರ್ಷಗಳಿಂದ ಆಗುತ್ತಿರುವ ಬೆಲೆ ಏರಿಕೆಗಳನ್ನು ಎದುರಿಸಲು ಎಲ್ಲರ ಸಾಮೂಹಿಕ ಭಾಗೀದಾರಿಕೆ ಅಗತ್ಯವಾಗಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಸನ್ನಿಹಿತವಾಗಿದೆ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಇದಲ್ಲದೆ, ಈ ಬೆಲೆ ಏರಿಕೆಯ ಆಘಾತ ಎದುರಿಸಲು ಮಿತವ್ಯಯ ಮಂತ್ರ ಪಠಿಸಿರುವ ಅವರು, ‘ಕೊರೋನಾ ಕಾಲದಂತೆ ಜನರು ಮನೆಯಿಂದ ಕೆಲಸ ಮಾಡುವ (ವರ್ಕ್‌ ಫ್ರಂ ಹೋಂ) ಪದ್ಧತಿಗಳನ್ನು ಪುನರುಜ್ಜೀವನಗೊಳಿಸಬೇಕು. ಇಂಧನ ಬಳಕೆ ಕಡಿತಗೊಳಿಸಬೇಕು ಮತ್ತು ದೇಶದ ವಿದೇಶಿ ವಿನಿಮಯ ಉಳಿತಾಯ ಆಗುವಂತೆ ಮಾಡಲು 1 ವರ್ಷದವರೆಗೆ ಮದುವೆ/ಸಮಾರಂಭಗಳಿಗೆ ಚಿನ್ನ ಖರೀದಿಸುವುದನ್ನು ತಪ್ಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ ಸುಮಾರು 70 ಡಾಲರ್‌ಗಳಿಂದ ಸುಮಾರು 126 ಡಾಲರ್‌ಗೆ ಏರಿದ್ದು, ಮೇ 15ರೊಳಗೆ ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆ ಸನ್ನಿಹಿತವಾಗಿದೆ ಎನ್ನಲಾಗಿದೆ. ಇದರ ನಡುವೆಯೇ ಮೋದಿ ಅವರ ಈ ಹೇಳಿಕೆ ಬಂದಿದೆ.

ಮೋದಿ ಹೇಳಿದ್ದೇನು?:

ತೆಲಂಗಾಣದಲ್ಲಿ 9,400 ಕೋಟಿ ರು.ಗಳ ಅಭಿವೃದ್ಧಿ ಯೋಜನೆಗಳಿಗೆ ವರ್ಚುವಲ್‌ ಮೂಲಕ ಚಾಲನೆ ನೀಡಿದ ಅ‍ವರು, ‘ಆಮದಾಗುವ ಪೆಟ್ರೋಲಿಯಂ ಉತ್ಪನ್ನಗಳನ್ನು ಜಾಗರೂಕವಾಗಿ ಬಳಸಬೇಕು. ಈ ರೀತಿಯ ನಡೆ ವಿದೇಶಿ ವಿನಿಮಯ ಉಳಿಸುವುದು ಮಾತ್ರವಲ್ಲದೆ, ಯುದ್ಧದ ಅಡ್ಡಪರಿಣಾಮ ತಗ್ಗಿಸಲೂ ನೆರವಾಗುತ್ತದೆ’ ಎಂದರು.

‘ಪೆಟ್ರೋಲ್ ಮತ್ತು ಡೀಸಲ್ ಬಳಕೆಯನ್ನು ಕಡಿಮೆ ಮಾಡಬೇಕು. ಇದಕ್ಕಾಗಿ:ಎಲ್ಲಿ ಲಭ್ಯವಿದೆಯೋ ಅಲ್ಲಿ ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆ ಬಳಸಬೇಕು. ಖಾಸಗಿ ವಾಹನ ಬಳಸುವಾಗ ಕಾರ್ ಪೂಲಿಂಗ್ ಮಾಡಬೇಕು. ಸರಕು ಸಾಗಾಟಕ್ಕೆ ರೈಲು ಸಾರಿಗೆಯನ್ನು ಆದ್ಯತೆಯಾಗಿ ಬಳಸಬೇಕು. ಸಾಧ್ಯವಾದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಬೇಕು. ಈ ರೀತಿಯ ಕೋವಿಡ್ ಕಾಲದ ಉಳಿತಾಯ ಮತ್ತು ದಕ್ಷತಾ ಕ್ರಮಗಳನ್ನು ರಾಷ್ಟ್ರೀಯ ಹಿತದೃಷ್ಟಿಯಿಂದ ಮತ್ತೆ ಅಳವಡಿಸಿಕೊಳ್ಳಬೇಕು’ ಎಂದು ಕರೆ ನೀಡಿದರು

ಇದಲ್ಲದೆ, ‘ಕೋವಿಡ್‌ ಕಾಲದಂತೆ ವರ್ಕ್ ಫ್ರಮ್ ಹೋಮ್ ಅಳವಡಿಸಿಕೊಳ್ಳಬೇಕು. ಆನ್‌ಲೈನ್ ಸಮ್ಮೇಳನ/ವರ್ಚುವಲ್ ಮೀಟಿಂಗ್‌ಗಳನ್ನು ಮಾಡಬೇಕು’ ಎಂದೂ ಮನವಿ ಮಾಡಿದರು.

ವಿದೇಶಿ ವಿನಿಮಯ ಮೀಸಲು ಉಳಿಸಲು ನಾಗರಿಕರು ಸಹಕರಿಸುವಂತೆ ಕೋರಿದ ಮೋದಿ, ‘ಅನಗತ್ಯ ವಿದೇಶ ಪ್ರಯಾಣ ಮಾಡಬಾರದು. ವಿದೇಶಿ ರಜೆ ಮತ್ತು ವಿದೇಶಿ ಮದುವೆಗಳನ್ನು ತಪ್ಪಿಸಬೇಕು. ದೇಶೀಯ ಪ್ರವಾಸ ಮತ್ತು ದೇಶದೊಳಗೆಯೇ ಉತ್ಸವ-ಆಚರಣೆಗಳನ್ನು ನಡೆಸುವುದಕ್ಕೆ ಆದ್ಯತೆ ನೀಡಬೇಕು. 1 ವರ್ಷದವರೆಗೆ ಅನಗತ್ಯ ಚಿನ್ನದ ಖರೀದಿಯನ್ನು ತಪ್ಪಿಸಬೇಕು. ಇದು ವಿದೇಶಿ ವಿನಿಮಯ ಹರಿವಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ’ ಎಂದು ಕೋರಿದರು.

‘ದೇಶೀಯ ಉತ್ಪನ್ನಗಳನ್ನು (ಮೇಡ್ ಇನ್ ಇಂಡಿಯಾ) ಆದ್ಯತೆ ನೀಡುವಂತೆ ಕೂಡ ಮೋದಿ ಒತ್ತಾಯಿಸಿದರು. ದೈನಂದಿನ ಬಳಕೆಯ ವಸ್ತುಗಳಾದ ಬ್ಯಾಗ್, ಅಕ್ಸೆಸರೀಸ್‌ಗಳನ್ನು ಸಹ ಸ್ಥಳೀಯವಾಗಿ ತಯಾರಾದವುಗಳನ್ನೇ ಖರೀದಿಸಬೇಕು’ ಎಂದರು.

ರೈತರಿಗೆ ಮನವಿ:

ಯುದ್ಧದಿಂದ ರಸಗೊಬ್ಬರ ಪೂರೈಕೆಗೂ ಏಟು ಬಿದ್ದಿರುವುದನ್ನು ಪ್ರಸ್ತಾಪಿಸಿದ ಅವರು, ‘ರಾಸಾಯನಿಕ ಗೊಬ್ಬರ ಬಳಕೆಯನ್ನು ಶೇ,50ರಷ್ಟು ಕಡಿಮೆ ಮಾಡಬೇಕು. ಸಹಜ ಕೃಷಿ (ನ್ಯಾಚುರಲ್ ಫಾರ್ಮಿಂಗ್) ಕಡೆಗೆ ಗಮನ ನೀಡಬೇಕು. ಈ ಮೂಲಕ ಮಣ್ಣಿನ ಆರೋಗ್ಯ ರಕ್ಷಿಸಬೇಕು ಮತ್ತು ಆಮದು ಅವಲಂಬನೆ ಕಡಿಮೆ ಮಾಡಬೇಕು’ ಎಂದರು.

‘ಡೀಸಲ್ ಪಂಪುಗಳ ಬದಲು ಸೌರಶಕ್ತಿ ಚಾಲಿತ ನೀರಾವರಿ ಪಂಪುಗಳನ್ನು ಹೆಚ್ಚಾಗಿ ಬಳಸಬೇಕು. ಈ ಮೂಲಕ ಎಲ್ಲರೂ ಒಗ್ಗಟ್ಟಿನಿಂದ ದೇಶದ ಆರ್ಥಿಕ ಸವಾಲುಗಳನ್ನು ಎದುರಿಸೋಣ. ಇಂದು, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ನಾವು ಆ ಅಭ್ಯಾಸಗಳನ್ನು ಪುನರಾರಂಭಿಸುವುದು ಇಂದಿನ ಅಗತ್ಯವಾಗಿದೆ. ನಾವು ಮತ್ತೊಮ್ಮೆ ಅವುಗಳಿಗೆ ಆದ್ಯತೆ ನೀಡಬೇಕು’ ಎಂದು ಕರೆ ನೀಡಿದರು.

‘ಕುಟುಂಬಗಳು ಎಣ್ಣೆ ಬಳಕೆ ಕಡಿಮೆ ಮಾಡುಬೇಕು’ ಎಂದು ಕೋರಿದ ಮೋದಿ ‘ಇದು ರಾಷ್ಟ್ರೀಯ ಆರ್ಥಿಕತೆಗೂ ವೈಯಕ್ತಿಕ ಆರೋಗ್ಯಕ್ಕೂ ಒಳ್ಳೆಯದು’ ಎಂದರು.

ಸರ್ಕಾರದಿಂದ ಕ್ರಮ:

ಕೇಂದ್ರ ಸರ್ಕಾರವು ಮೊದಲು ಎಲ್ಲರಿಗೂ ಎಲ್‌ಪಿಜಿ ಸಿಗುವಂತೆ ನೋಡಿಕೊಂಡಿದ್ದು, ಆ ಬಳಿಕ ಇದೀಗ ಕಡಿಮೆ ದರದಲ್ಲಿ ಪೈಪ್‌ಲೈನ್‌ ಮೂಲಕ ಗ್ಯಾಸ್‌ ಪೂರೈಕೆಗೆ ಗಮನ ಕೇಂದ್ರೀಕರಿಸಿದೆ. ಇದರ ಜತೆಗೆ ಸಿಎನ್‌ಜಿ ಆಧಾರಿತ ವ್ಯವಸ್ಥೆಗೂ ಉತ್ತೇಜನ ನೀಡುತ್ತಿದೆ. ಈ ಮೂರೂ ಪ್ರಯತ್ನಗಳಿಂದಾಗಿ ಭಾರತವು ಮಧ್ಯಪ್ರಾಚ್ಯ ಸಂಘರ್ಷದಿಂದ ಎದುರಾಗಿರುವ ಇಂಧನ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದರು.

ಮೋದಿ ಅಷ್ಟ ಸಂದೇಶ

ಬೆಲೆ ಏರಿಕೆ ಎದುರಿಸಲು ಸಾಮೂಹಿಕ ಭಾಗೀದಾರಿಕೆ ಅಗತ್ಯ

1. ಕೊರೋನಾ ಟೈಂ ರೀತಿ ವರ್ಕ್‌ ಫ್ರಂ ಹೋಮ್‌ ಮರುಜಾರಿ

2. ಆನ್‌ಲೈನ್‌, ವರ್ಚ್ಯುವಲ್‌ ಸಭೆ ನಡೆಸಲು ಕ್ರಮ ಕೈಗೊಳ್ಳಿ

3. ಸ್ವಂತ ವಾಹನ ಬಿಟ್ಟು ಬಸ್‌, ಮೆಟ್ರೋ, ರೈಲುಗಳನ್ನು ಬಳಸಿ

4. ಅನಗತ್ಯ ವಿದೇಶಿ ಪ್ರವಾಸ, ರಜೆ, ವಿದೇಶಿ ಮದುವೆ ತಪ್ಪಿಸಿ

5. ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡಲು ಹೋಗಬೇಡಿ

6. ಗೊಬ್ಬರ ಬಳಕೆ ಶೇ.50 ಕಡಿತ. ಸಾವಯವ ಕೃಷಿಗೆ ಆದ್ಯತೆ

7. ಕೃಷಿಗೆ ಡೀಸೆಲ್‌ ಬಿಟ್ಟು ಸೌರಶಕ್ತಿ ಪಂಪಸೆಟ್‌ ಬಳಕೆಗೆ ಆದ್ಯತೆ

8. ಕೋವಿಡ್‌ ಕಾಲದ ರೀತಿಯ ಮಿತವ್ಯಯ, ದಕ್ಷತೆ ಜಾರಿಯಾಗಬೇಕು