ರಾತ್ರಿಯಿಡಿ ಮಕ್ಕಳ್ ಬರೀ ಹೊಟ್ಟೀಲಿ ಮಲಗಿದ್ರೂ

KannadaprabhaNewsNetwork | Published : Apr 28, 2025 11:50 PM

ಸಾರಾಂಶ

ಅಬ್ಬಿಗೇರಿಯಲ್ಲಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಮಳೆ-ಗಾಳಿಗೆ ಸುಮಾರು 40 ಮನೆಗಳ ಚಾವಣಿ ಕಿತ್ತು ಹೋಗಿವೆ. 15 ವಿದ್ಯುತ್ ಕಂಬ ನೆಲಕ್ಕುರುಳಿವೆ. ಚಾವಣಿ ಹಾರಿದ್ದರಿಂದ ಮನೆಯಲ್ಲಿನ ಎಲ್ಲ ವಸ್ತುಗಳು ನೀರಿನಲ್ಲಿ ನೆನೆದಿವೆ. ಇದರಿಂದ ಜನರು ರಾತ್ರಿಯಿಡಿ ನರಕಯಾತನೆ ಅನುಭವಿಸಿದ್ದಾರೆ.

ಕೊಪ್ಪಳ:

ರಾತ್ರಿಯಿಡಿ ಮಕ್ಕಳು ಬರೀ ಹೊಟ್ಟೀಲಿ ಮಲಗಿದ್ರು. ಏನರ ಮಾಡಿಕೊಡೋಣಂದ್ರ ಅಡುಗೆ ಸಾಮಗ್ರಿ ಮಳಿಯ್ಯಾಗ್ ನೆನೆದಿದ್ದವು. ಮನೀ ಮಂದಿಗೆಲ್ಲಾ ಮಲಗಾಕ್‌ ಸೂರು ಇಲ್ಲದೇ ಕಂಡ ಕಣ್ಣೀರು ಬಂದ್ವಿರೀ.

ಇದು ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆ ಮೇಲ್ಚಾವಣಿ ಹಾರಿ ಬಯಲಿನಲ್ಲಿಯೇ ಆಶ್ರಯ ಪಡೆದ ಕುಟುಂಬಸ್ಥರ ಸಂಕಟದ ನುಡಿಗಳು. ನಮ್ಮ ಮನೆ ಬಿಟ್ಟು ಬೇರೆಡೆ ಕಾಲಿಡಲು ಸಹ ಹೆದರಿಕೆ ಹುಟ್ಟಿತ್ತು ಕಣ್ರೀ. ಗ್ರಾಮದಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ಕಂಬ ಬಿದ್ದು ಆತಂಕ ಆಗಿತ್ರೀ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಮಳೆ-ಗಾಳಿಗೆ ಸುಮಾರು 40 ಮನೆಗಳ ಚಾವಣಿ ಕಿತ್ತು ಹೋಗಿವೆ. 15 ವಿದ್ಯುತ್ ಕಂಬ ನೆಲಕ್ಕುರುಳಿವೆ. ಚಾವಣಿ ಹಾರಿದ್ದರಿಂದ ಮನೆಯಲ್ಲಿನ ಎಲ್ಲ ವಸ್ತುಗಳು ನೀರಿನಲ್ಲಿ ನೆನೆದಿವೆ. ಇದರಿಂದ ಜನರು ರಾತ್ರಿಯಿಡಿ ನರಕಯಾತನೆ ಅನುಭವಿಸಿದ್ದಾರೆ. ಒಂದೆಡೆ ಚಾವಣಿ ಕಿತ್ತುಹೋಗಿದ್ದರಿಂದ ಅವರಿವರ ಮನೆಗೆ ಮಕ್ಕಳನ್ನು ಬಿಟ್ಟು ಬಂದು ತಮ್ಮ ಮನೆಯ ಸಾಮಗ್ರಿ, ಧಾನ್ಯ, ಅಗತ್ಯ ವಸ್ತುಗಳನ್ನು ರಕ್ಷಿಸಿಕೊಳ್ಳಲು ರಾತ್ರಿಯಿಡಿ ಪರದಾಡಿದ್ದಾರೆ. ರಾತ್ರಿಯಿಡಿ ನಿದ್ರೆಯಿಲ್ಲದ ನಮ್ಮ ಜೀವನಕ್ಕೆ ಏನಾಯಿತು ಎಂದು ಬಯಲಿನಲ್ಲಿ ಕಾಲ ಕಳೆದು ಮರಗಿದ್ದಾರೆ. ವರ್ಷಕ್ಕಾಗುವಷ್ಟು ಸಂಗ್ರಹಿಸಿದ್ದ ಅಕ್ಕಿ, ಜೋಳ, ಗೋಧಿ ಹಾಗೂ ಇತರೆ ಸಾಮಗ್ರಿ, ಬಟ್ಟೆ, ದಾಖಲಾತಿಗಳು ಮಳೆಯ ನೀರಿಗೆ ನೆನೆದಿವೆ. ಇಡೀ ಮನೆ ನೀರಿನಿಂದ ಜಲಾವ್ರತವಾಗಿದೆ.

ಒಣಗಿಸಲು ಹರಸಾಹಸ:

ನೀರಿನಲ್ಲಿ ನೆನೆದಿರುವ ವಸ್ತುಗಳು ಸೋಮವಾರ ಬೆಳಗ್ಗೆ ಎತ್ತುಕೊಂಡು ಬಂದು ಬಿಸಿಲಿನಲ್ಲಿ ಒಣಗಿಸಿದ್ದಾರೆ. ಮನೆಯ ಚಾವಣಿ ದುರಸ್ತಿ ಕಾರ್ಯವು ನಡೆದಿದೆ. ಏಕಾಏಕಿ ಈ ಪರಿಸ್ಥಿತಿ ಬಂದಿದ್ದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಇದರ ಮಧ್ಯೆ ದುರಸ್ತಿ ವೆಚ್ಚವೂ ಹೊರೆಯಾಗಿದೆ.

ನೆಲಕ್ಕಚ್ಚಿದ ತೋಟ:

ಅಬ್ಬಿಗೇರಿ ಗ್ರಾಮದಲ್ಲಿ ರೈತರೊಬ್ಬರ ಪಪ್ಪಾಯ ತೋಟವೊಂದು ಸಂಪೂರ್ಣ ನೆಲಕಚ್ಚಿದೆ. ವಿಪರೀತ ಸುರಿದ ಗಾಳಿ, ಮಳೆಗೆ ತೋಟಕ್ಕೆ ಹಾನಿಯಾಗಿದೆ.ಮಳೆಯಿಂದ ಮನೆ ಮೇಲ್ಚಾವಣಿ ಹಾರಿದ್ದು ಮನೆಯೊಳಗಿನ ಎಲ್ಲ ವಸ್ತುಗಳು ನೆನೆದಿವೆ. ಅಡುಗೆ ಮಾಡಲು ಸಹ ಸಾಮಗ್ರಿಗಳಿಲ್ಲ. ವರ್ಷವಿಡಿ ದುಡಿದು ಸಂಗ್ರಹಿಸಿದ್ದ ಅಗತ್ಯ ವಸ್ತುಗಳು ಬಳಕೆಗೆ ಬಾರದೆ ಹಾಳಾಗಿವೆ. ನಮ್ಮ ಕಷ್ಟಕ್ಕೆ ಪರಿಹಾರ ಇಲ್ಲದಂತೆ ಆಗಿದೆ.

ಖಾಜಾಸಾಬ್, ಅಬ್ಬಿಗೇರಿ ಗ್ರಾಮಸ್ಥ ಅಬ್ಬಿಗೇರಿ ಗ್ರಾಮದಲ್ಲಿ 15 ವಿದ್ಯುತ್ ಕಂಬ ನೆಲಕ್ಕುರುಳಿವೆ. 40 ಮನೆಗಳ ಮೇಲ್ಚಾವಣಿ ಹಾರಿದ್ದು ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪಿಡಿಒ ಪಂಚನಾಮೆ ಮಾಡುತ್ತಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಒದಗಿಸಿಕೊಡಲಾಗುವುದು.

ವಿಠಲ್ ಚೌಗಲಾ, ತಹಸೀಲ್ದಾರ್‌ ಕೊಪ್ಪಳ

Share this article