ಕನ್ನಡಪ್ರಭ ವಾರ್ತೆ ಪುತ್ತೂರು
ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಕೃಷ್ಣವೇಣಿ ಮುಳಿಯ ಮುತುವರ್ಜಿಯಲ್ಲಿ, ಕಾಸರಗೋಡಿನ ಲೇಖಕಿ ಶೀಲಾ ಲಕ್ಷ್ಮೀ ರಚಿಸಿದ ಕೃತಿ ‘ಕುಂಕುಮ ಮಹತಿ’ ಲೋಕಾರ್ಪಣೆ ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಚೇರಿ ಸಭಾಂಗಣದಲ್ಲಿ ನಡೆಯಿತು.ದೇವಾಲಯ ಸಂವರ್ಧನ ಸಮಿತಿ ಮಂಗಳೂರು ವಿಭಾಗ, ಮುಳಿಯ ಪ್ರತಿಷ್ಠಾನ ಪುತ್ತೂರು ಸಹಯೋಗದಲ್ಲಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಧಾರ್ಮಿಕ ಚಿಂತಕ ಕಶೆಕೋಡಿ ಸೂರ್ಯನಾರಾಯಣ ಭಟ್, ಮಹತಿ ಎಂದರೆ ಮಹತ್ವದಲ್ಲಿ ದೊಡ್ಡದು. ಗುಣದಲ್ಲಿ ಜೇಷ್ಠತ್ವ ಮುಖ್ಯ. ಕುಂಕುಮದ ಮಹತ್ವ ಕೃತಿಯಲ್ಲಿ ಕುಂಕುಮಕ್ಕಿಂತ ಹೆಚ್ಚು ಲಲಿತೆಯ ಮಾಹಿತಿಯು ಇದೆ. ಕುಂಕುಮ ದ ಬಗ್ಗೆ ಬರೆಯಬೇಕಾದರೆ ತಾಯಿ, ಜಗನ್ಮಾತೆಯ ಉಲ್ಲೇಖವೂ ಬೇಕು ಎಂದರು.
ಲೇಖಕಿ ಶೀಲಾ ಲಕ್ಷ್ಮಿ ಕೃತಿಯ ಪರಿಚಯ ಮಾಡಿ, ಕರಾವಳಿ ಭಾಗದಲ್ಲಿ ಜನ ಜೀವನದಲ್ಲಿ ನೀತಿ-ನಿಯಮ, ಕಟ್ಟು ಪಾಡುಗಳನ್ನು ಆಚರಿಸುತ್ತಾ ಬಂದಿದ್ದೇವೆ. ಇವು ನಂಬಿಕೆ ಆಧಾರದಲ್ಲಿ ನಿಂತಿವೆ. ಹಿಂದೆಯೂ ಕುಂಕುಮ ಧಾರಣೆ ಕಡ್ಡಾಯವಾಗಿತ್ತು.ಸಾವಯವ ಕುಂಕುಮವನ್ನು ಮಕ್ಕಳಿಗೆ ತಿಲಕವಿಡುವ ಮೂಲಕ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅನಾವರಣಗೊಳಿಸಿದರು. ಧಾರ್ಮಿಕ ಶಿಕ್ಷಣ ಬೋಧಿಸುವ ಗುರುಗಳಾದ ಡಾ. ವಿಜಯ ಸರಸ್ವತಿ ಹಾಗೂ ಶಂಕರಿ ಶರ್ಮ ಅವರನ್ನು ಗೌರವಿಸಲಾಯಿತು.
ದೇವಾಲಯ ಸಂವರ್ಧನ ಸಮಿತಿಯ ವಿಭಾಗ ಪ್ರಮುಖ್ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್, ದೇವಾಲಯ ಸಂವರ್ಧನ ಸಮಿತಿ ಮಂಗಳೂರು ವಿಭಾಗ ಪ್ರಮುಖ್ ಗಣೇಶ ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೃಷ್ಣವೇಣಿ ಪ್ರಸಾದ್ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಸ್ನಾತಕೋತ್ತರ ವಿಭಾಗ ದ ಡೀನ್ ಡಾ. ವಿಜಯ ಸರಸ್ವತಿ ನಿರ್ವಹಿಸಿದರು.ಕೃತಿ ಲೋಕಾರ್ಪಣೆಯ ಬಳಿಕ ಭಗವತ್ ಭಕ್ತ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.