ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಗಳ ನಿಜ ಬಣ್ಣ ಬಯಲಾಗುತ್ತಿದೆ. ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಬಿದ್ದು ರಸ್ತೆ ಯಾವುದು, ಗುಂಡಿ ಯಾವುದು ಎಂಬಂತಾಗಿದೆ. ಇದರಿಂದ ವಾಹನ ಸವಾರರು ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಜನಪ್ರತಿನಿಧಿಗಳು, ಅಧಿಕಾರಿಗಳ ನಿಷ್ಕಾಳಜಿಯಿಂದ ಕೆಲ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಈ ಕುರಿತು ಅವರಿಗೆ ಮಾಹಿತಿ ಇದ್ದರೂ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ತೆಗ್ಗು-ಗುಂಡಿಗಳಿರುವ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದ ಕಾರಣ ಸವಾರರು ಜನಪ್ರತಿನಿಧಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.ತಾಲೂಕಿನ ಹಿರೇಮನ್ನಾಪುರ ಗ್ರಾಮದಿಂದ ಜುಮಲಾಪುರಕ್ಕೆ ತಲುಪುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಲ್ಲಿ ತೆಗ್ಗುಗಳು ಬಿದ್ದು ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ. ಈ ರಸ್ತೆ ಮೂಲಕ ಬಹುತೇಕ ರೈತರು ಜಮೀನುಗಳಿಗೆ ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ ಮೂಲಕ ತೆರಳುತ್ತಿದ್ದಾರೆ. ಇವರೆಲ್ಲ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಮಳೆ ಆರಂಭವಾಗಿದ್ದು ಶೀಘ್ರದಲ್ಲಿ ರಸ್ತೆ ದುರಸ್ತಿ ಮಾಡಬೇಕಿದೆ. ಇಲ್ಲವಾದರೆ ಮಳೆ ನೀರು ನಿಂತುಕೊಂಡು ರಸ್ತೆಯನ್ನೇ ಹುಡುಕಾಡಬೇಕಾದ ಸ್ಥಿತಿ ಬರಬಹುದೆಂದು ವಾಹನ ಸವಾರರು ಹೇಳುತ್ತಿದ್ದಾರೆ.ನಾಲ್ಕು ವರ್ಷಗಳ ಹಿಂದೆ ಅಮರೇಗೌಡ ಪಾಟೀಲ ಬಯ್ಯಾಪುರ ಶಾಸಕರಾಗಿದ್ದಾಗ ಈ ರಸ್ತೆ ನಿರ್ಮಿಸಲಾಗಿತ್ತು. ನಂತರದ ದಿನಗಳಲ್ಲಿ ಈ ರಸ್ತೆಯ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಹಿರೇಮನ್ನಾಪುರದ ನಿವಾಸಿಗಳು ಆರೋಪಿಸಿದ್ದಾರೆ.
ಸುಮಾರು ಎಂಟು ಕಿಲೋ ಮೀಟರ್ ದೂರದ ಈ ರಸ್ತೆಯಲ್ಲಿ ತೆಗ್ಗು-ಗುಂಡಿಗಳು ಒಂದೆಡೆಯಾದರೆ, ರಸ್ತೆ ಅಕ್ಕಪಕ್ಕದಲ್ಲಿ ಗಿಡ-ಕಂಠಿ ಬೆಳೆದು ನಿಂತಿವೆ. ಇದರಿಂದ ಎದುರು ಬದುರು ವಾಹನ ಬಂದರೆ ಸಂಚರಿಸಲು ಆಗುತ್ತಿಲ್ಲ. ರಸ್ತೆ ದುರಸ್ತಿ ಕೈಗೊಳ್ಳುವ ಜತೆಗೆ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡ-ಕಂಠಿಗಳನ್ನು ಕತ್ತರಿಸಿ ಸವಾರರಿಗೆ ಅನುಕೂಲ ಮಾಡಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಹಿರೇಮನ್ನಾಪುರದಿಂದ ಜುಮಲಾಪುರ ವರೆಗಿನ ಸುಮಾರು 8 ಕಿಲೋ ಮೀಟರ್ ರಸ್ತೆಯಲ್ಲಿ ನೂರಾರು ತೆಗ್ಗು ಗುಂಡಿಗಳು ಬಿದ್ದಿವೆ. ಇದರಿಂದ ಗುಂಡಿಯಲ್ಲಿ ರಸ್ತೆ ಹುಡುಕುವಂತೆ ಆಗಿದೆ. ಮಳೆಯಿಂದ ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದು ಬೈಕ್ ಚಲಾಯಿಸುವಾಗ ಹಲವಾರು ಜನರು ಬಿದ್ದಿದ್ದಾರೆ. ತಕ್ಷಣ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕು.ಶರಣಪ್ಪ ಹಂಚಿನಾಳ ವಾಹನ ಸವಾರನಮ್ಮ ಜಮೀನುಗಳಿಗೆ ತೆರಳಲು ಇದು ಮುಖ್ಯ ರಸ್ತೆಯಾಗಿದೆ. ಇದರಿಂದ ಮಳೆಗಾಲದಲ್ಲಿ ಜಮೀನು ತಲುಪುವುದೇ ದುಸ್ತರವಾಗಿದೆ. ಮಳೆಗಾಲ ಆರಂಭವಾಗುವ ಮೊದಲು ಶಾಸಕರು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮಳೆಗಾಲದಲ್ಲಿ ಜಮೀನಿಗೆ ತೆರಳುವುದು ಕಷ್ಟವಾಗಲಿದೆ.
ಹನಮಪ್ಪ ಕುರಿ ರೈತ