ಬಾಲ್ಯ ವಿವಾಹ ತಡೆಗೆ ಅಗತ್ಯ ಕ್ರಮಕೈಗೊಳ್ಳಿ

KannadaprabhaNewsNetwork | Published : Apr 28, 2025 11:49 PM

ಸಾರಾಂಶ

ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು, ತಮ್ಮ ವ್ಯಾಪ್ತಿಗಳಲ್ಲಿ ನಡೆಯುವ ಸಾಮೂಹಿಕ ಮತ್ತು ವೈಯಕ್ತಿಕ ಮದುವೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಳ್ಳಬೇಕು. ಬಾಲ್ಯ ವಿವಾಹ ನಡೆಯದಂತೆ ನಿಯಮಾನುಸಾರ ಕಾರ್ಯ ಪ್ರವೃತ್ತರಾಗಬೇಕು.

ಕನಕಗಿರಿ:

ಬಾಲ್ಯ ವಿವಾಹ ನಡೆಯದಂತೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುವ ಜತೆಗೆ ವಿವಾಹವಾಗುವ ಯುವಕ-ಯುವತಿಯರ ಜನ್ಮ ದಿನಾಂಕವುಳ್ಳ ದಾಖಲೆ ಪರಿಶೀಲಿಸಬೇಕು ಎಂದು ತಹಸೀಲ್ದಾರ್‌ ವಿಶ್ವನಾಥ ಮುರುಡಿ ಸೂಚಿಸಿದರು.

ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ಕುಡಿಯುವ ನೀರು, ಬಾಲ್ಯ ವಿವಾಹ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು, ತಮ್ಮ ವ್ಯಾಪ್ತಿಗಳಲ್ಲಿ ನಡೆಯುವ ಸಾಮೂಹಿಕ ಮತ್ತು ವೈಯಕ್ತಿಕ ಮದುವೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಳ್ಳಬೇಕು. ಬಾಲ್ಯ ವಿವಾಹ ನಡೆಯದಂತೆ ನಿಯಮಾನುಸಾರ ಕಾರ್ಯ ಪ್ರವೃತ್ತರಾಗಬೇಕು. ವಧು-ವರರ ಬಗ್ಗೆ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಪಂ ಕಾರ್ಯನಿರ್ವಾಹಕಾಧಿಕಾರಿ ರಾಜಶೇಖರ ಮಾತನಾಡಿ, ಮಕ್ಕಳ ಮೇಲಾಗುವ ದೌರ್ಜನ್ಯ ತಡೆಗಟ್ಟಲು ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸಲು ಕಾರ್ಯಕ್ರಮ ನಡೆಸಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೂ, ಇಲಾಖೆಗಳ ಗಮನಕ್ಕೆ ಬಾರದಂತೆ ಬಾಲ್ಯ ವಿವಾಹಗಳು ನಡೆಯುತ್ತಿವೆ. ತಾಲೂಕಿನ ಎಲ್ಲ ವಲಯ, ಗ್ರಾಮ ಮಟ್ಟದಲ್ಲಿರುವ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮಗಳ ಮೂಲಕ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಬಾಲ್ಯ ವಿವಾಹ ತಡೆಯಲಾಗುವುದು ಎಂದು ತಿಳಿಸಿದರು.

ಈ ವೇಳೆ ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಕಂದಾಯ ನಿರೀಕ್ಷಕಾದ ಮಂಜುನಾಥ ಹಿರೇಮಠ, ಹನುಮಂತಪ್ಪ, ರವಿಕುಮಾರ ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಲು ಸಾಧ್ಯ. ಬಾಲ್ಯ ವಿವಾಹ ತಡೆಗೆ ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ 1098 ಹಾಗೂ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು.

ವಿರೂಪಾಕ್ಷ ಸಿಡಿಪಿಒ, ಕನಕಗಿರಿ

Share this article