ಗಜೇಂದ್ರಗಡ ಪುರಸಭೆ 7 ಸದಸ್ಯರ ಸದಸ್ಯತ್ವ ರದ್ದತಿ ಅರ್ಜಿ ವಜಾ

KannadaprabhaNewsNetwork | Published : Apr 28, 2025 11:49 PM

ಸಾರಾಂಶ

ಗಜೇಂದ್ರಗಡ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಕಾಂಗ್ರೆಸ್ ಬೆಂಬಲಿಸಿದ 7 ಜನರು ಸದಸ್ಯತ್ವ ರದ್ದತಿ ತೂಗುಕತ್ತಿಯಿಂದ ಪಾರಾಗಿದ್ದಾರೆ.

ಗಜೇಂದ್ರಗಡ:ಇಲ್ಲಿಯ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಕಾಂಗ್ರೆಸ್ ಬೆಂಬಲಿಸಿದ 7 ಜನರು ಸದಸ್ಯತ್ವ ರದ್ದತಿ ತೂಗುಕತ್ತಿಯಿಂದ ಪಾರಾಗಿದ್ದಾರೆ.

ಸದಸ್ಯತ್ವ ರದ್ದುಗೊಳಿಸುವಂತೆ ಬಿಜೆಪಿ ದಾಖಲಿಸಿದ ಅರ್ಜಿಯನ್ನು ಜಿಲ್ಲಾಧಿಕಾರಿಗಳು ವಜಾಗೊಳಿಸಿ, ಆತಂಕದಲ್ಲಿ ಇದ್ದವರಿಗೆ ನಿರಾಳತೆ ನೀಡಿದ್ದಾರೆ.

ಕರ್ನಾಟಕ ಸ್ಥಳೀಯ ಪ್ರಾಧಿಕಾರಿಗಳ (ಪಕ್ಷಾಂತರ ನಿಷೇಧ) ಕಾಯ್ದೆ ೧೯೮೭ರ ಕಲಂ೪ ಅಡಿಯಲ್ಲಿ ರದ್ದು ಪಡಿಸುವಂತೆ ಪ್ರಕರಣ ದಾಖಲಿಸಿದ್ದರಿಂದ ಪುರಸಭೆ ಸದಸ್ಯರಾದ ವಿಜಯಾ ಮಾಳಗಿ, ದ್ರಾಕ್ಷಾಯಿಣಿ ಚೋಳಿನ, ಕೌಶರಬಾನು ಹುನಗುಂದ, ಮುದಿಯಪ್ಪ ಮುಧೋಳ, ಸುಭಾಸ ಮ್ಯಾಗೇರಿ, ಶರಣಪ್ಪ ಉಪ್ಪಿನಬೆಟಗೇರಿ, ಲಕ್ಷ್ಮೀ ಮುಧೋಳ ಅವರಿಗೆ ಜ.೨ರಂದು ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದ್ದರಿಂದ ತಮ್ಮ ನ್ಯಾಯವಾದಿಗಳ ಮುಖಾಂತರ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ವಿಚಾರಣೆಗೆ ಸದಸ್ಯರು ಹಾಜರಾಗಿದ್ದರು. ವರ್ಷಾಂತ್ಯಕ್ಕೆ ಎದುರಾಗುವ ಪುರಸಭೆ ಚುನಾವಣೆ ಹಿನ್ನೆಲೆ ಸದಸ್ಯತ್ವ ರದ್ದು ಅರ್ಜಿ ವಿಚಾರಣೆಯು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.

ಪುರಸಭೆ ೭ ಸದಸ್ಯರ ಸದಸ್ಯತ್ವ ರದ್ದಾಗಬಾರದು ಅದು ಕಾನೂನು ಪರವಾಗಿದೆ ಎಂದು ಸದಸ್ಯರ ಪರವಾಗಿ ಡಿ.ಕೆ. ದೇಶಪಾಂಡೆ, ಎಸ್.ಎಂ. ಡಂಬಳ ಹಾಗೂ ಎ.ಜಿ. ತೆಗ್ಗಿನಕೇರಿ ವಾದ ಮಂಡಿಸುತ್ತ, ಏ.೨೮ರಂದು ಪ್ರಕಟವಾಗಿರುವ ಆದೇಶದಲ್ಲಿ ಗಜೇಂದ್ರಗಡ ಪುರಸಭೆ ೭ ಸದಸ್ಯರ ಸದಸ್ಯತ್ವ ರದ್ದು ಅರ್ಜಿಯನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯವು ಅರ್ಜಿದಾರರು ದೂರಿನೊಂದಿಗೆ ಸಲ್ಲಿಸಿದ ದಾಖಲೆಗಳಲ್ಲಿ ರಾಜ್ಯಾಧ್ಯಕ್ಷರ ಪತ್ರ, ಪಕ್ಷದ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ದಾಖಲೆಗಳನ್ನು ಸಲ್ಲಿಸಿಲ್ಲ. ಹೀಗಾಗಿ ವಿಪ್‌ ವ್ಯಾಖ್ಯಾನದಲ್ಲಿ ಬರುವದಿಲ್ಲ. ಆದ್ದರಿಂದ ಅರ್ಜಿದಾರರು ಜಾರಿ ಮಾಡಿದ್ದೇನೆ ಎನ್ನುವ ವಿಪ್ ಅಧಿಕೃತ ವಿಪ್ ಆಗಿರುವುದಿಲ್ಲ. ಅರ್ಜಿದಾರರ ಪಕ್ಷದ ೧೮ ಚುನಾಯಿತ ಸದಸ್ಯರ ಪೈಕಿ ೭ ಚುನಾಯಿತ ಸದಸ್ಯರನ್ನು ಅನರ್ಹಗೊಳಿಸಬೇಕೆಂದು ಅರ್ಜಿ ಸಲ್ಲಿಸಲಾಗಿದೆ. ಇದು ಅರ್ಜಿದಾರರ ಪಕ್ಷದ ಚುನಾಯಿತ ಸದಸ್ಯರ ಸಂಖ್ಯೆಯ ಶೇ. ೩೮ಕ್ಕಿಂತ ಹೆಚ್ಚು. ಇದು ಪಕ್ಷದ ಚುನಾಯಿತ ಸದಸ್ಯರಲ್ಲಿ ಶೇ.೩೮ಕ್ಕಿಂತ ಹೆಚ್ಚು ಜನರು ಪಕ್ಷದ ನಿರ್ಧಾರವನ್ನು ಒಪ್ಪಿಲ್ಲ ಅಥವಾ ತಿಳಿದಿಲ್ಲ ಎಂದು ಪರೋಕ್ಷವಾಗಿ ಸೂಚಿಸುತ್ತದೆ. ಇದು ಚುನಾಯಿತ ಸದಸ್ಯರ ಗುಂಪಿನಲ್ಲಿ ವಾಸ್ತವಿಕ ವಿಭಜನೆ ಇದೆ ಎಂದು ಸೂಚಿಸುತ್ತದೆ ಎಂದು ಸೇರಿ ಇತರ ಕೆಲ ಕಾರಣಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

"ಪುರಸಭೆಯ ಕೊನೆಯ ಅವಧಿಗೆ ನಡೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ೭ ಸದಸ್ಯರು ಕಾಂಗ್ರೆಸ್ ಬೆಂಬಲ ನೀಡಿದ್ದರು. ಪರಿಣಾಮ ಬಂಡಾಯವೆದ್ದ ಸದಸ್ಯರ ಪೈಕಿ ಪುರಸಭೆ ಅಧ್ಯಕ್ಷ ಸ್ಥಾನ ಸುಭಾಸ ಮ್ಯಾಗೇರಿಗೆ ಹಾಗೂ ಕಾಂಗ್ರೆಸ್ ಸದಸ್ಯೆ ಸವಿತಾ ಬಿದರಳ್ಳಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಇತ್ತೀಚೆಗೆ ಮುದಿಯಪ್ಪ ಮುಧೋಳ ಸ್ಥಾಯಿ ಸಮಿತಿ ಚೇರರ್ಮನ್‌ರಾಗಿ ಅಧಿಕಾರದಲ್ಲಿದ್ದಾರೆ. "ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇಂದು ಪ್ರಕಟವಾದ ಆದೇಶ ಜನಾದೇಶದ ಗೆಲುವಾಗಿದೆ. ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲು ಮತ್ತಷ್ಟು ಬಲ ಬಂದಂತಾಗಿದೆ. ನಮಗೆ ನ್ಯಾಯ ಕೊಡಿಸಲು ಶ್ರಮಿಸಿದ ವಕೀಲರು ಹಾಗೂ ಬೆನ್ನಿಗೆ ನಿಂತ ಪಕ್ಷದ ಮುಖಂಡರಿಗೆ ಅಭಾರಿಯಾಗಿರುವೆ ಎಂದು ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಹೇಳಿದರು.

Share this article